2004ರ ವಿಧಾನಸಭೆ ಚುನಾವಣೆ: ಒಂದೇ ಒಂದು ಮತದಿಂದ ಗೆದ್ದು ದಾಖಲೆ ಸೃಷ್ಟಿಸಿದ್ದ 'ಕಾಯಕಯೋಗಿ' ಧ್ರುವನಾರಾಯಣ್!

ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ಕಾಂಗ್ರೆಸ್ ಗೆ ಮತ್ತೊಂದು ಆಘಾತ ಬಂದೆರಗಿದೆ, ಹಳೇ ಮೈಸೂರು ಭಾಗದ ಪ್ರಬಲ ನಾಯಕ, ಹಿರಿಯ ಕಾಂಗ್ರೆಸ್‌ ಮುಖಂಡ ಆರ್ ಧ್ರುವನಾರಾಯಣ ಅಕಾಲಿಕ ಮರಣ ರಾಜ್ಯ ಕಾಂಗ್ರೆಸ್ ಗೆ ತುಂಬಲಾರದ ನಷ್ಟವಾಗಿದೆ.
ಆರ್. ಧ್ರುವನಾರಾಯಣ ಮತ್ತು ಎ.ಆರ್‌.ಕೃಷ್ಣಮೂರ್ತಿ
ಆರ್. ಧ್ರುವನಾರಾಯಣ ಮತ್ತು ಎ.ಆರ್‌.ಕೃಷ್ಣಮೂರ್ತಿ

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ಕಾಂಗ್ರೆಸ್ ಗೆ ಮತ್ತೊಂದು ಆಘಾತ ಬಂದೆರಗಿದೆ, ಹಳೇ ಮೈಸೂರು ಭಾಗದ ಪ್ರಬಲ ನಾಯಕ, ಹಿರಿಯ ಕಾಂಗ್ರೆಸ್‌ ಮುಖಂಡ ಆರ್ ಧ್ರುವನಾರಾಯಣ ಅಕಾಲಿಕ ಮರಣ ರಾಜ್ಯ ಕಾಂಗ್ರೆಸ್ ಗೆ ತುಂಬಲಾರದ ನಷ್ಟವಾಗಿದೆ.

ಮೂಲತಃ ಚಾಮರಾಜನಗರ ಜಿಲ್ಲೆಯ ಹೆಗ್ಗವಾಡಿಯವರಾದ ಆರ್ ಧ್ರುವ ನಾರಾಯಣ್‌ 1961ರ ಜುಲೈ 31ರಂದು ಜನಿಸಿದ್ದರು. ಕಾರ್ಯಾಧ್ಯಕ್ಷರಾಗಿ ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಪ್ರಬಲವಾಗಿ ಸಂಘಟಿಸಿದ್ದರು.

ಚಾಮರಾಜನಗರದ ಸಂಸದರಾಗಿ ಎರಡು ಬಾರಿ, ಸಂತೇಮರಹಳ್ಳಿ ವಿಧಾನಸಭಾ ಕ್ಷೇತ್ರ ಮತ್ತು ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ತಲಾ ಒಂದು ಬಾರಿ ಆಯ್ಕೆಯಾಗಿದ್ದ ಧ್ರುವನಾರಾಯಣ ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ‘ಕಾಯಕ ಯೋಗಿ’ ಎಂದೇ ಗುರುತಿಸಿಕೊಂಡಿದ್ದವರು.  ಮೂರು ಬಾರಿ ವಿಧಾನಸಭೆಗೆ, ಮೂರು ಬಾರಿ ಲೋಕಸಭೆಗೆ ಸ್ಪರ್ಧಿಸಿದ್ದ ಅವರು ನಾಲ್ಕು ಬಾರಿ ಗೆದ್ದಿದ್ದರೆ, ಇನ್ನೆರಡು ಬಾರಿ ಸೋತಿದ್ದರು.

