ಎಸ್.ಎಂ. ಕೃಷ್ಣ ಭೇಟಿ ಮಾಡಿದ ಸುಮಲತಾ; ಬಿಜೆಪಿ ಸೇರ್ಪಡೆ ಸನ್ನಿಹಿತ; ಮಾಜಿ ಸಿಎಂ ಜೊತೆ ಸಂಸದೆ ಸಮಾಲೋಚನೆ!

ಮಂಡ್ಯ ಲೋಕಸಭಾ ಸದಸ್ಯೆ ಸುಮಲತಾ ಮಾಜಿ ಸಿಎಂ ಎಸ್‌.ಎಂ.ಕೃಷ್ಣ ಅವರನ್ನು ಅವರನ್ನು ಭೇಟಿ ಮಾಡಿ, ಮಹತ್ವದ ಸಮಾಲೋಚನೆ ನಡೆಸಿದರು.
ಎಸ್ ಎಂ ಕೃಷ್ಣ ಮತ್ತು ಸುಮಲತಾ
ಎಸ್ ಎಂ ಕೃಷ್ಣ ಮತ್ತು ಸುಮಲತಾ

ಬೆಂಗಳೂರು: ಮಂಡ್ಯ ಲೋಕಸಭಾ ಸದಸ್ಯೆ ಸುಮಲತಾ ಮಾಜಿ ಸಿಎಂ ಎಸ್‌.ಎಂ.ಕೃಷ್ಣ ಅವರನ್ನು ಅವರನ್ನು ಭೇಟಿ ಮಾಡಿ, ಮಹತ್ವದ ಸಮಾಲೋಚನೆ ನಡೆಸಿದರು.

ಸದಾಶಿವನಗರದ ನಿವಾಸದಲ್ಲಿ ಕೃಷ್ಣ ಅವರನ್ನು ಭೇಟಿ ಮಾಡಿದ ಅವರು, ಜಿಲ್ಲೆಯ ರಾಜಕಾರಣ, ತಮ್ಮ ಭವಿಷ್ಯದ ನಡೆ ಮತ್ತಿತರ ಸಂಗತಿಗಳ ಕುರಿತು ಕೃಷ್ಣ ದಂಪತಿಯೊಂದಿಗೆ ಸುದೀರ್ಘವಾಗಿ ಚರ್ಚಿಸಿದರು. ಪದ್ಮವಿಭೂಷಣ ಪುರಸ್ಕಾರದ ಹಿನ್ನೆಲೆಯಲ್ಲಿ ಕೃಷ್ಣ ಅವರನ್ನು ಸುಮಲತಾ ಈ ಸಂದರ್ಭದಲ್ಲಿ ಅಭಿನಂದಿಸಿದರು.

ಒಬ್ಬ ಮಹಿಳೆ ಹಾಗೂ ಪಕ್ಷೇತರ ಸಂಸದೆಯಾಗಿ ರಾಜಕಾರಣದಲ್ಲಿ ಎದುರಾದ ಹಲವು ಎಡರು -ತೊಡರುಗಳ ಕುರಿತು ಸುಮಲತಾ ಅವರು ಕೃಷ್ಣ ಅವರೊಟ್ಟಿಗೆ ನಾನಾ ಸಂಗತಿಗಳನ್ನು ಈ ಸಂದರ್ಭದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಭವಿಷ್ಯದ ರಾಜಕೀಯ ನಡೆ ಕುರಿತಂತೆ ಕೃಷ್ಣ ಅವರೊಟ್ಟಿಗೆ ಮನಬಿಚ್ಚಿ ಮಾತನಾಡಿದ ಸುಮಲತಾ ಅವರು, ತಮಗೆ ಸೂಕ್ತ ಗೌರವ ನೀಡುವ ಪಕ್ಷಕ್ಕೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅಗತ್ಯ ಸಹಕಾರ ಮತ್ತು ಬೆಂಬಲ ನೀಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಭೇಟಿಯ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಸುಮಲತಾ, ‘ಎಸ್.ಎಂ. ಕೃಷ್ಣ ಅವರು ನಮ್ಮ ಜಿಲ್ಲೆಯ ಹಿರಿಯ ನಾಯಕರು. ಇತ್ತೀಚೆಗೆ ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರಾದ ಅವರನ್ನು ನಾನು  ಭೇಟಿ ಮಾಡಿರಲಿಲ್ಲ. ಇವತ್ತು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ್ದೇನೆ. ಯಾವುದೇ ರಾಜಕೀಯ ವಿಚಾರ ಮಾತನಾಡಿಲ್ಲ’ ಎಂದರು.

