ಕಮಲ-ದಳ ಮೈತ್ರಿ ಲೆಕ್ಕಾಚಾರ; ಶೀಘ್ರದಲ್ಲೇ ದೆಹಲಿಗೆ ಕುಮಾರಸ್ವಾಮಿ, ಎನ್‌ಡಿಎ ಸಭೆಯಲ್ಲಿ ಭಾಗಿಯಾಗ್ತಾರಾ?
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ಮುಂಬರುವ 2024ರ ಲೋಕಸಭೆ ಚುನಾವಣೆಗೆ ಬಿಜೆಪಿಯೊಂದಿಗೆ ಜೆಡಿಎಸ್ ಸಂಭಾವ್ಯ ಮೈತ್ರಿಯ ಸುಳಿವು ಬಿಟ್ಟುಕೊಟ್ಟಿದ್ದು, ಅವರು ಶೀಘ್ರದಲ್ಲೇ ರಾಷ್ಟ್ರ ರಾಜಧಾನಿಗೆ ಭೇಟಿ ನೀಡಲಿದ್ದಾರೆ ಮತ್ತು ಈ ನಿಟ್ಟಿನಲ್ಲಿ ಬಿಜೆಪಿ ವರಿಷ್ಠರೊಂದಿಗೆ ಚರ್ಚಿಸುತ್ತಿದ್ದಾರೆ ಎಂದು ರಾಜಕೀಯ ವಲಯದಿಂದ ಸುದ್ದಿ ಕೇಳಿಬರುತ್ತಿದೆ.
ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿ ಮಾಡಿಕೊಳ್ಳಬೇಕು ಎಂಬ ಭಾವನೆ ಜನರಲ್ಲಿದೆ. ಆದರೆ, ಈ ಭಾವನೆಗಳಿಗೆ ನಾವು ಹೇಗೆ ಸ್ಪಂದಿಸಬೇಕು ಎನ್ನುವುದನ್ನು ಪಕ್ಷದೊಳಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಿದ್ದೇವೆ. ಸದ್ಯ ಯಾವುದೇ ಬಿಜೆಪಿ ನಾಯಕರನ್ನು ಭೇಟಿ ಮಾಡಿಲ್ಲ. ಭೇಟಿ ಮಾಡುವುದಾದರೆ ಜನರಿಗೆ ತಿಳಿಸಿಯೇ ಮಾಡುತ್ತೇನೆ ಎಂದು ಶುಕ್ರವಾರ ಖಾಸಗಿ ಟಿವಿ ಚಾನೆಲ್‌ಗೆ ತಿಳಿಸಿದ್ದ ಅವರು, ಬಿಜೆಪಿಯೊಂದಿಗೆ ತಮ್ಮ ಪಕ್ಷವು ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯನ್ನು ಬಹಿರಂಗಪಡಿಸಿದ್ದಾರೆ.
ಇದಲ್ಲದೆ, ವಿಧಾನಸಭಾ ಚುನಾವಣೆಯ ನಂತರ, ಕುಮಾರಸ್ವಾಮಿ ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದಾರೆ ಎಂದು ವರದಿಯಾಗಿದೆ. ಈ ಸಭೆಯು ಜೆಡಿಎಸ್ ಮತ್ತು ಬಿಜೆಪಿ ನಡುವಿನ ಸಂಭಾವ್ಯ ಮೈತ್ರಿಯ ಬಗ್ಗೆ ಸುಳಿವು ನೀಡಿದೆ ಎನ್ನಲಾಗಿದೆ. ಬಿಜೆಪಿ ಇದೀಗ ಜುಲೈ 18ರಂದು ದೆಹಲಿಯಲ್ಲಿ ಎನ್‌ಡಿಎ ಮೈತ್ರಿ ಕೂಟಗಳ ಸಭೆ ಆಯೋಜಿಸಿದ್ದು, ಈ ಸಭೆಗೂ ಮುನ್ನವೇ ಕುಮಾರಸ್ವಾಮಿ ಅವರು ಶಾ ಅವರನ್ನು ಭೇಟಿಯಾಗಲಿದ್ದಾರೆ ಎನ್ನುವ ಊಹಾಪೋಹಗಳು ಹರಿದಾಡುತ್ತಿವೆ. ಇದರಿಂದಾಗಿ ಕುಮಾರಸ್ವಾಮಿ ಅವರು ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್‌ಗೆ 5-6 ಲೋಕಸಭಾ ಸ್ಥಾನಗಳನ್ನು ಕೇಳಬಹುದು ಎನ್ನಲಾಗಿದೆ.
