ಸಿಎಂ ತವರು ಶಿಗ್ಗಾವಿಯಲ್ಲೇ ಬಿಜೆಪಿಗೆ ಆಘಾತ; ಬೊಮ್ಮಾಯಿ ಆಪ್ತ ಸೇರಿ ಹಲವರು ಕಾಂಗ್ರೆಸ್ ಸೇರ್ಪಡೆ, 'ಬಿಜೆಪಿ ಶೋಚನೀಯ ಸ್ಥಿತಿಗೆ ಸಾಕ್ಷಿ'
ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸಿರುವ ಬಿಜೆಪಿಗೆ ಸಿಎಂ ತವರು ಶಿಗ್ಗಾವಿಯಲ್ಲೇ ಆಘಾತ ಎದುರಾಗಿದ್ದು, ಬಸವರಾಜ ಬೊಮ್ಮಾಯಿ ಆಪ್ತರೆಂದೇ ಹೇಳಲಾಗುತ್ತಿದ್ದ ಶಿಗ್ಗಾಂವಿ ಕ್ಷೇತ್ರದ ಮಾಜಿ ಸಂಸದ ಮಂಜುನಾಥ್ ಕುನ್ನೂರು ಸೇರಿದಂತೆ ಹಲವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಮಂಜುನಾಥ್ ಕುನ್ನೂರು ಮತ್ತು ಅವರ ಪುತ್ರ ರಾಜು ಕುನ್ನೂರು, ಚಿಂತಾಮಣಿಯ ನಾಯಕರಾದ ಎಂ.ಸಿ. ಸುಧಾಕರ್ ಹಾಗೂ ಕೆ.ಆರ್ ಪೇಟೆ ಕ್ಷೇತ್ರದ ಜೆಡಿಎಸ್ ನಾಯಕ ಶ್ರೀ ಬಿ.ಎಲ್ ದೇವರಾಜು ಅವರು ಇಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಮ್ಮುಖದಲ್ಲಿ ಕಾಂಗ್ರೆಸ್ಗೆ ಸೇರ್ಪಡೆಯಾದರು.
ಇಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಮ್ಮುಖದಲ್ಲಿ ಈ ಎಲ್ಲ ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಮಾಜಿ ಸಚಿವರಾದ ಪ್ರಿಯಾಂಕ್ ಖರ್ಗೆ, ರೆಹಮಾನ್ ಖಾನ್, ಚಲುವರಾಯಸ್ವಾಮಿ, ನರೇಂದ್ರಸ್ವಾಮಿ ಉಪಸ್ಥಿತರಿದ್ದರು.
ಬಿಜೆಪಿ ಶೋಚನೀಯ ಸ್ಥಿತಿಗೆ ಇದು ಸಾಕ್ಷಿ: ಡಿಕೆಶಿ
ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು, 'ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಲಗೈ ಭಂಟನಂತೆ ಇದ್ದ ಶಿಗ್ಗಾಂವ್ ಕ್ಷೇತ್ರದ ಬಿಜೆಪಿ ನಾಯಕ, ಮಾಜಿ ಸಂಸದ ಹಾಗೂ ಮಾಜಿ ಶಾಸಕ ಮಂಜುನಾಥ್ ಕುನ್ನೂರ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದು, ಬಿಜೆಪಿಯ ಶೋಚನೀಯ ಸ್ಥಿತಿಗೆ ಇದು ಸಾಕ್ಷಿ' ಎಂದು ವ್ಯಂಗ್ಯವಾಡಿದರು.
