
ಬೆಂಗಳೂರು: 2024ರ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಳ್ಳಲಿದೆ ಎಂಬ ಊಹಾಪೋಹ ದಟ್ಟವಾಗಿದ್ದು ಇಂದು ಮಾಜಿ ಸಿಎಂ ಬಿಜೆಪಿ ಹಿರಿಯ ನಾಯಕ ಬಿ ಎಸ್ ಯಡಿಯೂರಪ್ಪನವರ ಮಾತುಗಳು ಇದಕ್ಕೆ ಪುಷ್ಠಿ ನೀಡುತ್ತಿವೆ.
ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿಯವರು, ಮುಖ್ಯಮಂತ್ರಿಗಳ ಕಚೇರಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಮುಖ್ಯಮಂತ್ರಿ ಕಚೇರಿಯಲ್ಲಿ ಹಣಕ್ಕೆ ಡಿಮ್ಯಾಂಡ್ ಮಾಡುತ್ತಿದ್ದಾರೆ. ಶಾಸಕರ ಶಿಫಾರಸ್ಸು ತಂದರೆ ಸಾಲದು 30 ಲಕ್ಷ ದುಡ್ಡು ತನ್ನಿ ಎಂದು ಹೇಳುತ್ತಿದ್ದಾರೆ. ದುಡ್ಡು ಕೊಟ್ಟಿರುವವರು ಸಾಕ್ಷಿ ಕೊಡುತ್ತರಾ? ದುಡ್ಡು ಕೊಟ್ಟವರಿಗೆ ಕೆಲಸ ಆಗಬೇಕು ಹಾಗಾಗಿ ಯಾರು ಸಾಕ್ಷಿ ಕೊಡಲ್ಲ ಎಂದು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಅಲ್ಲದೆ ರಾಜ್ಯದಲ್ಲಿ ಜಿಎಸ್ ಟಿ ಬದಲಿಗೆ ಹೊಸ ತೆರಿಗೆ ವ್ಯವಸ್ಥೆ ಆರಂಭವಾಗಿದ್ದು ಅದಕ್ಕೆ ಯತೀಂದ್ರ ಸಿದ್ದರಾಮಯ್ಯ ತೆರಿಗೆ ವ್ಯವಸ್ಥೆ(YST) ಎಂದು ಹೆಸರಿಡಲಾಗಿದೆ ಎಂದು ಕುಮಾರಸ್ವಾಮಿ ಟೀಕಿಸಿದ್ದರು.
ಇಂದು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ವಿರುದ್ಧ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಕಾಂಗ್ರೆಸ್ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದರು.
ಈ ವೇಳೆ ಕುಮಾರಸ್ವಾಮಿಯವರು ಹೇಳಿರುವ ಮಾತುಗಳು ನಿಜ. ನಾನು ಕುಮಾರಸ್ವಾಮಿಯವರ ಹೇಳಿಕೆಗಳನ್ನು ಬೆಂಬಲಿಸುತ್ತೇನೆ. ಭವಿಷ್ಯದಲ್ಲಿ ಕುಮಾರಸ್ವಾಮಿ ಮತ್ತು ನಾವು ಒಟ್ಟಾಗಿ ಹೋರಾಡುತ್ತೇವೆ ಎಂದು ಹೇಳಿದರು.
ವಿಪಕ್ಷ ನಾಯಕನ ಆಯ್ಕೆ: ಕೇಂದ್ರದಿಂದ ವೀಕ್ಷಕರು ಇಂದು ಬರುತ್ತಿದ್ದು ವಿಪಕ್ಷನ ಆಯ್ಕೆ ಇನ್ನು ಒಂದೆರಡು ದಿನಗಳಲ್ಲಿ ತೀರ್ಮಾನವಾಗುತ್ತದೆ ಎಂದರು.
Advertisement