ಬಿಜೆಪಿ ಸೇರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ನಾನು ಇನ್ನೂ ಯಾವುದೇ ತೀರ್ಮಾನ ಮಾಡಿಲ್ಲ. ನನ್ನ ಲಾಭ, ನಷ್ಟ ನೋಡಿ ನಿರ್ಧಾರ ಮಾಡುವುದಿಲ್ಲ. ನನ್ನ ಜತೆಗೆ ಇರುವವರನ್ನು ನೋಡಿಕೊಂಡು ನಿರ್ಧಾರ ತೆಗೆದುಕೊಳ್ಳಬೇಕಿದೆ’ ಎಂದರು.

ಬೆಂಬಲಿಗರ ಅಭಿಪ್ರಾಯ ಪಡೆದು ಬಿಜೆಪಿ ಸೇರುವ ಬಗ್ಗೆ ಸುಮಲತಾ ನಿರ್ಧರಿಸಲಿದ್ದಾರೆ. ಬೆಂಬಲಿಗರ ಜತೆಗಿನ ಸಭೆಗೂ ಮೊದಲು ಕೃಷ್ಣ ಅವರನ್ನು ಭೇಟಿ ಮಾಡಿ ಸುಮಲತಾ ಸಲಹೆ ಪಡೆದಿದ್ದಾರೆ ಎನ್ನಲಾಗಿದೆ.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆಗೆ ಸುಮಲತಾ ಅವರು, ಸದ್ಯಕ್ಕೆ ಯಾವುದನ್ನೂ ನಿರ್ಧರಿಸಿಲ್ಲ. "ಜನರು ಯಾವ ಸಾಮರ್ಥ್ಯದಲ್ಲಿ ನನ್ನನ್ನು ನೋಡಲು ಬಯಸುತ್ತಾರೆ ಎಂಬುದನ್ನು ತಿಳಿದುಕೊಳ್ಳಲು ನಾನು ಕಾಯುತ್ತಿದ್ದೇನೆ. ಸಂದರ್ಭಗಳು ಸಹ ನನಗೆ ಅನುಕೂಲಕರವಾಗಿರಬೇಕು. ಈ ಎಲ್ಲಾ ಅಂಶಗಳನ್ನು ನಾನು ಗಣನೆಗೆ ತೆಗೆದುಕೊಳ್ಳಬೇಕಾಗಿದೆ" ಎಂದು ಅವರು ಹೇಳಿದರು. ನಾನು ಯಾವುದೇ ನಿರ್ಧಾರವನ್ನು ತೆಗೆದುಕೊಂಡರು ನನ್ನ ಪರವಾಗಿ ನಿಂತಿರುವ ಜನರಿಗಾಗಿ ತೆಗೆದುಕೊಳ್ಳುತ್ತೇನೆ, ಅವರ ಜೊತೆ ಚರ್ಚಿಸಿಯೇ ತೆಗೆದುಕೊಳ್ಳುತ್ತೇನೆ ಎಂದು ಅವರು ಹೇಳಿದರು.

ನಾನು ಮಂಡ್ಯದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದೇನೆ, ಗೆದ್ದ ಆರು ತಿಂಗಳೊಳಗೆ ಯಾವುದಾದರೂ ಒಂದು ಪಕ್ಷ ಸೇರಬಹುದಿತ್ತು, ಆದರೆ ಮಂಡ್ಯ ಜಿಲ್ಲೆಯನ್ನು ಉತ್ತಮವಾಗಿ ಉತ್ತಮ ಪಡಿಸಬೇಕು ಎಂಬ ಉದ್ದೇಶದಿಂದ ನಾನು ಅದನ್ನು ಮಾಡಲಿಲ್ಲ ಎಂದರು. ಹಿರಿಯ ನಾಯಕರು, ಕುಟುಂಬದ ಸದಸ್ಯರು ಸೇರಿದಂತೆ ಎಲ್ಲರೊಂದಿಗೆ ಚರ್ಚಿಸುತ್ತೇನೆ, ನಾನು ನಿರ್ಧರಿಸುತ್ತೇನೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com