ಪಕ್ಷ ವಿರೋಧಿ ಚಟುವಟಿಕೆ ಆರೋಪ: 18 ಮುಖಂಡರಿಗೆ ಕೆಪಿಸಿಸಿ ಶಿಸ್ತು ಸಮಿತಿ ನೋಟಿಸ್ ಜಾರಿ

ಇತ್ತೀಚಿಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪಕ್ಕಾಗಿ ಜಿಲ್ಲೆಯ 18 ಕಾಂಗ್ರೆಸ್ ಮುಖಂಡರಿಗೆ ಕೆಪಿಸಿಸಿ ಶಿಸ್ತು ಸಮಿತಿ ಶೋಕಾಸ್ ನೋಟಿಸ್ ನೀಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹಾಸನ: ಇತ್ತೀಚಿಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪಕ್ಕಾಗಿ ಜಿಲ್ಲೆಯ 18 ಕಾಂಗ್ರೆಸ್ ಮುಖಂಡರಿಗೆ ಕೆಪಿಸಿಸಿ ಶಿಸ್ತು ಸಮಿತಿ ಶೋಕಾಸ್ ನೋಟಿಸ್ ನೀಡಿದೆ. ಜಿಲ್ಲಾ ಕಾಂಗ್ರೆಸ್ ವಕ್ತಾರ ದೇವರಾಜೆಗೌಡ ಅವರ ಪ್ರಕಾರ, ಹಾಸನ, ಹೊಳೆನರಸೀಪುರ ಮತ್ತು ಅರಕಲಗೂಡು ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧ ಈ ಮುಖಂಡರು ಪ್ರಚಾರ ನಡೆಸಿರುವ ಆರೋಪವಿದೆ.

ಈ ಮುಖಂಡರು ಅಧಿಕೃತ ಅಭ್ಯರ್ಥಿಗಳ ಪರ ಪ್ರಚಾರ ಮಾಡಿಲ್ಲ ಮತ್ತು ವಿರೋಧ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಿದ್ದಾರೆ ಎಂದು ಕೆ ರೆಹಮಾನ್ ಖಾನ್ ನೇತೃತ್ವದ ಶಿಸ್ತು ಸಮಿತಿಯು ನೋಟಿಸ್‌ನಲ್ಲಿ  ಹೇಳಿದೆ. ಜಿಲ್ಲಾ ಕಾಂಗ್ರೆಸ್ ಸಮಿತಿ ದೂರಿನ ಹಿನ್ನೆಲೆಯಲ್ಲಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. 7 ದಿನಗಳೊಳಗೆ ನೋಟಿಸ್‌ಗೆ ಉತ್ತರಿಸುವಂತೆ ಸಮಿತಿಯ ಅಧ್ಯಕ್ಷರು ಸೂಚಿಸಿದ್ದಾರೆ.

ಮುಖಂಡರಾದ ಎಚ್.ಕೆ.ಮಹೇಶ್, ಪಟೇಲ್ ಶಿವಪ್ಪ, ಎಲ್.ಬಿ.ಕೃಷ್ಣಪ್ಪ, ಗಣೇಶ್ ವೇಲಾಪುರಿ, ಕೆಪಿಸಿಸಿ ಸದಸ್ಯ ಎಂ.ಕೆ.ಶೇಷೇಗೌಡ, ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಸುಪ್ರೀತ್ ಗೌಡ, ಜಿಲ್ಲಾ ಸೇವಾದಳ ಅಧ್ಯಕ್ಷ ಎನ್.ಬಿ.ದಿನೀಶ್, ಹೊಳೆನರಸೀಪುರ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಂಜೇಗೌಡ, ಅರಕಲಗೂಡು ಪಟ್ಟಣ ಪಂಚಾಯಿತಿ  ಸದಸ್ಯರಾದ ಎಡಿ ಚಂದ್ರಶೇಖರ್, ಪ್ರದೀಪ್ ಕುಮಾರ್, ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್, ಅರಕಲಗೂಡು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್, ದಿನೇಶ್ ಬೈರೇಗೌಡ, ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ಅಲ್ವಿನ್, ಹಾಸನ ಸಿಎಂಸಿ ಮಾಜಿ ಸದಸ್ಯ ರವಿ, ನಾವಿದ್ ಅವರಿಗೆ ನೋಟಿಸ್ ನೀಡಲಾಗಿದೆ. 

ಈ ಎಲ್ಲಾ ಮುಖಂಡರು ಆಯಾ ವಿಧಾನಸಭಾ ಕ್ಷೇತ್ರಗಳಲ್ಲಿ ವಿರೋಧ ಪಕ್ಷಗಳ ಅಭ್ಯರ್ಥಿಗಳನ್ನು ಬೆಂಬಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com