ವಿಪಕ್ಷ ನಾಯಕ ಯಾರು? ಕಾದು ನೋಡಿ, ಆ ಹುದ್ದೆ ಎಚ್ ಡಿಕೆ ಮನೆ ಬಾಗಿಲಿಗೆ ಬರುತ್ತೆ; ಲಕ್ಷ್ಮಣ ಸವದಿ ಭವಿಷ್ಯ

ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಬಿಜೆಪಿಯಲ್ಲಿ ಕಚ್ಚಾಡ್ತಿದ್ದಾರೆ, ನೋಡ್ತಾ ಇರಿ, ಕುಮಾರಸ್ವಾಮಿ ಅವರೇ ವಿರೋಧ ಪಕ್ಷದ ನಾಯಕ ಆಗ್ತಾರೆ. ವಿರೋಧ ಪಕ್ಷದ ನಾಯಕ ಸ್ಥಾನ ಜೆಡಿಎಸ್ ಮನೆ ಬಾಗಿಲಿಗೆ ಬರುತ್ತದೆ .
ಲಕ್ಷ್ಮಣ ಸವದಿ
ಲಕ್ಷ್ಮಣ ಸವದಿ

ಬೆಂಗಳೂರು:  ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಬಿಜೆಪಿಯಲ್ಲಿ ಕಚ್ಚಾಡ್ತಿದ್ದಾರೆ, ನೋಡ್ತಾ ಇರಿ, ಕುಮಾರಸ್ವಾಮಿ ಅವರೇ ವಿರೋಧ ಪಕ್ಷದ ನಾಯಕ ಆಗ್ತಾರೆ. ವಿರೋಧ ಪಕ್ಷದ ನಾಯಕ ಸ್ಥಾನ ಜೆಡಿಎಸ್ ಮನೆ ಬಾಗಿಲಿಗೆ ಬರುತ್ತದೆ ಎಂದು ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಸದನದಲ್ಲಿ ಭವಿಷ್ಯ ನುಡಿದ್ದಾರೆ.

ವಿಧಾನಸಭೆಯಲ್ಲಿ ‌ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯ ಸಂದರ್ಭದಲ್ಲಿ ಜೆಡಿಎಸ್ ಸದಸ್ಯ ಜಿಟಿ ದೇವೇಗೌಡ ಮಾತನಾಡುತ್ತಾ, ಬಿಎಸ್ ಯಡಿಯೂರಪ್ಪ ಅವರನ್ನ ಅಧಿಕಾರದಿಂದ ಇಳಿಸಿದ್ರು. ಆದರೆ ಅವರನ್ನು ಯಾಕೆ ಇಳಿಸಿದ್ರು ಅನ್ನೋದು ಗೊತ್ತಿಲ್ಲ.‌ ನರೇಂದ್ರ ಮೋದಿಯವರು ಬಿಟ್ರೆ ಯಾರಿಗೂ ಗೊತ್ತಿಲ್ಲ. ಲಕ್ಷ್ಮಣ್ ಸವದಿ ಅವರು ಉಪ ಮುಖ್ಯಮಂತ್ರಿ ಆಗಿದ್ದರು. ಸವದಿ ಅವರೇ ನಿಮಿಗಾದ್ರೂ ಗೊತ್ತಾ..? ಎಂದು ಪ್ರಶ್ನಿಸಿದರು.

