ನನಗೆ ಸಾಕಾಗಿ ಹೋಗಿದೆ, ಚುನಾವಣಾ ರಾಜಕೀಯದಿಂದ ನಿವೃತ್ತಿ ತೆಗೆದುಕೊಳ್ಳಲೂಬಹುದು: ಡಿ ಕೆ ಸುರೇಶ್

ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಸೋದರ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಸಂಸದ ಡಿ ಕೆ ಸುರೇಶ್ ತಾವು ಚುನಾವಣಾ ರಾಜಕೀಯದಿಂದ ನಿವೃತ್ತಿ ಹೊಂದಲೂಬಹುದು ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಡಿ ಕೆ ಸುರೇಶ್
ಡಿ ಕೆ ಸುರೇಶ್

ಬೆಂಗಳೂರು/ಮೈಸೂರು: ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಸೋದರ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಸಂಸದ ಡಿ ಕೆ ಸುರೇಶ್ ತಾವು ಚುನಾವಣಾ ರಾಜಕೀಯದಿಂದ ನಿವೃತ್ತಿ ಹೊಂದಲೂಬಹುದು ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಮುಂದಿನ ವರ್ಷ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಬೇಕೆ, ಬೇಡವೆ ಎಂದು ನಾನು ಇನ್ನೂ ನಿರ್ಧಾರ ಮಾಡಿಲ್ಲ. ಪಕ್ಷದ ಕಾರ್ಯಕರ್ತರು ಮತ್ತು ನಾಯಕರ ಅಭಿಪ್ರಾಯಗಳನ್ನು ಪರಿಗಣಿಸುತ್ತೇನೆ. ಹೈಕಮಾಂಡ್ ಗೆ ಬೇರೆ ಸಮರ್ಥ ಅಭ್ಯರ್ಥಿ ಕಂಡರೆ ನಾನು ಸ್ಪರ್ಧೆಯಿಂದ ಹಿಂದೆ ಸರಿದು ಅವರನ್ನು ಬೆಂಬಲಿಸುತ್ತೇನೆ ಎಂದು ಹೇಳಿದ್ದಾರೆ.

ರಾಜಕೀಯ ಈಗ ಹಿಂದಿನಂತಿಲ್ಲ. ನನ್ನ ಉದ್ದೇಶ ಬೇರೆಯವರಿಗೆ ಅವಕಾಶ ಮಾಡಿಕೊಡುವುದಾಗಿದೆ ಎಂದಿದ್ದಾರೆ. ನಿನ್ನೆ ರಾಮನಗರದಲ್ಲಿ ಜಿಲ್ಲಾ ಪಂಚಾಯತ್ ಸಭೆಯಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಡಿ ಕೆ ಸುರೇಶ್ ಮನಬಿಚ್ಚಿ ಮಾತನಾಡಿದ್ದಾರೆ.

ರಾಜ್ಯ ರಾಜಕೀಯದಲ್ಲಿ ಸೋದರ ಡಿ ಕೆ ಶಿವಕುಮಾರ್ ಬೆಳವಣಿಗೆಗೆ 57 ವರ್ಷದ ಡಿ ಕೆ ಸುರೇಶ್ ಪಾತ್ರ ಸಾಕಷ್ಟಿದೆ. ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಪಕ್ಷದಲ್ಲಿನ ಬೆಳವಣಿಗೆ, ಸಚಿವರಾದ ಎಂ ಬಿ ಪಾಟೀಲ್, ಮಹದೇವಪ್ಪ ಸೇರಿದಂತೆ ಇನ್ನೂ ಕೆಲವರು ಸಿದ್ದರಾಮಯ್ಯನವರೇ ಸಿಎಂ ಅವಧಿ ಪೂರ್ಣಗೊಳಿಸುತ್ತಾರೆ ಎಂದು ಹೇಳಿರುವುದು ಸುರೇಶ್ ಅವರ ಬೇಸರಕ್ಕೆ ಕಾರಣವಾಗಿರಬಹುದು. 

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಜೂನ್ 21ರಂದು ದೆಹಲಿಯಲ್ಲಿ ಸಿದ್ದರಾಮಯ್ಯ ಸಂಪುಟದ ಎಲ್ಲ ಸಚಿವರ ಸಭೆ ಕರೆದಿರುವ ಸಂದರ್ಭದಲ್ಲೇ ಸುರೇಶ್ ಅವರು ಈ ರೀತಿ ಮಾತನಾಡಿರುವುದು ಪಕ್ಷದ ಮಟ್ಟಿಗೆ ಮಹತ್ವ ಪಡೆದಿದೆ. ರಾಹುಲ್ ಗಾಂಧಿ ಸೇರಿದಂತೆ ಪಕ್ಷದ ರಾಷ್ಟ್ರೀಯ ನಾಯಕರು ಸಭೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ.

