
ಬೆಂಗಳೂರು: ಒಂದೆಡೆ ಹುಬ್ಬಳ್ಳಿಯಲ್ಲಿ ಆಯೋಜಿಸಲಾಗಿರುವ ರಾಷ್ಟ್ರೀಯ ಯುವ ಜನೋತ್ಸವ ಉದ್ಘಾಟನೆಗೆಂದು ಪ್ರಧಾನಿ ನರೇಂದ್ರ ಮೋದಿ ಹುಬ್ಬಳ್ಳಿಗೆ ಆಗಮಿಸಿದ್ದು, ರೋಡ್ ಶೋ ನಡೆಸುತ್ತಿದ್ದಾರೆ. ಇತ್ತ ರಾಜ್ಯ ಕಾಂಗ್ರೆಸ್ ಮೋದಿ ವಿರುದ್ಧ ಸರಣಿ ಟ್ವೀಟ್ ಮೂಲಕ ಕಿಡಿಕಾರಿದೆ. #ModiMouna ಎಂದಿರುವ ಕಾಂಗ್ರೆಸ್, ಹಲವಾರು ವಿಚಾರಗಳಿಗೆ ಸಂಬಂಧಿಸಿದಂತೆ ಮಾತನಾಡುವಿರಾ ಎಂದು ಪ್ರಶ್ನಿಸಿದೆ.
ಮಾನ್ಯ ನರೇಂದ್ರ ಮೋದಿಯವರೇ, ಸ್ಯಾಂಟ್ರೋ ರವಿಯನ್ನು ಬಿಜೆಪಿ ಸರ್ಕಾರ 'ಚೀಫ್ ಬ್ರೋಕರ್' ಆಗಿ ನೇಮಿಸಿಕೊಂಡಿದೆ. ಎಲ್ಲಾ ವರ್ಗಾವಣೆಗಳಿಗೆ ಆತನೇ ಚೀಫ್ ಬ್ರೋಕರ್ ಆಗಿದ್ದಾನೆ. ನಿಮ್ಮದೇ ಪಕ್ಷದ ಕಾರ್ಯಕರ್ತನ 'ಸ್ಯಾಂಟ್ರೋ ಸಾಧನೆ' ಬಗ್ಗೆ ನಿಮ್ಮ ಸರ್ಕಾರದ ಸಹಬಾಗಿತ್ವದ ಬಗ್ಗೆ ಬಸವರಾಜ ಬೊಮ್ಮಾಯಿ ಅವರಿಂದ ಮಾಹಿತಿ ಪಡೆದು ಮಾತಾಡುವಿರಾ ಎಂದು ಪ್ರಶ್ನಿಸಿದೆ.
ಮಹದಾಯಿ ಯೋಜನೆ ವಿರೋಧಿಸಿ, ಡಿಪಿಆರ್ ಒಪ್ಪಿಗೆಯನ್ನು ರದ್ದುಪಡಿಸುವಂತೆ ಗೋವಾ ಸಚಿವರ ನಿಯೋಗ ಮಾಡಿದ ಮನವಿಗೆ ಅಮಿತ್ ಶಾ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರಂತೆ. 'ಸಕಾರಾತ್ಮಕ' ಅಂದರೆ ಏನು ಬೊಮ್ಮಾಯಿ ಅವರೇ? ಕರ್ನಾಟಕಕ್ಕೆ ಅನ್ಯಾಯ ಮಾಡುವುದೇ? ಗೋವಾದ ಬಿಜೆಪಿ ಸರ್ಕಾರದ ವಿರೋಧಕ್ಕೆ ನರೇಂದ್ರ ಮೋದಿಯವರ ನಿಲುವು ಏನು? ಮೌನವೇಕೆ? #ModiMouna ಎಂದು ಕಾಂಗ್ರೆಸ್ ಕೇಳಿದೆ.
ವಿಧಾನಸೌಧದಲ್ಲಿ ₹10 ಲಕ್ಷ ಹಣದೊಂದಿಗೆ ಅಧಿಕಾರಿಯೊಬ್ಬರು ಸಿಕ್ಕಿಬಿದ್ದಿದ್ದರು. ವಿಧಾನ ಸೌಧ ಈಗ ವ್ಯಾಪಾರ ಸೌಧವಾಗಿದೆ. ಸರ್ಕಾರಿ ಹುದ್ದೆಗಳನ್ನು ರೇಟ್ ಕಾರ್ಡ್‌ನೊಂದಿಗೆ ಮಾರಾಟಕ್ಕಿಡಲಾಗಿದೆ. ಮೋದಿಯವರೇ, ಯುವಜನರ ನಿರುದ್ಯೋಗ, ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಒಂದು ಪದವಾದರೂ ಮಾತಾಡುವಿರಾ? ಎಂದಿದೆ.
ಮುಂದುವರಿದು, ಮೋದಿ ಅವರೇ, ದಾರವಾಡದಲ್ಲಿರುವ ಕೈಮಗ್ಗ ಧ್ವಜ ತಯಾರಕರ ಬದುಕಿಗೆ ಮಾರಕವಾಗುವಂತೆ ಚೀನಾ ಪಾಲಿಸ್ಟರ್ ಧ್ವಜಕ್ಕೆ ಅನುಮತಿ ನೀಡಿದ್ದೀರಿ. ಪರಂಪರಾಗತವಾಗಿ ಧ್ವಜ ತಯಾರಿಸುತ್ತಿದ್ದವರ ಬದುಕಿನ ಸಂಕಷ್ಟಗಳನ್ನು ಆಲಿಸುವಿರಾ? ಅವರ ಬಗ್ಗೆ ಮಾತಾಡದೆ ಮೌನವಹಿಸಿರುವುದೇಕೆ? ಎಂದು ಕಾಂಗ್ರೆಸ್ ಕಿಡಿಕಾರಿದೆ.
40 ಪರ್ಸೆಂಟ್ ಸರ್ಕಾರದ ಕಮಿಷನ್ ಕಿರುಕುಳಕ್ಕೆ ಸಂತೋಷ್ ಪಾಟೀಲ್ ಬರೆದ ಪತ್ರಕ್ಕೆ ತಮ್ಮ ಸ್ಪಂದನೆ ಶೂನ್ಯ. ತಾವು ಭ್ರಷ್ಟಾಚಾರಕ್ಕೆ ಮೌನದ ಮೂಲಕ ಬೆಂಬಲಿಸಿದ ಕಾರಣ ಮತ್ತೊಬ್ಬ ಗುತ್ತಿಗೆದಾರ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬಿಜೆಪಿ ಭ್ರಷ್ಟಾಚಾರಕ್ಕೆ ಬಲಿಯಾದ ಗುತ್ತಿಗೆದಾರರಾದ, ಸಂತೋಷ್, ಪ್ರಸಾದ್ ಕುಟುಂಬಗಳಿಗೆ ಸಾಂತ್ವಾನ ಹೇಳುವಿರಾ? ಎಂದು ಪ್ರಧಾನಿ ನರೇಂದ್ರ ಮೋದಿಯವರ ಮುಂದೆ ಸರಣಿ ಪ್ರಶ್ನೆಗಳನ್ನಿಟ್ಟಿದೆ.
Advertisement