ಬೆಂಗಳೂರು ಉಸ್ತುವಾರಿಗಾಗಿ ಪೈಪೋಟಿ: ಸಾಮ್ರಾಟ್- ಸೋಮಣ್ಣ ಜಟಾಪಟಿ; ವಿಜಯ ಸಂಕಲ್ಪಯಾತ್ರೆ ಅರ್ಧಕ್ಕೆ ಮೊಟಕುಗೊಳಿಸಿದ ಅಶೋಕ್!

ಸಚಿವ ವಿ.ಸೋಮಣ್ಣ ಕಾಂಗ್ರೆಸ್‌ ಸೇರ್ಪಡೆಯಾಗುತ್ತಾರೆ ಅನ್ನೋ ಗುಸು ಗುಸು ರಾಜ್ಯ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.  ಈ ಚರ್ಚೆಯ ಬೆನ್ನಲ್ಲೇ ಬೆಂಗಳೂರು ಬಿಜೆಪಿ ನಾಯಕರ ನಡುವೆ ಭಿನ್ನಮತ ಸ್ಫೋಟಗೊಂಡಿದೆ.
ಬಿಜೆಪಿ ವಿಜಯ ಸಂಕಲ್ಪ ಯಾತ್ರೆ
ಬಿಜೆಪಿ ವಿಜಯ ಸಂಕಲ್ಪ ಯಾತ್ರೆ
Updated on

ಬೆಂಗಳೂರು: ಸಚಿವ ವಿ.ಸೋಮಣ್ಣ ಕಾಂಗ್ರೆಸ್‌ ಸೇರ್ಪಡೆಯಾಗುತ್ತಾರೆ ಅನ್ನೋ ಗುಸು ಗುಸು ರಾಜ್ಯ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಈ ಚರ್ಚೆಯ ಬೆನ್ನಲ್ಲೇ ಬೆಂಗಳೂರು ಬಿಜೆಪಿ ನಾಯಕರ ನಡುವೆ ಭಿನ್ನಮತ ಸ್ಫೋಟಗೊಂಡಿದೆ. ಇಷ್ಟು ದಿನ ನಡೆಯುತ್ತಿದ್ದ ಕೋಲ್ಡ್‌ವಾರ್‌ ವಿಜಯಸಂಕಲ್ಪ ಯಾತ್ರೆ ವೇಳೆ ಬಹಿರಂಗಗೊಂಡಿದೆ.

ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ವೇಳೆ ಆರ್‌.ಅಶೋಕ್ ಮತ್ತು ವಿ.ಸೋಮಣ್ಣ ನಡುವೆ ಮುಸುಕಿನ ಗುದ್ದಾಟ ಏರ್ಪಟ್ಟಿದೆ. ಇಬ್ಬರ ನಡುವಿನ ಕೋಲ್ಡ್ ವಾರ್ ಜಗಜ್ಜಾಹೀರಾಗಿದೆ. ವಸತಿ ಸಚಿವ ವಿ.ಸೋಮಣ್ಣ ಅವರ ಕ್ಷೇತ್ರ ಗೋವಿಂದರಾಜನಗರದಲ್ಲಿ ಪಕ್ಷದ ‘ವಿಜಯಸಂಕಲ್ಪ’ ರಥಯಾತ್ರೆ ಹಠಾತ್ತನೆ ಸ್ಥಗಿತಗೊಂಡಿದ್ದರಿಂದ ಆಡಳಿತಾರೂಢ ಬಿಜೆಪಿಯೊಳಗಿನ ಆಂತರಿಕ ಕಚ್ಚಾಟ ಮುನ್ನೆಲೆಗೆ ಬಂದಿದೆ.

ಬಿಜೆಪಿ ಕರ್ನಾಟಕ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಮತ್ತು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಭಾಗವಹಿಸಿದ್ದ ರೋಡ್ ಶೋ ನಾಯಂಡಹಳ್ಳಿವರೆಗೆ ಯೋಜಿಸಲಾಗಿತ್ತು. ಆದರೆ ಧರ್ಮೇಂದ್ರ ಪ್ರಧಾನ್ ನಾಗರಬಾವಿಯಲ್ಲಿ ಇಳಿದರು. ಇದಾದ ನಂತರ್ ಅಶೋಕ್ ಕೂಡ ರಥಯಾತ್ರೆಯಿಂದ ಇಳಿದರು. ಈ ವೇಳೆ ಸೋಮಣ್ಣ ಮತ್ತಷ್ಟು ದೂರ ಬರುವಂತೆ ಅಶೋಕ್ ಅವರ ಮನವೊಲಿಸಲು ಯತ್ನಿಸಿದರು. ಆದರೆ ಅದಕ್ಕೆ ಸೊಪ್ಪು ಹಾಕದ ಅಶೋಕ್ ವಿಜಯ ಸಂಕಲ್ಪ ಯಾತ್ರೆ ಬಿಟ್ಟು ಹೊರಟರು. ಇದರಿಂದ ಅಸಮಾಧಾನಗೊಂಡ ಸೋಮಣ್ಣ ಕೂಡ ರಥಯಾತ್ರೆ ಕೈಬಿಟ್ಟು ಕಾರಿನಲ್ಲಿ ಹೊರಟರು, ನಾಯಕರುಗಳ ಈ ನಡೆಯಿಂದ ಕಾರ್ಯಕರ್ತರನ್ನು ತಬ್ಬಿಬ್ಬಾದರು.

