‘ನಾನೇಕೆ ಸಿಎಂ ಆಗಬಾರದು, ಉದ್ದೇಶಪೂರ್ವಕವಾಗಿಯೇ ದಲಿತರು ಸಿಎಂ ಆಗುವುದನ್ನು ತಡೆಯಲಾಗುತ್ತಿದೆ’: ಜಿ ಪರಮೇಶ್ವರ

ರಾಜ್ಯದಲ್ಲಿ ದಲಿತರು ಮುಖ್ಯಮಂತ್ರಿ ಸ್ಥಾನದಿಂದ ವಂಚಿತರಾಗುತ್ತಿರುವ ಕುರಿತು ಗೃಹ ಸಚಿವ ಹಾಗೂ ಪ್ರಮುಖ ದಲಿತ ಮುಖಂಡ ಡಾ. ಜಿ ಪರಮೇಶ್ವರ ಅವರು ನೀಡಿರುವ ಹೇಳಿಕೆಗಳು ಇದೀಗ ದಲಿತ ಸಿಎಂ ಚರ್ಚೆಗೆ ಎಡೆಮಾಡಿಕೊಟ್ಟಿದ್ದಲ್ಲದೆ, ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಬಹಿರಂಗಪಡಿಸಿದೆ.
ಜಿ ಪರಮೇಶ್ವರ
ಜಿ ಪರಮೇಶ್ವರ

ಬೆಂಗಳೂರು: ರಾಜ್ಯದಲ್ಲಿ ದಲಿತರು ಮುಖ್ಯಮಂತ್ರಿ ಸ್ಥಾನದಿಂದ ವಂಚಿತರಾಗುತ್ತಿರುವ ಕುರಿತು ಗೃಹ ಸಚಿವ ಹಾಗೂ ಪ್ರಮುಖ ದಲಿತ ಮುಖಂಡ ಡಾ. ಜಿ ಪರಮೇಶ್ವರ ಅವರು ನೀಡಿರುವ ಹೇಳಿಕೆಗಳು ಇದೀಗ ದಲಿತ ಸಿಎಂ ಚರ್ಚೆಗೆ ಎಡೆಮಾಡಿಕೊಟ್ಟಿದ್ದಲ್ಲದೆ, ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಬಹಿರಂಗಪಡಿಸಿದೆ.

'ನಾನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷನಾಗಿದ್ದಾಗ, 2013 ರಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದರೂ ನಾನು ಸಿಎಂ ಆಗಲು ಸಾಧ್ಯವಾಗಲಿಲ್ಲ. ನನ್ನ ನಾಯಕತ್ವದಲ್ಲಿ ಪಕ್ಷ ಯಶಸ್ಸು ಕಂಡರೂ, ಯಾರೂ ನನಗೆ ಶ್ರೇಯಸ್ಸು ನೀಡಲಿಲ್ಲ. ನಾನಂತೂ ಆ ಬಗ್ಗೆ ಹೇಳಿಕೊಂಡಿಲ್ಲ. 2018ರಲ್ಲಿ ದಲಿತರನ್ನು ಕಡೆಗಣಿಸಿದ್ದರಿಂದ ಪಕ್ಷ ಸೋಲಿನ ರುಚಿ ಕಾಣಬೇಕಾಯಿತು. ಸಮುದಾಯವನ್ನು ನಿರ್ಲಕ್ಷಿಸಿದ ದೊಡ್ಡ ನಾಯಕರಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಿದೆ' ಎಂದು ಪರಮೇಶ್ವರ್ ಹೇಳಿದರು.

ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ವಿವಿಧ ದಲಿತ ಸಂಘಟನೆಗಳು ಹಮ್ಮಿಕೊಂಡಿದ್ದ ಪರಿಶಿಷ್ಟ ಜಾತಿಗಳ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಉದ್ದೇಶಪೂರ್ವಕವಾಗಿ ದಲಿತ ನಾಯಕರಿಗೆ ಸಿಎಂ ಸ್ಥಾನವನ್ನು ನಿರಾಕರಿಸಲಾಗುತ್ತಿದೆ. ‘ನಾನು ಅಥವಾ ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್. ಮುನಿಯಪ್ಪ ಏಕೆ ಮುಖ್ಯಮಂತ್ರಿಯಾಗಬಾರದು?. ನಾವೆಲ್ಲರೂ ಕೀಳರಿಮೆ ತೊರೆದು ಒಂದಾಗಬೇಕು’ ಎಂದು ದಲಿತ ಮುಖಂಡರಿಗೆ ಕರೆ ನೀಡಿದರು.