2004ರ ವಿಧಾನಸಭಾ ಚುನಾವಣೆಯಲ್ಲಿ ಸಂತೇಮರಹಳ್ಳಿ ಕ್ಷೇತ್ರದಲ್ಲಿ ಎ.ಆರ್‌.ಕೃಷ್ಣಮೂರ್ತಿ ಅವರ ವಿರುದ್ಧ ಒಂದು ಮತದಿಂದ ರೋಚಕವಾಗಿ ಗೆದ್ದು ದೇಶದಾದ್ಯಂತ ಧ್ರುವನಾರಾಯಣ ಸುದ್ದಿಯಾಗಿದ್ದರು. ಚಾಮರಾಜನಗರ ಜಿಲ್ಲೆಯಲ್ಲಿ ರಾಜಕೀಯ ಜೀವನವನ್ನು ಈ ಗೆಲುವಿನೊಂದಿಗೆ ಭದ್ರಪಡಿಸಿದ್ದರು. ಕ್ಷೇತ್ರ ಮರುವಿಂಗಡಣೆಯ ನಂತರ ಸಂತೇಮರಹಳ್ಳಿ ಕ್ಷೇತ್ರ ಇರಲಿಲ್ಲ. 2008ರ ಚುನಾವಣೆಯಲ್ಲಿ ಕೊಳ್ಳೇಗಾಲದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ ಎರಡನೇ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿದ್ದರು.

2009ರ ಲೋಕಸಭೆಯಲ್ಲಿ ಕಾಂಗ್ರೆಸ್‌ ಪಕ್ಷವು ಧ್ರುವನಾರಾಯಣ ಅವರನ್ನು ಚಾಮರಾಜನಗರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಿಸಿತು. ಬಿಜೆಪಿಯ ಅಭ್ಯರ್ಥಿಯಾಗಿದ್ದ ಎ.ಆರ್.ಕೃಷ್ಣಮೂರ್ತಿ ವಿರುದ್ಧ 4,002 ಮತಗಳ ಅಂತರದಿಂದ ಗೆದ್ದು ರಾಷ್ಟ್ರರಾಜಕಾರಣಕ್ಕೆ ಹೋದರು. ಸಂಸದರಾಗಿ ಆಯ್ಕೆಯಾದ ನಂತರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

2019ರ ಚುನಾವಣೆಯಲ್ಲಿ ಹ್ಯಾಟ್ರಿಕ್‌ ಗೆಲುವು ಸಾಧಿಸುವ ನಿರೀಕ್ಷೆಯಲ್ಲಿದ್ದರು. ಆದರೆ ಬಿಜೆಪಿಯಿಂದ ಸ್ಪರ್ಧಿಸಿದ್ದ ವಿ.ಶ್ರೀನಿವಾಸ ಪ್ರಸಾದ್‌ ವಿರುದ್ಧ 1,817 ಮತಗಳ ಅಂತರದಲ್ಲಿ ಸೋತು, ನಿರಾಸೆ ಅನುಭವಿಸಿದ್ದರು.

ಫಲಿತಾಂಶದ ಬಳಿಕ ಅವರು ಪಕ್ಷದ ಸಂಘಟನೆಯಲ್ಲಿ ತೊಡಗಿದ್ದರು. ವರಿಷ್ಠರು ಅವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರನ್ನಾಗಿ ಮಾಡಿ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆ ಮಾಡುವ ಜವಾಬ್ದಾರಿ ಹೊರಿಸಿತ್ತು. ಮತ್ತೆ ರಾಜ್ಯ ರಾಜಕಾರಣಕ್ಕೆ ಬರಲು ಇಚ್ಛಿಸಿದ್ದ ಅವರು ಈ ಬಾರಿಯ ಚುನಾವಣೆಯಲ್ಲಿ ನಂಜನಗೂಡು ಕ್ಷೇತ್ರದಿಂದ ಟಿಕೆಟ್‌ ಬಯಸಿದ್ದರು. ಕ್ಷೇತ್ರದಲ್ಲಿ ಪ್ರಚಾರವನ್ನೂ ಆರಂಭಿಸಿದ್ದರು. ಅವರಿಗೆ ಟಿಕೆಟ್‌ ನೀಡುವುದು ನಿಚ್ಚಳವೂ ಆಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com