ನಾಲ್ಕು ರಥಯಾತ್ರೆಗಳಲ್ಲಿ ಒಂದನ್ನು ಹಳೇ ಮೈಸೂರು ಪ್ರದೇಶದಲ್ಲಿ ಒಕ್ಕಲಿಗ ನಾಯಕ ಆರ್. ಅಶೋಕ್ ಅವರಿಗೆ ನಿಯೋಜಿಸಲಾಗಿತ್ತು. ಇದಕ್ಕೂ ಮುನ್ನ ಉದ್ಘಾಟನಾ ಸಮಾರಂಭದಲ್ಲಿ ಸೋಮಣ್ಣನವರ ಬಗ್ಗೆ ಅಶೋಕ್ ಮೆಚ್ಚುಗೆಯ ಮಾತುಗಳನ್ನಾಡಿದ್ದರು.

ಇಬ್ಬರು ನಾಯಕರುಗಳ ನಡುವೆ ಭುಗಿಲೆದ್ದಿರುವ ಭಿನ್ನಮತದಿಂದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಲಿದೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜಧಾನಿಯ 28 ವಿಧಾನಸಭಾ ಕ್ಷೇತ್ರಗಳಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಬಯಸಿದ್ದಾರೆ. ಆದರೆ ಬೆಂಗಳೂರು ಉಸ್ತುವಾರಿಗಾಗಿ ಇಬ್ಬರು ನಾಯಕರು ನಡುವೆ ಉಂಟಾದ ಭಿನ್ನಾಭಿಪ್ರಾಯ ಇನ್ನು ಮುಂದುವರಿದಿದೆ.

ಈ ಹಿಂದೆ ಜೆಡಿಎಸ್‌ನಲ್ಲಿದ್ದ ಸೋಮಣ್ಣ,  ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರ ಸಲುವಾಗಿ ಬಿಜೆಪಿಗೆ ಬಂದರು ಆದರೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸೋಮಣ್ಣ ಮತ್ತು ಅಶೋಕ ನಡುವಿನ ಆಂತರಿಕ ಕಲಹದಿಂದಾಗಿ ವಿಜಯ ಸಂಕಲ್ಪ ಯಾತ್ರೆ ಬೆಂಗಳೂರು ವಿಜಯನಗರದಲ್ಲಿ ಅರ್ಧಕ್ಕೆ ನಿಂತಿದೆ. ಭ್ರಷ್ಟಾಚಾರ, ಅಂತಃಕಲಹ. ಕೋಮುವಾದ, ದುರಾಡಳಿತ ಅಭಿವೃದ್ಧಿ ಇಲ್ಲದ ಬಿಜೆಪಿ ಕರ್ನಾಟಕ ಎಂದು ಕಾಂಗ್ರೆಸ್ ಮುಖಂಡ ಕಶ್ಯಪ್ ನಂದನ್ ಟ್ವೀಟ್ ಮಾಡಿದ್ದಾರೆ.

ಆನೇಕಲ್ ಮತ್ತು ಚಂದಾಪುರದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್, ಬೆಂಗಳೂರಿನ ಬಸವನಗುಡಿಯಲ್ಲಿ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಿ.ಟಿ.ರವಿ, ಮಂಡ್ಯ ಜಿಲ್ಲೆಯ ಮಳವಳ್ಳಿ, ಶ್ರೀರಂಗಪಟ್ಟಣದಲ್ಲಿ ಮೈಸೂರು ಸಂಸದ ಪ್ರತಾಪ್ ಸಿಂಹ ನೇತೃತ್ವದಲ್ಲಿ ಬಿಜೆಪಿ ರೋಡ್ ಶೋ ನಡೆಸಿತು. ಮಾರ್ಚ್ 12 ರಂದು ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಲೋಕಾರ್ಪಣೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com