2019ರ ಲೋಕಸಭಾ ಚುನಾವಣೆಯಲ್ಲಿ, ಜೆಡಿಎಸ್ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡು ಕೇವಲ ಒಂದು ಸ್ಥಾನವನ್ನು ಮಾತ್ರ ಗೆದ್ದುಕೊಂಡಿತು. ಹಾಸನ ಕ್ಷೇತ್ರದಲ್ಲಿ ಪ್ರಜ್ವಲ್ ರೇವಣ್ಣ ಅವರ ಗೆಲುವಿನೊಂದಿಗೆ ಜೆಡಿಎಸ್ ಖಾತೆ ತೆರೆದಿದ್ದರೆ, ಕಾಂಗ್ರೆಸ್ ಕೂಡ ಕೇವಲ ಒಂದು ಸ್ಥಾನವನ್ನಷ್ಟೇ ಗೆಲ್ಲುವಲ್ಲಿ ಶಕ್ತವಾಗಿತ್ತು. ಈ ವೇಳೆ ಬಿಜೆಪಿ 25 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಮಂಡ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಸುಮಲತಾ ಅಂಬರೀಶ್ ಸ್ವತಂತ್ರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು.
ವಿಧಾನಸಭೆ ಚುನಾವಣೆಯ ಸೋಲಿನಿಂದ ಕಂಗೆಟ್ಟಿರುವ ಬಿಜೆಪಿ, ಲೋಕಸಭಾ ಚುನಾವಣೆಯಲ್ಲಾದರೂ ಚೇತರಿಸಿಕೊಳ್ಳುವ ಲೆಕ್ಕಾಚಾರದಲ್ಲಿದ್ದರೆ, ಕಾಂಗ್ರೆಸ್ ಜೊತೆ ಸಂಬಂಧ ಹಳಸಿರುವುದರಿಂದ ಮತ್ತೆ ನೆಲೆ ಕಂಡುಕೊಳ್ಳಬೇಕಾದರೆ ಬಿಜೆಪಿ ಮೊರೆ ಹೋಗುವುದೇ ಸೂಕ್ತ ಎಂದು ದಳಪತಿಗಳು ನಿರ್ಧರಿಸಿದ್ದಾರೆ. ಹೀಗಾಗಿ, ಈ ಬಾರಿ ‘ಅಸ್ತಿತ್ವದ ಬಿಕ್ಕಟ್ಟು’ ಎದುರಿಸುತ್ತಿರುವ ಜೆಡಿಎಸ್ ಬಿಜೆಪಿ ಜತೆ ಹೋಗುವ ಸಾಧ್ಯತೆ ದಟ್ಟವಾಗಿದೆ ಎಂ ದು ಮೂಲಗಳು ತಿಳಿಸಿವೆ.
ಪ್ರಾದೇಶಿಕ ಪಕ್ಷದ ಉಳಿವಿಗಾಗಿ ಮುಂದಿರುವ ಆಯ್ಕೆಗಳನ್ನು ಅಳೆದು ತೂಗಬೇಕಾಗುತ್ತದೆ. ಹೀಗಾಗಿ ಬಿಜೆಪಿಯೊಂದಿಗಿನ ಮೈತ್ರಿಯ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಕುಮಾರಸ್ವಾಮಿ ಪರೋಕ್ಷವಾಗಿ ತಿಳಿಸಿದ್ದರು. ವಾಸ್ತವದಲ್ಲಿ ಕೇಸರಿ ಪಕ್ಷವು ಕೂಡ ಜೆಡಿಎಸ್ ಜೊತೆಗಿನ ಮೈತ್ರಿಯನ್ನು ತಳ್ಳಿಹಾಕುವ ಸಾಧ್ಯತೆಯು ಇಲ್ಲ.
ಇದಲ್ಲದೆ, 2006ರಲ್ಲಿ ಮೊದಲ ಬಾರಿಗೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕುಮಾರಸ್ವಾಮಿ ಸಹಾಯ ಮಾಡಿದ್ದರು. ಆಗಿನ ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಅವರು ಮುಖ್ಯಮಂತ್ರಿಯಾದರು. ಬಿಜೆಪಿಯ ಬಿಎಸ್ ಯಡಿಯೂರಪ್ಪ ಅವರು ಉಪ ಮುಖ್ಯಮಂತ್ರಿಯಾಗಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