ಕಾಂಗ್ರೆಸ್-ಎಸ್‌ಡಿಪಿಐ ನಂಟು ಕುರಿತು ಉನ್ನತ ಮಟ್ಟದ ತನಿಖೆಯಾಗಬೇಕು: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಕಾಂಗ್ರೆಸ್‌ ಮತ್ತು ಎಸ್‌ಡಿಪಿಐ ನಡುವಿನ ಸಂಬಂಧದ ಕುರಿತು ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರು ಶುಕ್ರವಾರ ಹೇಳಿದ್ದಾರೆ.
ಶೋಭಾ ಕರಂದ್ಲಾಜೆ
ಶೋಭಾ ಕರಂದ್ಲಾಜೆ
Updated on

ಬೆಂಗಳೂರು: ಕಾಂಗ್ರೆಸ್‌ ಮತ್ತು ಎಸ್‌ಡಿಪಿಐ ನಡುವಿನ ಸಂಬಂಧದ ಕುರಿತು ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರು ಶುಕ್ರವಾರ ಹೇಳಿದ್ದಾರೆ.

ಶುಕ್ರವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಎಸ್‌ಡಿಪಿಐ ಒಂದೇ ನಾಣ್ಯದ ಎರಡು ಮುಖಗಳು. ಅವುಗಳ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಎಸ್‌ಡಿಪಿಐ ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಜೊತೆ ಕಾಂಗ್ರೆಸ್‌ನ ನಂಟು ಕುರಿತು ತನಿಖೆ ಮತ್ತು ಚರ್ಚೆಯ ಅಗತ್ಯವಿದೆ ಎಂದು ಹೇಳಿದರು.

ಇತ್ತೀಚೆಗೆ ಮಂಗೂರಿನಲ್ಲಿ ನಡೆದ ಸ್ಫೋಟದಲ್ಲಿ ಭಾಗಿಯಾಗಿರುವವರನ್ನು ಕಾಂಗ್ರೆಸ್ ನಾಯಕರು ಬೆಂಬಲಿಸಿದ್ದಾರೆ, ವಿದೇಶದ ನೆಲದಲ್ಲಿ ದೇಶ ಮತ್ತು ಪ್ರಧಾನಿ ವಿರುದ್ಧ ಮಾತನಾಡಿದ್ದಾರೆ. ಕಾಂಗ್ರೆಸ್ ದೇಶ ವಿರೋಧಿಗಳನ್ನು ಬೆಂಬಲಿಸುತ್ತಿದೆ ಎಂದು ಆರೋಪಿಸಿದರು.

ಪಿಎಫ್‌ಐ ಅನ್ನು ನಿಷೇಧಿಸಿದ ನಂತರ, ಅದರ ಕಾರ್ಯಕರ್ತರು ಈಗ ಎಸ್‌ಡಿಪಿಐಗೆ ಸೇರಿದ್ದಾರೆ. ಪಿಎಫ್‌ಐನ ರಾಜಕೀಯ ಮುಖವಾಡ ಮತ್ತು ರಾಜಕೀಯ ಮುಖವಾಣಿ ಎಸ್‌ಡಿಪಿಐ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸುಮಾರು 116 ಕೇಸುಗಳಲ್ಲಿ ಸಿಕ್ಕಿ ಬಿದ್ದು ಬಂಧನವಾಗಿದ್ದ 1700 ಪಿಎಫ್‌ಐ ಮತ್ತು ಎಫ್‌ಡಿಎ ಮುಖಂಡರು ಮತ್ತು ಕಾರ್ಯಕರ್ತರನ್ನು ಬಿಡುಗಡೆ ಮಾಡಿತ್ತು ಆರೋಪಿಸಿದರು.

ಎಸ್‌ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹೇಳಿಕೆಯಿಂದ ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯನವರು ಪಿಎಫ್‌ಐ-ಎಸ್‌ಡಿಪಿಐಗೆ ಸಹಾಯ ಮಾಡಿರುವುದು, ಅವರ ಕೇಸುಗಳಿಗೆ ಬಿ ರಿಪೋರ್ಟ್‌ ಹಾಕಿ ಬಂಧಿತರನ್ನು ಜೈಲಿನಿಂದ ಬಿಡುಗಡೆ ಮಾಡಿರುವುದು ಸ್ಪಷ್ಟವಾಗಿದೆ. ಎಸ್‌ಡಿಪಿಐ ಜೊತೆ ಹೊಂದಾಣಿಕೆ ರಾಜಕೀಯವನ್ನು ಮಾಡಿಕೊಂಡಿರುವುದು ದೃಢಪಟ್ಟಿದೆ. ಒಂದು ಸಮುದಾಯವನ್ನು ಓಲೈಕೆ ಮಾಡಲು ಕೇಸು ರದ್ದು ಮಾಡಿರುವುದು ಗೊತ್ತಾಗಿದೆ ಎಂದರು.

