ವಿಧಾನಸಭೆ ಚುನಾವಣೆ ಸನ್ನಿಹಿತ: ರಾಜಕೀಯ ಸಂದಿಗ್ಧತೆಯಲ್ಲಿ ಮಂಡ್ಯ ಸಂಸದೆ ಸುಮಲತಾ ಅಂಬರೀಷ್

ಕರ್ನಾಟಕ ವಿಧಾನಸಭೆ ಚುನಾವಣೆಗೆ ಸಮಯ ಸನ್ನಿಹಿತವಾಗುತ್ತಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಲು ಆರಂಭದಲ್ಲಿ ಟಿಕೆಟ್ ಕೇಳಿ ಸಿಗದಿದ್ದಾಗ ಮಂಡ್ಯದಲ್ಲಿ ಜೆಡಿಎಸ್ ನ ಘಟಾನುಘಟಿ ನಾಯಕರನ್ನು ಎದುರು ಹಾಕಿಕೊಂಡು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದು ಇತಿಹಾಸ ಸೃಷ್ಟಿಸಿದವರು ಸುಮಲತಾ ಅಂಬರೀಷ್.
ಸುಮಲತಾ ಅಂಬರೀಷ್(ಸಂಗ್ರಹ ಚಿತ್ರ)
ಸುಮಲತಾ ಅಂಬರೀಷ್(ಸಂಗ್ರಹ ಚಿತ್ರ)

ಮೈಸೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಸಮಯ ಸನ್ನಿಹಿತವಾಗುತ್ತಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಲು ಆರಂಭದಲ್ಲಿ ಟಿಕೆಟ್ ಕೇಳಿ ಸಿಗದಿದ್ದಾಗ ಮಂಡ್ಯದಲ್ಲಿ ಜೆಡಿಎಸ್ ನ ಘಟಾನುಘಟಿ ನಾಯಕರನ್ನು ಎದುರು ಹಾಕಿಕೊಂಡು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದು ಇತಿಹಾಸ ಸೃಷ್ಟಿಸಿದವರು ಸುಮಲತಾ ಅಂಬರೀಷ್.

ಸಂಸದೆ ಸುಮಲತಾ ಅವರು ಬಿಜೆಪಿಗೆ ಸೇರುತ್ತಿದ್ದಾರೆ ಎಂದು ಆಗಾಗ ಸುದ್ದಿಯಾಗುತ್ತಲೇ ಇದೆ. ಈ ಬಗ್ಗೆ ಅವರನ್ನು ಕೇಳಿದರೆ ಇನ್ನೂ ತೀರ್ಮಾನ ಮಾಡಿಲ್ಲ, ಕ್ಷೇತ್ರದ ಕಾರ್ಯಕರ್ತರು, ನಾಯಕರ ಅಭಿಪ್ರಾಯ ಪಡೆದು ಮುಂದುವರಿಯುತ್ತೇನೆ ಎನ್ನುತ್ತಾರೆ. ಈ ಹೊತ್ತಿನಲ್ಲಿ ಅವರ ಬೆಂಬಲಿಗರು ಯಾವುದಾದರೊಂದು ರಾಜಕೀಯ ಪಕ್ಷಕ್ಕೆ ಸೇರಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಎಂದು ಒತ್ತಡ ಹೇರುತ್ತಿದ್ದಾರಂತೆ. ಇಂತಹ ಪರಿಸ್ಥಿತಿಯಲ್ಲಿ ಸುಮಲತಾ ಅಂಬರೀಷ್ ಗೊಂದಲದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.

ಸುಮಲತಾ ಅವರ ಮೇಲೆ ಒತ್ತಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಿರುವಾಗ ಮುಂದೆ ರಾಜಕೀಯವಾಗಿ ಯಾವ ದಾರಿ ಹಿಡಿಯಲಿ, ಏನು ನಿರ್ಧಾರ ಕೈಗೊಳ್ಳಲಿ ಎಂಬ ಗೊಂದಲ, ಇಕ್ಕಟ್ಟಿನಲ್ಲಿ ಮಂಡ್ಯ ಸಂಸದೆ ಇದ್ದಾರಂತೆ. ರಾಜಕೀಯ ಪಕ್ಷ ಸೇರುವುದಾದರೂ ಯಾವ ಪಕ್ಷಕ್ಕೆ ಸೇರಿಕೊಳ್ಳಲಿ, ಕಾಂಗ್ರೆಸ್ ಅಥವಾ ಬಿಜೆಪಿಯೇ ಎಂಬ ಸಂದಿಗ್ಧದಲ್ಲಿದ್ದಾರಂತೆ. 

