ಬೆಳಗಾವಿಯಲ್ಲಿ 'ಪ್ರಾಮೀಸ್ ಪಾಲಿಟಿಕ್ಸ್': 'ಮತ'ಕ್ಕಾಗಿ ಮನೆ ಬಾಗಿಲಿಗೆ ಬಂದ ಭಗವಂತ; ಹೆಬ್ಬಾಳ್ಕರ್ ಬೆಂಬಲಿಗರಿಂದ ಗಿಫ್ಟ್-ತೆಂಗಿನಕಾಯಿ ಮೇಲೆ ಪ್ರಮಾಣ!

ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನೂ ನಾಲ್ಕು ತಿಂಗಳು ಬಾಕಿ ಇದೆ, ಆದರೆ ಈಗಾಗಲೇ ಹಲವು ಕ್ಷೇತ್ರಗಳಲ್ಲಿ ಚುನಾವಣಾ ಜ್ವರ ಆವರಿಸಿದೆ.
ಲಕ್ಷ್ಮಿ ಹೆಬ್ಬಾಳ್ಕರ್
ಲಕ್ಷ್ಮಿ ಹೆಬ್ಬಾಳ್ಕರ್

ಬೆಳಗಾವಿ: ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನೂ ನಾಲ್ಕು ತಿಂಗಳು ಬಾಕಿ ಇದೆ, ಆದರೆ ಈಗಾಗಲೇ ಹಲವು ಕ್ಷೇತ್ರಗಳಲ್ಲಿ ಚುನಾವಣಾ ಜ್ವರ ಆವರಿಸಿದೆ. ಹಲವು ಮುಂದಿ  ಚುನಾವಣೆಗಾಗಿ ದೇವರನ್ನು ಆವಾಹನೆ ಮಾಡುತ್ತಿದ್ದಾರೆ.  ಮತದಾರರಿಂದ  ಪ್ರಮಾಣ ಮಾಡಿಸಿಕೊಳ್ಳುತ್ತಿದ್ದಾರೆ,  ಪ್ರತಿಯಾಗಿ ಹಲವು ಉಡುಗೊರೆ ನೀಡುತ್ತಿದ್ದಾರೆ.

ಬೆಳಗಾವಿ ಗ್ರಾಮಾಂತರ ಕ್ಷೇತ್ರದಲ್ಲಿ ಹಾಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ  ಬೆಂಬಲಿಗರು ಚುನಾವಣೆಯಲ್ಲಿ ತಮಗೆ ಮತ ಹಾಕುವಂತೆ ಮತದಾರರಿಗೆ ದೇವರ ಹೆಸರಿನಲ್ಲಿ ಪ್ರಮಾಣ ಮಾಡಿಸುತ್ತಿದ್ದಾರೆ. ಅವರು ಆಣೆ ಪ್ರಮಾಣ ಮಾಡಿದ ನಂತರ, ಮತದಾರರಿಗೆ ಮನೆಯ ಪಾತ್ರೆಗಳು ಮತ್ತು ಬ್ಲೆಂಡರ್ಗಳನ್ನು ನೀಡಲಾಗುತ್ತದೆ.

ಹೆಬ್ಬಾಳ್ಕರ್ ಅವರ ಬೆಂಬಲಿಗರು ದೇವರ ಪ್ರತಿಜ್ಞೆಯನ್ನು  ಮಾಡಿಸುವ ಮತ್ತು ಆಮಿಷಗಳನ್ನು ನೀಡುವ ವೀಡಿಯೊಗಳು ವೈರಲ್ ಆಗಿವೆ. ಬೆಳಗಾವಿ ಗ್ರಾಮಾಂತರ ಕ್ಷೇತ್ರವು ತಪ್ಪು ಕಾರಣಗಳಿಗಾಗಿ ಜನಮನಕ್ಕೆ ಬರುತ್ತಿರುವುದು ಇದೇ ಮೊದಲಲ್ಲ. 2018ರ ಹಿಂದಿನ ವಿಧಾನಸಭೆ ಚುನಾವಣೆ ವೇಳೆ  ಲಕ್ಷ್ಮಿ ಹೆಬ್ಬಾಳ್ಕರ್  ಬೆಂಬಲಿಗರು ಮತದಾರರಿಗೆ ಕುಕ್ಕರ್ ಮತ್ತು ಗ್ಯಾಸ್ ಸ್ಟೌವ್ ಹಂಚಿದ್ದರು. ಇತ್ತೀಚೆಗಷ್ಟೇ ಬಿಜೆಪಿ ಟಿಕೆಟ್‌ ಆಕಾಂಕ್ಷಿ ಸಂಜಯ್‌ ಪಾಟೀಲ್‌ ಹಿಂಬಾಲಕರು ಟಿಫಿನ್‌ ಬಾಕ್ಸ್‌ ಮತ್ತು ಕ್ರಾಕರಿಗಳನ್ನು ನೀಡಿದ್ದರು.

