ಮಾಲೂರು: ಬಿಜೆಪಿ ವಿಜಯಸಂಕಲ್ಪ ಯಾತ್ರೆ ಪೂರ್ವಭಾವಿ ಸಭೆಯಲ್ಲಿ ಕೈಕೈ ಮಿಲಾಯಿಸಿದ ಬಿಜೆಪಿ ಕಾರ್ಯಕರ್ತರು

ಮಾಲೂರು ವಿಜಯ ಸಂಕಲ್ಪ ಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಬಿಜೆಪಿ ಕಾರ್ಯಕರ್ತರ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮಾಲೂರು: ಮಾಲೂರು ವಿಜಯ ಸಂಕಲ್ಪ ಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಬಿಜೆಪಿ ಕಾರ್ಯಕರ್ತರ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ.

ಪಟ್ಟಣದ ಕಲ್ಯಾಣ ಮಂದಿರದಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ವೇಣುಗೋಪಾಲ್‌ ಭಾಷಣಕ್ಕೆ ಮುಂದಾದರು. ಈ ವೇಳೆ ಬಿಜೆಪಿ ಮುಖಂಡ ಹೂಡಿ ವಿಜಯಕುಮಾರ್‌ ಬೆಂಬಲಿಗ ಕೂರಿ ಮಂಜು ಗಲಾಟೆ ಆರಂಭಿಸಿದರು.

ಪಕ್ಷದ ಕಾರ್ಯಕರ್ತರು ಮುಖಂಡರು ಒಗ್ಗಟ್ಟಾಗಿದ್ದು, ಪಕ್ಷ ಸಂಘಟಿಸುವಂತೆ ಭಾಷಣಗಳಲ್ಲಿ ಹೇಳುತ್ತೀರಾ. ಆದರೆ, ನೀವು ಚಿಕ್ಕ ತಿರುಪತಿಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಮುಖಂಡರ ಸಭೆಯಲ್ಲಿ ಇತ್ತೀಚೆಗೆ ಪಕ್ಷಕ್ಕೆ ಸೇರಿದ ಮಾಜಿ ಶಾಸಕರಿಗೆ ಬಿ ಫಾರಂ ಗ್ಯಾರಂಟಿ ಎಂದು ಹೇಗೆ ಹೇಳಿದಿರಿ ಎಂದು ಪ್ರಶ್ನೆ ಮಾಡಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ಎಸ್.ಮಂಜುನಾಥ್ ಗೌಡ ಬೆಂಬಲಿಗ ಕೆ.ಟಿ. ಮಂಜು ಎಂಬುವವರು, ಕಳೆದ ಪುರಸಭೆ ಚುನಾವಣೆಯಲ್ಲಿ ಪಕ್ಷದಿಂದ ಹೊರ ಬಂದು ಪಕ್ಷೇತರನಾಗಿ ಹೆಂಡತಿಯನ್ನು ಗೆಲ್ಲಿಸಿಕೊಂಡ ಕುರಿ ಮಂಜು ಅವರು ಬಿ ಫಾರಂ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದರು.

ಈ ವೇಳೆ ಕುರಿ ಮಂಜು ಸಹಾಯಕ್ಕೆ ಬಂದ ಪುರಸಭೆ ಸದಸ್ಯ ಭಾನುತೇಜಾರ ಮೇಲೆ ಕೆಟಿ ಮಂಜು ಹಲ್ಲೆ ಮಾಡಲು ಯತ್ನಿಸಿದಾಗ ಇಬ್ಬರು ನಾಯಕರ ಬೆಂಬಲಿಗರ ನಡುವೆ ಮಾತಿನ ಚಕತಿ ನಡೆದು ಪರಸ್ಪರರ ನಡುವೆ ನೂಕಾಟ, ತಳ್ಳಾಟ ಆರಂಭವಾಗಿ ಕೈಕೈ ಮಿಲಾಯಿಸಿದರು.

ಈ ವೇಳೆ ಪೊಲೀಸರು ಕೂಡ ಸಭಾಂಗಣಕ್ಕೆ ಪ್ರವೇಶಿಸಿ ಉದ್ವೇಗಗೊಂಡವರನ್ನು ನಿಯಂತ್ರಿಸುವ ಪ್ರಯತ್ನ ನಡೆಸಿದರು. ವೇದಿಕೆಯ ಮೇಲಿದ್ದ ಜನಸಂಕಲ್ಪ ಯಾತ್ರೆಯ ಉಸ್ತುವಾರಿ ಚಂದ್ರಾರೆಡ್ಡಿ, ರಾಮಮೂರ್ತಿ, ಮಾಜಿ ಶಾಸಕ ಮಂಜುನಾಥ್ ಗೌಡ ಸೇರಿದಂತೆ ಇತರೆ ಮುಖಂಡರು ಮಧ್ಯಪ್ರವೇಶಿಸಿ ಕಾರ್ಯಕರ್ತರನ್ನು ಸಮಾಧಾನಪಡಿಸಿದರು.

ಮಾಲೂರಿನ ಬಿಜೆಪಿ ಹಿರಿಯ ಮುಖಂಡರೊಬ್ಬರು ಮಾತನಾಡಿ, ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಅವರು ಬಿಜೆಪಿ ಟಿಕೆಟ್‌ ಪಡೆದು ಮಾಲೂರಿನಿಂದ ಗೆಲವು ಸಾಧಿಸಿದ್ದರು. ಕ್ಷೇತ್ರದಲ್ಲಿ ಪಕ್ಷ ಬೆಳೆದಿದೆ, ಆದರೆ. ಹಿರಿಯ ಮುಖಂಡರು ಮತ್ತು ಕಾರ್ಯಕರ್ತರಲ್ಲಿ ಒಗ್ಗಟ್ಟು ಇಲ್ಲ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com