‘ರಾಜ್ಯದ ಮುಖ್ಯಮಂತ್ರಿಗಳು ತನ್ನ ಆಪ್ತರನ್ನೇ ವಿಶ್ವಾಸಕ್ಕೆ ತೆಗೆದುಕೊಳ್ಳದಿರುವಾಗ ರಾಜ್ಯದ ಜನರ ವಿಶ್ವಾಸ ಗಳಿಸಲು ಸಾಧ್ಯವೇ? ಮಂಜುನಾಥ್ ಕುನ್ನೂರ ಅವರು ಲೋಕಸಭೆ ಮಾಜಿ ಸದಸ್ಯರು, ಮೂರು ಬಾರಿ ಶಾಸಕರಾಗಿದ್ದರು. ಅವರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಬೇಷರತ್ ಸೇರುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕತ್ವ ಹಾಗೂ ಸಿದ್ಧಾಂತ ಒಪ್ಪಿ ಕಾಂಗ್ರೆಸ್ ಸೇರುತ್ತಿದ್ದಾರೆ. ಬಿಜೆಪಿ ನಾಯಕರೇ ಮುಖ್ಯಮಂತ್ರಿ ಕ್ಷೇತ್ರದಲ್ಲಿ ಬದಲಾವಣೆ ಬಯಸಿದ್ದಾರೆ ಎಂಬುದಕ್ಕೆ ಇದು ಸಾಕ್ಷಿ. ಈ ಸೇರ್ಪಡೆ ಶಿಗ್ಗಾಂವ್ ಕ್ಷೇತ್ರದಲ್ಲಿ ಮುಂಬರುವ ಚುನಾವಣೆ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ. ಮಂಜುನಾಥ್ ಹಾಗೂ ಅವರ ಜತೆ ಬಂದಿರುವ ಎಲ್ಲ ನಾಯಕರಿಗೆ ನಾನು ಹೃದಯಪೂರ್ವಕವಾಗಿ ಪಕ್ಷಕ್ಕೆ ಸ್ವಾಗತಿಸುತ್ತೇನೆ’ ಎಂದರು.
ಚಿಂತಾಮಣಿಯ ಜೆಡಿಎಸ್ ನಾಯಕರನ್ನು ಸೇರ್ಪಡೆ ಮಾಡಿಕೊಂಡು, ‘ಜಾತ್ಯಾತೀತ ಜನತಾದಳ ತ್ಯಜಿಸಿ ಚಿಂತಾಮಣಿ ಕ್ಷೇತ್ರದ ಮೂವರು ಪ್ರಮುಖ ನಾಯಕರು ಇಂದು ಕಾಂಗ್ರೆಸ್ ಸೇರುತ್ತಿದ್ದಾರೆ. ಪಕ್ಷದ ಸಿದ್ಧಾಂತ, ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ನಾಯಕತ್ವದ ಮೇಲೆ ನಂಬಿಕೆ ಇಟ್ಟು ಪಕ್ಷ ಸೇರುತ್ತಿದ್ದಾರೆ.
ಯುವ ಮಿತ್ರ ಸುಧಾಕರ್ ಅವರು ಸಾಕಷ್ಟು ಬಾರಿ ನನ್ನ ಭೇಟಿ ಮಾಡಿ ಪಕ್ಷ ಸೇರ್ಪಡೆ ಬಗ್ಗೆ ತಿಳಿಸಿದ್ದರು. ಇಂದು ಪಕ್ಷ ಸೇರ್ಪಡೆ ಹಾಗೂ ವಿವಿಧ ಸಭೆಗಳಿರುವ ಕಾರಣ ರಾಮನಗರ ಪ್ರಜಾಧ್ವನಿ ಯಾತ್ರೆ ರದ್ದು ಮಾಡಿದ್ದೇನೆ. ಇಂದು ಚಿಂತಾಮಣಿಯ ರಿಯಾಜ್ ಪಾಷಾ, ಮಹೇಶ್, ಭಾಸ್ಕರ್, ಕೃಷ್ಣಾ ರೆಡ್ಡಿ ಅಮರ್, ಮಹಮದ್ ಶಫಿವುಲ್ಲಾ, ಸಾಮ್ರಾಟ್, ಇರ್ಫಾನ್ ಖಾನ್, ಆರ್. ಪ್ರಸಾದ್, ವೆಂಕಟರೆಡ್ಡಿ, ನವೀನ್, ವಿಜಯ್, ಶ್ರೀನಿವಾಸ್ ಯಾದವ್ ಸೇರಿದಂತೆ ವಿವಿಧ ಸಮುದಾಯದ ಅನೇಕ ಮುಖಂಡರು ಪಕ್ಷ ಸೇರುತ್ತಿದ್ದಾರೆ. ನಮ್ಮ ಪಕ್ಷಕ್ಕೆ ಮಾತ್ರವಲ್ಲ, ರಾಜ್ಯ ಹಾಗೂ ದೇಶಕ್ಕೆ ಶಕ್ತಿ ತುಂಬಲು ನೀವೆಲ್ಲ ಕಾಂಗ್ರೆಸ್ ಸೇರುತ್ತಿದ್ದೀರಿ. ನಿಮಗೆ ಸ್ವಾಗತ ಕೋರುತ್ತೇನೆ ಎಂದರು.