ಈ ಹಿಂದೆ ತಮ್ಮ ಸೋದರ ಶಿವಕುಮಾರ್ ಗೆ ಮುಖ್ಯಮಂತ್ರಿ ಪದವಿ ಕೈತಪ್ಪಿ ಹೋದಾಗ ಸುರೇಶ್ ಸಾಕಷ್ಟು ನೊಂದುಕೊಂಡಿದ್ದುಂಟು. ಆಶಾವಾದಿಯಾಗಿದ್ದೇನೆ ಎಂದು ಬಹಿರಂಗವಾಗಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು. ಇದೀಗ ತಾವು ಈ ರೀತಿ ಹೇಳಿಕೆ ನೀಡುವ ಮೂಲಕ  ಸಹೋದರ ಶಿವಕುಮಾರ್‌ಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡಬೇಕೆಂದು ಕಾಂಗ್ರೆಸ್ ಹೈಕಮಾಂಡ್‌ಗೆ ಸಂದೇಶ ಕಳುಹಿಸಿರಬಹುದು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. 

ಸಿದ್ದರಾಮಯ್ಯ, ಶಿವಕುಮಾರ್ ಮತ್ತು ಹೈಕಮಾಂಡ್ ನಡುವೆ ಸಿಎಂ ಅಧಿಕಾರ ಹಂಚಿಕೆ ಬಗ್ಗೆ ಅನಧಿಕೃತ ಒಪ್ಪಂದ ನಡೆಯುವ ಸಾಧ್ಯತೆಯಿರುವುದರಿಂದ ಇದು ಒಂದು ರೀತಿ ಡಿ ಕೆ ಸುರೇಶ್ ಸಂದೇಶ ರವಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಸುರೇಶ್ ಅವರ ಈ ಘೋಷಣೆ ಹಳೇ ಮೈಸೂರು ಭಾಗದ ಅವರ ಅನೇಕ ಬೆಂಬಲಿಗರಿಗೆ ಆಘಾತ ಉಂಟುಮಾಡಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಭೂತಪೂರ್ವ ಗೆಲುವು ಸಾಧಿಸಿದ್ದರೂ ಶಿವಕುಮಾರ್ ಸಿಎಂ ಗದ್ದುಗೆ ಸಿಗದ ಕಾರಣ ಡಿ ಕೆ ಸುರೇಶ್ ಹೀಗೆ ಮಾತನಾಡಿರಬಹುದು ಎಂದು ಹೇಳಲಾಗುತ್ತಿದೆ. 

ಲೋಕಸಭೆ ಚುನಾವಣೆ ವೇಳೆ ಕಾಂಗ್ರೆಸ್ ನ್ನು ಮಣಿಸಲು ವಿಶೇಷವಾಗಿ ರಾಮನಗರ ಮತ್ತು ಇತರೆಡೆ ಡಿಕೆ ಸಹೋದರರನ್ನು ಗುರಿಯಾಗಿಸಲು ಬಿಜೆಪಿ ಮತ್ತು ಜೆಡಿಎಸ್ ನಡುವೆ ಮೈತ್ರಿ ಸಾಧ್ಯತೆಯ ಊಹಾಪೋಹಗಳಿವೆ. ಈ ಬಗ್ಗೆ ಕೇಳಿದಾಗ ಈ ಮೈತ್ರಿ ಬಗ್ಗೆ ಚಿಂತಿಸಿಲ್ಲ, ಇನ್ನು ಒಂದು ವರ್ಷ ಜನಸೇವೆ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿರುವ ಸುರೇಶ್, ಕಾಂಗ್ರೆಸ್ ನಾಯಕರ ಜತೆ ಸಮಾಲೋಚನೆ ನಡೆಸಿ ಚುನಾವಣಾ ರಾಜಕೀಯ ತ್ಯಜಿಸುವ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಸುರೇಶ್ ಅವರ ಕೆಲವು ಬೆಂಬಲಿಗರ ಪ್ರಕಾರ, ಬೆಂಗಳೂರು ಗ್ರಾಮಾಂತರಕ್ಕೆ ಪಕ್ಷದಲ್ಲಿ ಪರ್ಯಾಯ ಅಭ್ಯರ್ಥಿ ಇಲ್ಲದ ಕಾರಣ ಅವರು ಖಂಡಿತವಾಗಿಯೂ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ. ಹಳೆ ಮೈಸೂರು ಭಾಗದಲ್ಲಿ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ 40 ಕ್ಷೇತ್ರಗಳಲ್ಲಿ ಶ್ರಮಿಸಿ ಹಲವು ಸ್ಥಾನಗಳಲ್ಲಿ ಪಕ್ಷದ ಗೆಲುವಿಗೆ ಡಿ ಕೆ ಸೋದರರು ಕಾರಣರು ಎಂದರೆ ತಪ್ಪಾಗಲಾರದು.

ಹಳೆ ಮೈಸೂರು ಭಾಗದಲ್ಲಿ ಹೆಚ್ಚಿನ ಲೋಕಸಭಾ ಸ್ಥಾನಗಳನ್ನು ಗೆಲ್ಲುವ ಜವಾಬ್ದಾರಿಯನ್ನು ಶಿವಕುಮಾರ್‌ಗೆ ಹೈಕಮಾಂಡ್ ನೀಡುವ ಸಾಧ್ಯತೆಯಿದೆ, ಅಂತಿಮವಾಗಿ ಅದನ್ನು ಸುರೇಶ್ ಕಾರ್ಯಗತಗೊಳಿಸಬೇಕಾಗುತ್ತದೆ ಎಂಬುದು ಅವರ ಆಪ್ತ ವಲಯ ಮತ್ತು ಬೆಂಬಲಿಗರ ವಾದವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com