ಈ ಬೆಳವಣಿಗೆಯ ಬಗ್ಗೆ ಪಕ್ಷವು ಚಿಂತಿಸುತ್ತಿದೆ ಮತ್ತು ಕರ್ನಾಟಕದ ವಿದ್ಯಮಾನಗಳನ್ನು ಎಚ್ಚರಿಕೆಯಿಂದ ನೋಡುತ್ತಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಸದ್ಯ ದೈತ್ಯಾಕಾರದಂತೆ ಕಾಣುತ್ತಿರುವ ಪಕ್ಷದ ಒಗ್ಗಟ್ಟಿಗೆ ಇದು ಧಕ್ಕೆಯಾಗುವ ಸಾಧ್ಯತೆ ಇರುವುದರಿಂದ ಪಕ್ಷವು ಈ ಬೆಳವಣಿಗೆಯ ಬಗ್ಗೆ ಚಿಂತಿಸುತ್ತಿದೆ. ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ದಲಿತರು ಮತ್ತು ಇತರ ಹಿಂದುಳಿದ ವರ್ಗಗಳು ಕಾಂಗ್ರೆಸ್‌ ಪರವಾಗಿದ್ದವು. ಆದರೆ, ಈಗ ವಿಶೇಷವಾಗಿ ಲೋಕಸಭೆ ಮತ್ತು ಬೆಂಗಳೂರು ನಗರ ಚುನಾವಣೆಗೂ ಮುನ್ನ ಮತ ಬ್ಯಾಂಕ್ ಅನ್ನು ಕಳೆದುಕೊಳ್ಳುವ ಅಪಾಯವನ್ನು ತೆಗೆದುಕೊಳ್ಳಲು ಪಕ್ಷ ಸಿದ್ಧವಿಲ್ಲ.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಡುವೆ ಸಂಧಾನ ಮಾಡುವಲ್ಲಿ ಕಾಂಗ್ರೆಸ್ ಹೈಕಮಾಂಡ್ ಯಶಸ್ವಿಯಾಗಿದೆ. ಪರಮೇಶ್ವರ ಅವರು ಪ್ರಮುಖ ದಲಿತ ನಾಯಕರಲ್ಲಿ ಒಬ್ಬರು ಮತ್ತು ಹಿರಿಯ ಕಾಂಗ್ರೆಸ್ಸಿಗರು, ಅವರು ತಮ್ಮ ವೃತ್ತಿಜೀವನದಲ್ಲಿ ಎಂದಿಗೂ ತಮ್ಮ ಪಕ್ಷ ನಿಷ್ಠೆಯನ್ನು ಬದಲಾಯಿಸಿಲ್ಲ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2013ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಪರಮೇಶ್ವರ್ ಅವರನ್ನು ಸೋಲಿಸಿ ಸಿಎಂ ಹುದ್ದೆಗೆ ಸ್ಪರ್ಧೆ ಏರ್ಪಡದಂತೆ ನೋಡಿಕೊಂಡರು ಎಂಬುದು ರಾಜ್ಯ ರಾಜಕೀಯ ಪಡಸಾಲೆಯಲ್ಲಿ ಕೇಳಿಬಂದಿರುವ ಬಹಿರಂಗ ರಹಸ್ಯ. ಆಗ ಕೆಪಿಸಿಸಿ ಅಧ್ಯಕ್ಷರಾಗಿದ್ದ ಪರಮೇಶ್ವರ ಅವರ ಸೋಲಿನ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹುದ್ದೆಗೆ ಅವರನ್ನು ಪರಿಗಣಿಸಿರಲಿಲ್ಲ. ಪರಮೇಶ್ವರ ಅವರು ಸಂತೋಷವಾಗಿಲ್ಲ ಮತ್ತು ಅವರಿಗೆ ಮಾಡಿದ ದ್ರೋಹವನ್ನು ಅವರು ಇನ್ನೂ ನೆನಪಿಸಿಕೊಳ್ಳುತ್ತಾರೆ ಎಂದು ಮೂಲಗಳು ತಿಳಿಸಿವೆ.

ಸ್ವಾತಂತ್ರ್ಯಾ ನಂತರ ಕರ್ನಾಟಕ ರಾಜ್ಯದಲ್ಲಿ ದಲಿತ ಸಿಎಂ ಆಗಿಯೇ ಇಲ್ಲ. ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಪ್ರಮುಖ ನಾಯಕರು ಸಮುದಾಯದಿಂದ ಹೊರಹೊಮ್ಮಿದರೂ ಯಾರೂ ಕೂಡ ಇಂದಿಗೂ ಸಿಎಂ ಸ್ಥಾನಕ್ಕೇರಿಲ್ಲ.

2004ರಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಾಗ ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿಯಾಗುವ ಅವಕಾಶ ಕಳೆದುಕೊಂಡಿದ್ದರು. ಮಲ್ಲಿಕಾರ್ಜುನ್‌ ಖರ್ಗೆ ಅವರನ್ನು ಸಿಎಂ ಮಾಡುವ ಇಚ್ಛೆಯನ್ನು ಹೊಂದಿತ್ತು. ಆದರೆ, ಜೆಡಿಎಸ್‌ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರು ದಿವಂಗತ ಧರಂ ಸಿಂಗ್ ಪರ ಒಲವು ತೋರಿದ್ದರು. 2013ರ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು ಮತ್ತು ಪರಮೇಶ್ವರ್ ಪಕ್ಷದ ಅಧ್ಯಕ್ಷರಾಗಿದ್ದರು. ಕೊರಟಗೆರೆ ಕ್ಷೇತ್ರದಿಂದ ಚುನಾವಣೆಯಲ್ಲಿ ಸೋತಿದ್ದರಿಂದ ಅವರು ಮುಖ್ಯಮಂತ್ರಿಯಾಗುವ ಅವಕಾಶ ಕಳೆದುಕೊಂಡರು.

ಜೆಡಿಎಸ್ ಮತ್ತು ಬಿಜೆಪಿ ಕೂಡ ದಲಿತ ನಾಯಕರನ್ನು ಹೊಂದಿದ್ದರೂ, ಯಾವುದೇ ನಾಯಕರನ್ನು ಉನ್ನತ ಹುದ್ದೆಗೆ ಅಲಂಕರಿಸುತ್ತಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಕಾಂಗ್ರೆಸ್ ಪಕ್ಷವು ದಲಿತ ಮತ್ತು ದಮನಿತ ವರ್ಗಗಳ ಅನೇಕ ಪ್ರಮುಖ ಮತ್ತು ಪ್ರಬಲ ನಾಯಕರನ್ನು ಹೊಂದಿದೆ. ಕಾಂಗ್ರೆಸ್ ಪಕ್ಷದಲ್ಲಿ ದಲಿತ ಸಿಎಂ ಚರ್ಚೆ ಯಾವ ತಿರುವು ಪಡೆಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com