ಕಾಂಗ್ರೆಸ್‌ ಮತ್ತು ಪಿಎಫ್‌ಐಗೆ ಹಾಗೂ ಕಾಂಗ್ರೆಸ್‌ ಮತ್ತು ಎಸ್‌ಡಿಪಿಐಗೆ ಇರುವ ಸಂಬಂಧದ ಸತ್ಯಾಸತ್ಯತೆ ಅರ್ಥ ಆಗಬೇಕು. ಕಾಂಗ್ರೆಸ್‌ ಮತ್ತು ಹಳೆಯ ಪಿಎಫ್‌ಐ ಹಾಗೂ ಇವತ್ತಿನ ಎಸ್‌ಡಿಪಿಐ ಒಂದೇ ನಾಣ್ಯದ ಎರಡು ಮುಖ ಎಂಬುದು ಸಾಬೀತಾಗುತ್ತಿದೆ. ಅದಕ್ಕಾಗಿ ಇವತ್ತು ಕಾಂಗ್ರೆಸ್‌ ಮತ್ತು ಎಸ್‌ಡಿಪಿಐ ಸಂಬಂಧ ಕುರಿತಾಗಿ ತನಿಖೆ ಆಗಬೇಕು. ಈ ಬಗ್ಗೆ ಚರ್ಚೆಯಾಗಬೇಕು. ಜನ ಇದರ ಬಗ್ಗೆ ಅರ್ಥ ಮಾಡಿಕೊಳ್ಳಬೇಕು ಮತ್ತು ಕಾಂಗ್ರೆಸ್‌ನ ಮಾನಸಿಕತೆ ಏನು ಎಂಬುದು ತಿಳಿಯಬೇಕು ಎಂದು ಹೇಳಿದರು.

ದೇಶದಲ್ಲಿ ಭಯೋತ್ಪಾದನಾ ಚಟುವಟಿಕೆ, ದೇಶದ್ರೋಹಿ ಚಟುವಟಿಕೆ ಬಲಪಡಿಸಲು ಮೂಲ ಕಾರಣ ಮತ್ತು ಕುಮ್ಮಕ್ಕು ನೀಡಿದವರು ಕಾಂಗ್ರೆಸ್‌ನವರು. ಈ ನಿಜ ಬಣ್ಣವನ್ನು ಜನರು ಜನರು ಅರ್ಥ ಮಾಡಿಕೊಳ್ಳಬೇಕು. ಉನ್ನತ ಮಟ್ಟದ ತನಿಖೆ ಆದಾಗ ನಿಜವಾದ ಅವರ ನಡುವಿನ ಸಂಬಂಧ ಹೊರಕ್ಕೆ ಬರಲಿದೆ ಎಂದು ತಿಳಿಸಿದರು.

ಹೈದರ್ ಅಲಿ ಮತ್ತು ಟಿಪ್ಪು ಮೈಸೂರು ರಾಜನನ್ನು ವಂಚಿಸಿದ್ದರು. ನಂದಿ ಬೆಟ್ಟದ 'ಟಿಪ್ಪು ಡ್ರಾಪ್' ಹಿಂದೂಗಳನ್ನು ಕೊಂದ ಸ್ಥಳವಾಗಿದೆ. ಸೋದರರಾದ ಊರಿಗೌಡ ಮತ್ತು ನಂಜೇಗೌಡರು ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದರು. ಮೈಸೂರು ರಾಜ್ಯವನ್ನು ರಕ್ಷಿಸಿದರು. ಉರಿಗೌಡ, ನಂಜೇಗೌಡರನ್ನು ಹೀರೋ ಎಂದು ಬಣ್ಣಿಸಿದರೆ, ಕಾಂಗ್ರೆಸ್, ಜೆಡಿಎಸ್'ಗೆ ಸಮಸ್ಯೆ ಏಕೆ? ಎಂದು ಪ್ರಶ್ನಿಸಿದರು. ಈ ಹಿಂದೆ ಅಧಿಕಾರದಲ್ಲಿದ್ದವರ ಗುಲಾಮ ಮನಸ್ಥಿತಿಯಿಂದಾಗಿ ಊರೇಗೌಡ ಮತ್ತು ನಂಜೇಗೌಡರ ಇತಿಹಾಸವನ್ನು ಎತ್ತಿ ಹಿಡಿಯಲಾಗಲಿಲ್ಲ ಎಂದರು.

ಒಕ್ಕಲಿಗ ಸಮುದಾಯಕ್ಕೆ ಸೇರಿದ ಉರಿಗೌಡ ಮತ್ತು ನಂಜೇಗೌಡರು ಟಿಪ್ಪು ಸುಲ್ತಾನ್‌ನನ್ನು ಕೊಂದಿದ್ದರು ಎಂದು ಬಿಜೆಪಿ ನಾಯಕರು ಹೇಳುತ್ತಿದ್ದರೆ, ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರು ಇದೊಂದು ಕಟ್ಟುಕಥೆ ಎಂದು ಹೇಳುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com