ಮಂಡ್ಯದಲ್ಲಿ ಮತ್ತು ರಾಜ್ಯ ಮಟ್ಟದಲ್ಲಿ ಸ್ವತಂತ್ರ ಸಂಸದೆಯಾಗಿ ಸುಮಲತಾ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳ ನಾಯಕರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. 2019ರಲ್ಲಿ ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಯ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಯವರನ್ನು ಕಣಕ್ಕಿಳಿಸಿದ್ದರೂ ಕೂಡ ಅಲ್ಲಿನ ಕಾಂಗ್ರೆಸ್ ನಾಯಕರು ರಹಸ್ಯವಾಗಿ ಸುಮಲತಾ ಅವರನ್ನು ಬೆಂಬಲಿಸಿದ್ದು ಸುಳ್ಳಲ್ಲ. 

ಸ್ವತಂತ್ರ ಸಂಸದೆಯಾಗಿ ಕೇಂದ್ರದಿಂದ ಮಂಡ್ಯ ಕ್ಷೇತ್ರಕ್ಕೆ ಅಭಿವೃದ್ಧಿ ಕಾರ್ಯಗಳಿಗೆ ಅನುದಾನವನ್ನು ತರುವಲ್ಲಿ ಮತ್ತು ರಾಜ್ಯ ಸರ್ಕಾರದೊಂದಿಗೆ ನಿಕಟವಾಗಿ ಕೆಲಸ ಮಾಡುವಲ್ಲಿ ಬಹಳ ಪ್ರಯೋಜನಕಾರಿಯಾಗಿದೆ. ಮತ್ತೊಂದೆಡೆ, ಅವರು ತಮ್ಮ ಪತಿ ದಿವಂಗತ ಎಂಎಚ್ ಅಂಬರೀಶ್ ಅವರ ಸ್ಥಳೀಯ ನಿಕಟವರ್ತಿ ಕಾಂಗ್ರೆಸ್ ನಾಯಕರ ಜೊತೆಗೆ ಕೂಡ ಉತ್ತಮ ಬಾಂಧವ್ಯ ಇರಿಸಿಕೊಂಡಿದ್ದು ಬಿಜೆಪಿ ಸೇರಿ ಅವರ ನಂಬಿಕೆ, ವಿಶ್ವಾಸ ಕಳೆದುಕೊಳ್ಳಲು ಮನಸ್ಸು ಒಪ್ಪುತ್ತಿಲ್ಲ. 

ಸುಮಲತಾ ಅವರಿಗೆ ಜೆಡಿಎಸ್ ರಾಜಕೀಯವಾಗಿ ಮುಖ್ಯ ವೈರಿ ಪಕ್ಷ. ಜೆಡಿಎಸ್ ನ ನಾಯಕರು, ಮಂಡ್ಯದಲ್ಲಿನ ಜೆಡಿಎಸ್ ಶಾಸಕರು ಆಗಾಗ ಅವರ ಮೇಲೆ ಆರೋಪಗಳನ್ನು ಮಾಡುತ್ತಲೇ ಬಂದಿದ್ದಾರೆ. ಮಂಡ್ಯ ಜಿಲ್ಲೆ ಒಕ್ಕಲಿಗರ ಪ್ರಾಬಲ್ಯವಿರುವ ಕ್ಷೇತ್ರ, ಅಲ್ಲಿ ಇನ್ನೂ ಬಿಜೆಪಿ ತನ್ನ ಶಕ್ತಿ, ಸಾಮರ್ಥ್ಯವನ್ನು ಮೆರೆದಿಲ್ಲ. ಹೀಗಾಗಿ ಸುಮಲತಾ ಅವರು ಬಿಜೆಪಿ ಸೇರಿದರೆ ಚುನಾವಣೆಯಲ್ಲಿ ಅವರಿಗೆ ಕಷ್ಟವಾಗಲೂಬಹುದು.

