ಜೆ ಪಿ ನಡ್ಡಾ-ಸುಮಲತಾ ಅಂಬರೀಷ್ ಮಾತುಕತೆ: ಇಂದು ಮಂಡ್ಯದಲ್ಲಿ ಸಂಸದೆಯ 'ಹೈವೋಲ್ಟೇಜ್' ಸುದ್ದಿಗೋಷ್ಠಿ

ಸಕ್ಕರೆ ನಾಡು ಮಂಡ್ಯ ಕ್ಷೇತ್ರದ ಸಂಸದೆ ಸುಮಲತಾ ಅಂಬರೀಷ್ ಕೇಸರಿ ಪಕ್ಷ ಬಿಜೆಪಿ ಸೇರುವುದು ಬಹುತೇಕ ಪಕ್ಕಾ ಆಗಿದೆ ಎನ್ನಲಾಗುತ್ತಿದೆ. 
ಸುಮಲತಾ ಅಂಬರೀಷ್
ಸುಮಲತಾ ಅಂಬರೀಷ್

ಬೆಂಗಳೂರು/ಮಂಡ್ಯ/ಮೈಸೂರು: ಸಕ್ಕರೆ ನಾಡು ಮಂಡ್ಯ ಕ್ಷೇತ್ರದ ಸಂಸದೆ ಸುಮಲತಾ ಅಂಬರೀಷ್ ಕೇಸರಿ ಪಕ್ಷ ಬಿಜೆಪಿ ಸೇರುವುದು ಬಹುತೇಕ ಪಕ್ಕಾ ಆಗಿದೆ ಎನ್ನಲಾಗುತ್ತಿದೆ. 

ಸುಮಲತಾ ಕಮಲ ಮುಡಿಯಲಿದ್ದಾರೆ ಎಂಬ ವದಂತಿಗಳು ದಟ್ಟವಾಗಿ ಹರಡಿದ್ದು, ಕಳೆದ ಕೆಲವು ದಿನಗಳಿಂದ ಅವರ ರಾಜಕೀಯ ಚಟುವಟುಕೆಗಳು ಅದಕ್ಕೆ ಪುಷ್ಠಿ ನೀಡುವಂತಿದೆ. ನಿನ್ನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಅರುಣ್ ಸಿಂಗ್ ಸೇರಿದಂತೆ ಬಿಜೆಪಿಯ ಪ್ರಮುಖ ನಾಯಕರು ನೀಡಿರುವ ಹೇಳಿಕೆಗಳು ಅದಕ್ಕೆ ಪೂರಕವಾಗಿವೆ.

ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಬಿಜೆಪಿ ಸೇರುವ ಬಗ್ಗೆ ಹಲವಾರು ದಿನಗಳಿಂದ ಚರ್ಚೆ ನಡೆಯುತ್ತಿತ್ತು. ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಮಯ ಬಂದಿದೆ, ಏನಾಗುತ್ತದೆ ನೋಡೋಣ ಎಂದು ಹುಬ್ಬಳ್ಳಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಬಿಜೆಪಿಗೆ ಸೇರ್ಪಡೆಯಾಗುವವರ ಸಂಖ್ಯೆ ಹೆಚ್ಚಾಗಿದೆ ಎಂದು ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ಅರುಣ್ ಸಿಂಗ್ ಕೂಡ ಹೇಳಿದ್ದಾರೆ. ಈ ಎಲ್ಲ ವಿದ್ಯಮಾನಗಳ ಮಧ್ಯೆಯೇ ಸುಮಲತಾ ಅವರು ನಡ್ಡಾ ಜತೆ ಮಾತುಕತೆ ನಡೆಸಿದ್ದಾರೆ ಎಂಬುದು ಇಲ್ಲಿ ಮತ್ತೊಂದು ಮುಖ್ಯ ಅಂಶವಾಗಿದೆ.

ಖಾಸಗಿ ಹೊಟೇಲ್ ನಲ್ಲಿ ನಡ್ಡಾರನ್ನು ಭೇಟಿ ಮಾಡಿದ ಸುಮಲತಾ, ಮಾತುಕತೆ: ವಿಧಾನಸಭೆ ಚುನಾವಣೆ ಸನ್ನಿಹಿತವಾಗಿರುವುದರಿಂದ ಕರ್ನಾಟಕಕ್ಕೆ ಬರುತ್ತಿರುವ ಕೇಂದ್ರ ನಾಯಕರ ಭೇಟಿ ಹೆಚ್ಚಾಗುತ್ತಿದೆ. ನಿನ್ನೆ ಬೆಂಗಳೂರಿನ ಕೆ ಆರ್ ಪುರಂನಲ್ಲಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಲು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ಆಗಮಿಸಿದ್ದರು. 

ನಡ್ಡಾ ಅವರೊಂದಿಗೆ ಕಳೆದ ರಾತ್ರಿ ಸುಮಲತಾ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಬೆಂಗಳೂರಿನ ವಸಂತನಗರದ ಖಾಸಗಿ ಹೋಟೆಲ್​ನಲ್ಲಿ ನಡ್ಡಾ ಅವರ ಜತೆ ಸುಮಾರು ಅರ್ಧ ಗಂಟೆ ಕಾಲ ಮಾತುಕತೆ ನಡೆಸಿದ ನಂತರ ಸುಮಲತಾ ಅಲ್ಲಿಂದ ವಾಪಸಾದರು. 

