ಬೆಂಗಳೂರು: 16ನೇ ವಿಧಾನಸಭೆಯ ಮೊದಲ ಅಧಿವೇಶನಕ್ಕೆ ಇಂದು ತೆರೆ ಬಿದ್ದಿದೆ. ಈ ಅಧಿವೇಶನದಲ್ಲಿ ನೂತನ ಕಾಂಗ್ರೆಸ್ ಸರ್ಕಾರ ಹೊಸ ಬಜೆಟ್ ಮಂಡಿಸಿದೆ. ಹಾಗೆಯೇ ವಿರೋಧ ಪಕ್ಷದ ನಾಯಕನಿಲ್ಲದೆ ನಡೆದ ಅಧಿವೇಶನ ಹೊಸ ಇತಿಹಾಸಕ್ಕೂ ಕಾರಣವಾಗಿದೆ.
16ನೇ ವಿಧಾನಸಭೆಯ ಮೊದಲ ಅಧಿವೇಶನ ಜುಲೈ 3 ರಂದು ರಾಜ್ಯಪಾಲರು ಜಂಟಿ ಅಧಿವೇಶವನ್ನುದ್ದೇಶಿಸಿ ಭಾಷಣ ಮಾಡುವ ಮೂಲಕ ಆರಂಭವಾಗಿತ್ತು. ಜುಲೈ 7ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2023-24ನೇ ಸಾಲಿನ ಬಜೆಟ್ ನ್ನು ವಿಧಾನಸಭೆಯಲ್ಲಿ ಮಂಡಿಸಿದ್ದರು.
ಈ ಅಧಿವೇಶನದಲ್ಲಿ ಪ್ರಶ್ನೋತ್ತರ ಕಲಾಪ, ರಾಜ್ಯಪಾಲರ ಭಾಷಣದ ವಂದನಾ ನಿರ್ಣಯ, ಬಜೆಟ್ ಮೇಲಿನ ಚರ್ಚೆ, ಬಜೆಟ್ ಅಂಗೀಕಾರ ಸೇರಿದಂತೆ ಹಲವು ಕಲಾಪಗಳು ನಡೆದವು. ರಾಜ್ಯ ಅನುಸೂಚಿತ ಜಾತಿಗಳು ಮತ್ತು ಬುಡಕಟ್ಟುಗಳ ಕೆಲವು ಭೂಮಿಗಳ ವರ್ಗಾವಣೆ ನಿಷೇಧ ತಿದ್ದುಪಡಿ ವಿಧೇಯಕ -2023, ರಾಜ್ಯ ಅಗ್ನಿಶಾಮಕ ತುರ್ತು ಸೇವೆಗಳು ಮತ್ತು, ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ತಿದ್ದುಪಡಿ ವಿಧೇಯಕ ಸೇರಿದಂತೆ ಹಲವು ವಿಧೇಯಕಗಳು ಅಂಗೀಕಾರಗೊಂಡವು.
ವಿಧಾನಮಂಡಲ ಇತಿಹಾಸದಲ್ಲೇ ವಿಪಕ್ಷ ನಾಯಕನಿಲ್ಲದೆ ನಡೆದ ಅಧಿವೇಶನ ಇದಾಗಿದೆ. ವಿರೋಧ ಪಕ್ಷವಾದ ಬಿಜೆಪಿ ತನ್ನ ನಾಯಕನನ್ನು ಅಧಿವೇಶನ ಮುಗಿಯುವವರೆಗೂ ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಈ ವಿಚಾರವನ್ನು ಮುಂದಿಟ್ಟುಕೊಂಡು ಆಡಳಿತಾರೂಢ ಕಾಂಗ್ರೆಸ್ ಸದಸ್ಯರು ಬಿಜೆಪಿಯನ್ನು ಅಧಿವೇಶನದುದ್ದಕ್ಕೂ ಲೇವಡಿ ಮಾಡಿದರು.
Advertisement