ಕಾಂಗ್ರೆಸ್ ಗೆ ಸೇರಬಹುದು ಎಂದು ನೋಡಿದರೆ, ಸುಮಲತಾ ಅವರು ಬಿಜೆಪಿಯ ಕೇಂದ್ರ ಮತ್ತು ರಾಜ್ಯ ನಾಯಕರೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ. ಕಾಂಗ್ರೆಸ್ ನಾಯಕರ ಜೊತೆ ಕೈಜೋಡಿಸಿದರೆ ಭವಿಷ್ಯದಲ್ಲಿ ಅವರಿಗೆ ತೊಂದರೆಯಾಗಲೂಬಹುದು. ಕಾಂಗ್ರೆಸ್ ಗೆ ಸೇರಿದರೆ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಬೇಕಾಗಿಬರಬಹುದು. ಕೇಂದ್ರದಿಂದ ಮಂಡ್ಯ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗೆ ತರುವ ಅನುದಾನ, ಮಾಡಿಸಿಕೊಳ್ಳುವ ಕೆಲಸಗಳ ಮೇಲೆ ಪರಿಣಾಮ ಬೀರಬಹುದು.

ಈ ಮಧ್ಯೆ ಇತ್ತೀಚೆಗೆ ಮಂಡ್ಯದಲ್ಲಿ ಅಂಬರೀಷ್ ಅಭಿಮಾನಿಗಳು ರಹಸ್ಯ ಸಭೆ ನಡೆಸಿ ಸುಮಲತಾ ಅವರು ರಾಜ್ಯ ರಾಜಕೀಯಕ್ಕೆ ಪ್ರವೇಶಿಸಿ ಮಂಡ್ಯ, ಮೇಲುಕೋಟೆ ಅಥವಾ ಮದ್ದೂರಿನಿಂದ ಸ್ಪರ್ಧಿಸಲು ಹೇಳುವಂತೆ ತೀರ್ಮಾನಿಸಿದ್ದಾರಂತೆ. ಇತ್ತೀಚೆಗೆ ಜೆಡಿಎಸ್ ಶಾಸಕ ಸಿ ಎಸ್ ಪುಟ್ಟರಾಜು ಸುಮಲತಾ ಅವರ ಬಗ್ಗೆ ನೀಡಿದ್ದ ಹೇಳಿಕೆಗೆ ತೀವ್ರ ಆಕ್ಷೇಪ ಹೊರಹಾಕಿದ್ದು ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕೆಂದು ತೀರ್ಮಾನಿಸಿದ್ದಾರಂತೆ.

ಇನ್ನು ಕೆಲವರು ಸುಮಲತಾ ಅವರು ಶ್ರೀರಂಗಪಟ್ಟಣದಲ್ಲಿ ಬಿಜೆಪಿಗೆ ಬೆಂಬಲಿಸಬೇಕೆಂದು ನೋಡುತ್ತಿದ್ದಾರಂತೆ. ಈ ಮೂಲಕ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರನ್ನು ಸೋಲಿಸಬೇಕೆಂಬ ಹಠ ಅವರಲ್ಲಿ. ಸದ್ಯ ಅಭಿಮಾನಿಗಳು ಎರಡು ಭಾಗಗಳಾಗಿದ್ದು ಸುಮಲತಾ ಅವರು ಏನೇ ತೀರ್ಮಾನ ತೆಗೆದುಕೊಂಡರೂ ಅದಕ್ಕೆ ಬದ್ಧ ಎಂದಿದ್ದಾರೆ.

ಈ ಮಧ್ಯೆ ಸುಮಲತಾ ಅವರ ಮಗ ನಟ ಅಭಿಷೇಕ್ ನನ್ನೂ ರಾಜಕೀಯಕ್ಕೆ ತರಬೇಕು, ಮದ್ದೂರಿನಿಂದ ಸ್ಪರ್ಧಿಸಬೇಕೆಂದು ಅವರ ಅಭಿಮಾನಿಗಳು ಒತ್ತಡ ಹಾಕುತ್ತಿದ್ದಾರೆ. ಏನೇ ಇದ್ದರೂ ವಿಧಾನಸಭೆ ಚುನಾವಣೆ ಸನ್ನಿಹಿತವಾಗಿರುವುದರಿಂದ ಸುಮಲತಾ ಅವರು ನಿರ್ಧಾರ ತೆಗೆದುಕೊಳ್ಳಲು ಇದು ಸರಿಯಾದ ಸಮಯ ಎಂದು ಹೆಸರು ಹೇಳಲಿಚ್ಛಿಸದ ಅವರ ನಿಕಟವರ್ತಿಯೊಬ್ಬರು ಹೇಳುತ್ತಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com