ಇಂದು ಮಂಡ್ಯದಲ್ಲಿ ಸುಮಲತಾ ಸುದ್ದಿಗೋಷ್ಠಿ, ತೀವ್ರ ಕುತೂಹಲ: ಇಂದು ಶುಕ್ರವಾರ ಮಂಡ್ಯದ ತಮ್ಮ ನಿವಾಸದಲ್ಲಿ ಸಂಸದೆ ಸುಮಲತಾ ಸುದ್ದಿಗೋಷ್ಠಿ ಕರೆದಿದ್ದಾರೆ. ಇದು ರಾಜಕೀಯ ವಲಯದಲ್ಲಿ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಇಂದು ಬೆಳಗ್ಗೆ ಬೆಂಗಳೂರಿನಿಂದ ರಾಮನಗರದ ಮೂಲಕ ಮಂಡ್ಯದತ್ತ ಹೊರಡಲಿರುವ ಸುಮಲತಾ ಮಧ್ಯಾಹ್ನ 12 ಗಂಟೆಗೆ ಮಂಡ್ಯದ ಚಾಮುಂಡೇಶ್ವರಿ ನಗರದಲ್ಲಿರುವ ಸಂಸದರ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ. ಸಂಜೆ 4 ಗಂಟೆಗೆ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ.

ಮಾರ್ಚ್ 12 ರಂದು ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಮಂಡ್ಯಕ್ಕೆ ಭೇಟಿ ನೀಡಲಿದ್ದಾರೆ. ಈ ಹೊತ್ತಿನಲ್ಲಿ ಸುಮಲತಾ ಅವರ ಮುಂದಿನ ರಾಜಕೀಯ ನಡೆಯ ಬಗ್ಗೆ ಸ್ಪಷ್ಟ ನಿರ್ಧಾರವಾಗಲಿದೆ ಎಂದು ಹೇಳಲಾಗುತ್ತಿದೆ. ಸುಮಲತಾ ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಎಸ್‌ಎಂ ಕೃಷ್ಣ ಅವರನ್ನು ಬೆಂಗಳೂರಿನ ಅವರ ನಿವಾಸದಲ್ಲಿ ಭೇಟಿ ಮಾಡಿದ್ದು ಆಗ ಊಹಾಪೋಹ ದಟ್ಟವಾಗಿ ಹರಡಿತು.

ಸುಮಲತಾ ಅವರ ಆಪ್ತ ಹಿಂಡವಾಳು ಸಚ್ಚಿದಾನಂದ ಅವರು ಇತ್ತೀಚೆಗೆ ಕೇಸರಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು, ಶ್ರೀರಂಗಪಟ್ಟಣ ತಾಲೂಕಿನಿಂದ ಸ್ಪರ್ಧಿಸಲು ಬಯಸಿದ್ದು ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇದು ಸುಮಲತಾ ಬಿಜೆಪಿಗೆ ಜಿಗಿಯುತ್ತಾರೆಯೇ ಎಂಬ ಚರ್ಚೆಗೆ ನಾಂದಿ ಹಾಡಿತ್ತು. 

ಜೆಡಿಎಸ್ ಭದ್ರಕೋಟೆ ಒಡೆಯುವ ನಿರೀಕ್ಷೆಯಲ್ಲಿ ರಾಜ್ಯ ಬಿಜೆಪಿ ನಾಯಕರಿದ್ದು, ಬೆಂಬಲಿಗರು ಅವರನ್ನು ಬಿಜೆಪಿ ಸೇರುವಂತೆ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಲೋಕಸಭೆ ಚುನಾವಣೆ ವೇಳೆ ಪರೋಕ್ಷವಾಗಿ ಕಾಂಗ್ರೆಸ್ ಸುಮಲತಾಗೆ ಬೆಂಬಲ ನೀಡಿದ್ದು, ಮಂಡ್ಯದಲ್ಲಿ ಜೆಡಿಎಸ್ ಮತ್ತು ಬಿಜೆಪಿಯನ್ನು ಎದುರಿಸಲು ಪಕ್ಷಕ್ಕೆ ಸೇರುವಂತೆ ಮನವೊಲಿಸಲು ನಾಯಕರು ಪ್ರಯತ್ನಿಸಿದ್ದರು. 

ಮಾರ್ಚ್ 26 ರಂದು ಚಾಮುಂಡಿ ಬೆಟ್ಟದ ಬಳಿಯ ಉತ್ತನಹಳ್ಳಿಯಲ್ಲಿ ಜೆಡಿಎಸ್ ಪಂಚರತ್ನ ಯಾತ್ರೆಯ ಸಿದ್ಧತೆಗಳನ್ನು ಪರಿಶೀಲಿಸಲು ಮೈಸೂರಿಗೆ ಬಂದಿರುವ ಜೆಡಿಎಸ್ ಶಾಸಕ ಸಿ.ಎಸ್.ಪುಟ್ಟರಾಜು ಅವರು ಸುಮಲತಾ ಬಿಜೆಪಿಗೆ ಸೇರುತ್ತಾರೆ ಎಂದು ನಿನ್ನೆ ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com