ಆದರೆ ಕ್ಷೇತ್ರದ ಸಂತಿ ಬಸ್ತವಾಡ, ಹಿರೇ ಬಾಗೇವಾಡಿ ಮತ್ತಿತರ ಗ್ರಾಮಗಳಲ್ಲಿ ಹೆಬ್ಬಾಳ್ಕರ್ ಬೆಂಬಲಿಗರು ಅನುಸರಿಸುತ್ತಿರುವ ವಿಧಾನ ಸಾಕಷ್ಟು ವಿಶಿಷ್ಟವಾಗಿದೆ.  ಹೆಬ್ಬಾಳ್ಕರ್ ತಂಡ ಪವಿತ್ರವಾದ ತೆಂಗಿನಕಾಯಿ ಮತ್ತು ಅರಿಶಿನವನ್ನು ಹಿಡಿದುಕೊಂಡು ಮನೆ-ಮನೆಗೆ ಹೋಗುತ್ತಾರೆ. ತೆಂಗಿನಕಾಯಿಯನ್ನು ಮುಟ್ಟಿ ಹಾಲಿ ಶಾಸಕರಿಗೆ ತಮ್ಮ ಮತ ಹಾಕುವುದಾಗಿ ಮತದಾರರಿಂದ  ಪ್ರತಿಜ್ಞೆ ಮಾಡಿಸಿಕೊಳ್ಳುತ್ತಿದ್ದಾರೆ.  ಒಮ್ಮೆ ಪ್ರತಿಜ್ಞೆ ಮಾಡಿದರೆ ಮತದಾರರ ಮನೆಗಳಿಗೆ  ಗಿಫ್ಟ್ ಗಳು ಹರಿದು ಬರುತ್ತವೆ.

ಆದರೆ ಕೆಲವು ಹಳ್ಳಿಗಳಲ್ಲಿ ಹೆಬ್ಬಾಳ್ಕರ್ ಬೆಂಬಲಿಗರು ಅನುಸರಿಸುತ್ತಿರುವ ಈ ನಡೆಗೆ ಹಲವು ಯುವಕರು ವಿರೋಧ ವ್ಯಕ್ತ ಪಡಿಸಿದ್ದಾರೆ. ಮತದಾನ ನಮ್ಮ ಆಯ್ಕೆಯಾಗಿದೆ. ನಾವು ಮತದಾನದ ಹಕ್ಕನ್ನು ಕಾಯ್ದಿರಿಸಿದ್ದೇವೆ. ಕಳೆದ ಐದು ವರ್ಷಗಳಲ್ಲಿ ನಮ್ಮ ಪ್ರದೇಶಗಳಿಗೆ ಸರಿಯಾದ ರಸ್ತೆ ನಿರ್ಮಾಣವಾಗಿಲ್ಲ. ನಾವು ದುಬಾರಿ ಉಡುಗೊರೆಗಳನ್ನು ಬಯಸುವುದಿಲ್ಲ, ಆದರೆ ಮೂಲಭೂತ ಸೌಕರ್ಯಗಳನ್ನು ನಿರೀಕ್ಷಿಸುತ್ತೇವೆ. ದೇವರ ಹೆಸರಿನಲ್ಲಿ ಜನರನ್ನು ಬ್ಲಾಕ್ ಮೇಲ್ ಮಾಡುವುದನ್ನು ನಿಲ್ಲಿಸಿ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಚುನಾಯಿತ ಪ್ರತಿನಿಧಿಗಳು ಧಾರ್ಮಿಕ ಭಾವನೆಗಳೊಂದಿಗೆ ಆಟವಾಡುವ ಮೂಲಕ ಉಚಿತ ಕೊಡುಗೆಗಳನ್ನು ನೀಡುವ ಬದಲು ಜನರ ಸಮಸ್ಯೆಗಳನ್ನು ಪರಿಹರಿಸಿ ಸೌಲಭ್ಯಗಳನ್ನು ಒದಗಿಸಬೇಕು,ಎಂದು ಮತದಾರರು ಆಗ್ರಹಿಸಿದ್ದಾರೆ. ಈ ಸಂಬಂಧ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಸಂಪರ್ಕಿಸಲು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ತಂಡ ಪ್ರಯತ್ನಿಸಿತು, ಆದರೆ ಅವರು ಕರೆ ಸ್ವೀಕರಿಸಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com