ಈ ವೇಳೆ ಮಧ್ಯಪ್ರವೇಶ ಮಾಡಿದ ಲಕ್ಷ್ಮಣ ಸವದಿ,‌ ಬಿಎಸ್ ವೈ ಅವರನ್ನ ಯಾಕೆ ಇಳಿಸಿದ್ರು ಹೇಗೆ ಇಳಿಸಿದ್ರು ಅನ್ನೋದು ನಮಗಿಂತ ಹೆಚ್ಚು ನಿಮಗೆ ಗೊತ್ತಿದೆ. ನೀವು ಹೇಳ್ತಾ ಇಲ್ಲ ಅಷ್ಟೇ. ಆದರೆ ವಿರೋಧ ಪಕ್ಷದ ನಾಯಕ ಇಲ್ಲ ಅಂತ ಹೇಳುತ್ತಿದ್ದೀರಲ್ವಾ,‌ ಅದಕ್ಕೋಸ್ಕರನೇ ಎರಡನೇ ಸೀಟ್ ನಲ್ಲಿ ಯಾರೂ ಕೂರುತ್ತಿಲ್ಲ. ಸ್ಥಾನಕ್ಕಾಗಿ ಬಹಳ ಕಚ್ಚಾಡ್ತಾ ಇದ್ದಾರೆ ಆದರೆ ಪ್ರಯೋಜನ ಇಲ್ಲ. ಕುಮಾರಸ್ವಾಮಿ ಅವರು ಮಾತ್ರ ವಿರೋಧ ಪಕ್ಷದಲ್ಲಿ ಕೂತು ಕೆಲಸ ಮಾಡ್ತಾ ಇದ್ದಾರೆ. ಅದಕ್ಕಾಗಿಯೇ ಇನ್ನೂ ಆಯ್ಕೆ ಮಾಡಿಲ್ಲ ಅಂತ ಹೊರಗೆ ಚರ್ಚೆ ನಡೀತಾ ಇದೆ ಎಂದರು.

ಮಾಜಿ ಸಿಎಂ ಕುಮಾರಸ್ವಾಮಿ ಗೃಹ ಜ್ಯೋತಿ ಬಗ್ಗೆ ಮಾತನಾಡುವಾಗ ಯತ್ನಾಳ್​​​ ಪದೇ ಪದೇ ಎಂಟ್ರಿ ಕೊಟ್ರು. ಇದಕ್ಕೆ ಸಿಎಂ ಸಿದ್ದರಾಮಯ್ಯ, ಬಿಜೆಪಿ ಬುಡಕ್ಕೆ ವಿಪಕ್ಷ ಸ್ಥಾನದ ಕೆಂಡ ಕಟ್ಟಿದ್ರು. ನೀವು ಹೀಗೆ ಮಾತಾಡ್ತಿದ್ರೆ ಸಂಸದೀಯ ಪಟು ಆಗಲ್ಲ. ನಿಮ್ಮನ್ನು ವಿಪಕ್ಷ ನಾಯಕನಾಗೂ ಮಾಡಲ್ಲ. ಇದು ನನಗಿರುವ ಮಾಹಿತಿ ಅಂತ ಸೋರ್ಸ್​​​ ಬಿಟ್ಟುಕೊಡದೆ ಯತ್ನಾಳ್​​​ ಕಾಲೆಳೆದರು.

ಸಿದ್ದರಾಮಯ್ಯ ಏನು ಹೇಳುತ್ತಾರೋ ಅದು ನಡೆಯುವುದಿಲ್ಲ ಎಂದು ಯಟ್ನಾಳ್ ತಿರುಗೇಟು ನೀಡಿದರು. ಕುಮಾರಸ್ವಾಮಿ ಸಿಎಂ ಆಗಲು ಸಾಧ್ಯವೇ ಇಲ್ಲ ಎಂದು ಸಿದ್ದರಾಮಯ್ಯ ಈ ಹಿಂದೆ ಹೇಳಿದ್ದರು. ಆದರೆ ಅವರು 2018 ರಲ್ಲಿ ಮತ್ತೆ ಸಿಎಂ ಆದರು. ನಾನು ವಿಪಕ್ಷ ನಾಯಕನಾಗುವುದಿಲ್ಲ ಎಂದು ನೀವು ಹೇಳುತ್ತಿದ್ದೀರಿ... ಆದರೆ ನಾನು ವಿಪಕ್ಷ ನಾಯಕ ಆಗುತ್ತೇನೆ ಎಂದು ಯತ್ನಾಳ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com