
ಬೆಂಗಳೂರು: ಸಿದ್ದರಾಮಯ್ಯ ಮತ್ತು ಡಿಕೆ.ಶಿವಕುಮಾರ್ ಒಂದು ಮಾಡುವ ಪ್ರಯತ್ನದಲ್ಲಿ ಕಾಂಗ್ರೆಸ್ ಹೈಕಮಾಂಡ್ ಸೋತಿದ್ದು, ಬಸ್ ಯಾತ್ರೆ ಎಂಬುದು ಅದರ ಮುಂದುವರೆದ ಭಾಗವಷ್ಟೇ ಎಂದು ರಾಜ್ಯ ಬಿಜೆಪಿ ಬುಧವಾರ ವ್ಯಂಗ್ಯವಾಡಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಬಿಜೆಪಿ, ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ.ಶಿವಕುಮಾರ್ ಅವರದ್ದು ಪರಸ್ಪರ ಮಾರಕ ಜತೆಗಾರಿಕೆ. ಅವರನ್ನು ಒಂದು ಮಾಡುವ ಪ್ರಯತ್ನವನ್ನು ಕೈ ಹೈಕಮಾಂಡ್ ಹಲವು ಬಾರಿ ಮಾಡಿ ಸೋತಿದೆ. ಬಸ್ ಯಾತ್ರೆ ಎಂಬುದು ಅದರ ಮುಂದುವರಿದ ಭಾಗದ ಪ್ರಯೋಗವಷ್ಟೇ ಎಂದು ಹೇಳಿದೆ.
ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಜಂಟಿ ರಥಯಾತ್ರೆ ವಿರುದ್ಧ ಪ್ರಜಾದ್ರೋಹಯಾತ್ರೆ ಎಂಬ ಹ್ಯಾಷ್ ಟ್ಯಾಗ್ ನ್ನು ಬಿಜೆಪಿ ಟ್ವಿಟರ್ ನಲ್ಲಿ ಆರಂಭಿಸಿದೆ.
ಪ್ರಜಾಧ್ವನಿ ಅರಿಯಲು ಕಾಂಗ್ರೆಸ್'ಗಿದು ಉತ್ತಮ ಅವಕಾಶ. ಐದು ವರ್ಷಗಳ ಸಿದ್ದರಾಮಯ್ಯ ಆಡಳಿತಕ್ಕೆ ಬೇಸತ್ತು ಮತದಾರರು ನಿಮ್ಮ ಪಕ್ಷವನ್ನು ಅಧಿಕಾರದಿಂದ ದೂರ ಇರಿಸಿದರು. ಈಗ ನೆಮ್ಮದಿಯಿಂದ ಬದುಕುತ್ತಿರುವ ಜನರಲ್ಲಿ ಮತ್ತೆ ಭಯ ಹುಟ್ಟಿಸುವ ಕೆಲಸಕ್ಕೆ ಮುಂದಾಗಿದ್ದೀರಿ ಎಂದು ವಾಗ್ದಾಳಿ ನಡೆಸಿದೆ.
ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ, ನಿಮ್ಮ ಅಧಿಕಾರಾವಧಿಯಲ್ಲಿ ಡಿಕೆ ರವಿಯವರಂಥ ನಿಷ್ಠಾವಂತ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಕೋಲಾರದ ಜನತೆ ಮರೆತಿಲ್ಲ. ಆ ಕಡೆಗೂ ನಿಮ್ಮ ಬಸ್ ಹೋಗಲಿ, ಜನರ ನೋವು, ಸಂಕಟ ಏನೆಂದು ನಿಮಗೂ ತಿಳಿಯಬಹುದು ಎಂದು ಹೇಳಿದೆ.
ಇದೇ ವೇಳೆ ಸಿದ್ದರಾಮಯ್ಯ ಅವರ ಕೋಲಾರ ಆಯ್ಕೆಯನ್ನು ಚಿತ್ರವೊಂದನ್ನು ಹಾಕುವ ಮೂಲಕ ವ್ಯಂಗ್ಯವಾಡಿರುವ ಬಿಜೆಪಿ, ಕ್ಷೇತ್ರಕ್ಕಾಗಿ ಊರೆಲ್ಲ ಹುಡುಕಾಡಿ, ಮಗನ ಕ್ಷೇತ್ರದ ಮೇಲೂ ಕಣ್ಣಾಕಿ, ಕೊನೆಗೂ ಕೋಲಾರದಲ್ಲಿ ಲ್ಯಾಂಡ್ ಆದ ಸಿದ್ದರಾಮಯ್ಯನವರು. ನಿಟ್ಟುಸಿರು ಬಿಟ್ಟ ಯತೀಂದ್ರ ಸಿದ್ದರಾಮಯ್ಯ ಎಂದು ಹೇಳಿದೆ.
Advertisement