ಕೆ.ಆರ್ ಪೇಟೆಯ ಜೆಡಿಎಸ್ ನಾಯಕ ದೇವರಾಜ್ ಅವರನ್ನು ಪಕ್ಷಕ್ಕೆ ಸ್ವಾಗತಿಸಿ, ‘ಮಂಡ್ಯ ಜಿಲ್ಲೆಯ ರಾಜಕೀಯ ಇಂದು ಹೊಸ ತಿರುವು ಪಡೆಯುತ್ತಿದೆ. ಬಹಳಷ್ಟು ನಾಯಕರು ಜೆಡಿಸ್ ಬಿಟ್ಟು ಕಾಂಗ್ರೆಸ್ ಸೇರುತ್ತಿದ್ದಾರೆ. ಕಳೆದ ಕೆ.ಆರ್. ಪೇಟೆ ಉಪಚುನಾವಣೆಯಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿ ಎರಡನೇ ಸ್ಥಾನ ಪಡೆದಿದ್ದ ದೇವರಾಜ್ ಅವರು ಇಂದು ಕಾಂಗ್ರೆಸ್ ಸೇರುತ್ತಿದ್ದಾರೆ. ಈ ಉಪಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಚಂದ್ರಶೇಖರ್ ಅವರನ್ನು ಗೆಲ್ಲಿಸಲು ಪ್ರಯತ್ನಿಸಿದೆವು. ಆದರೆ ಅವರು 3ನೇ ಸ್ಥಾನ ಪಡೆಯಬೇಕಾಯಿತು. ಆಪರೇಷನ್ ಕಮಲದಿಂದ ಬಿಜೆಪಿ ಸೇರಿದ ಅಭ್ಯರ್ಥಿ ಗೆಲುವು ಸಾಧಿಸಿದ್ದರು. ಕೆ.ಆರ್ ಪೇಟೆ ಈ ಹಿಂದೆ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿತ್ತು. ಆ ಕ್ಷೇತ್ರದಲ್ಲಿ ಅನೇಕ ವರ್ಷಗಳಿಂದ ವಕೀಲರಾಗಿ ಕೆಲಸ ಮಾಡಿಕೊಂಡು ಬಂದಿರುವ ದೇವರಾಜ್ ಅವರು ಸರಳ ಸಜ್ಜನ ವ್ಯಕ್ತಿ.
ಅವರು 1999ರಲ್ಲಿ ವಿಧಾನಸಭೆಗೆ ಸ್ಪರ್ಧಿಸಿದ್ದರು. ನಂತರ 2019ರ ಉಪಮುನಾವಣೆ ಸಮಯದಲ್ಲಿ ಜೆಡಿಎಸ್ ನಿಂದ ಅಭ್ಯರ್ಥಿಯಾಗಿ 57 ಸಾವಿರ ಮತ ಪಡೆದಿದ್ದರು. ಅವರು ಯಾವುದೇ ಷರತ್ತು ಇಲ್ಲದೆ, ಇಂದು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ. ಈ ರಾಜ್ಯ ಹಾಗೂ ಕೆ.ಆರ್ ಪೇಟೆಗೆ ಒಳ್ಳೆಯದಾಗಬೇಕು ಹೀಗಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರಲು ಬಯಸುತ್ತೇನೆ. ಜೆಡಿಎಸ್ ಹಾಗೂ ಬಿಜೆಪಿ ಮಣಿಸುವುದು ನಮ್ಮ ಗುರಿ ಹೀಗಾಗಿ ನಾವು ಷರತ್ತು ಇಲ್ಲದೇ ಸೇರುತ್ತೇನೆ ಎಂದು ಅವರು ಇಲ್ಲಿಗೆ ಬಂದಿದ್ದಾರೆ. ಇವರ ಜತೆ ಸಾವಿರಾರು ಮಂದಿ ಬೆಂಬಲಿಗರು ಬಂದಿದ್ದಾರೆ. ಹೊಸಬರು, ಹಳಬರು ಎಂಬ ವ್ಯತ್ಯಾಸ ಬೇಡ. ಪಕ್ಷ ಯಾರನ್ನೇ ಅಭ್ಯರ್ಥಿ ಮಾಡಿದರೂ ನೀವೆಲ್ಲರೂ ಸೇರಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ನಾಳೆಯಿಂದಲೇ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಯಕ್ರಮಗಳನ್ನು ಬೂತ್ ಮಟ್ಟದಲ್ಲಿ ಜನರಿಗೆ ತಲುಪಿಸಬೇಕು’ ಎಂದು ತಿಳಿಸಿದರು.
‘ಶಿವಮೊಗ್ಗದ ಜೆಡಿಎಸ್ ಕಾರ್ಯದರ್ಶಿ ಅರುಣ್ ಕುಮಾರ್ ಅವರು ಕೂಡ ಪಕ್ಷಕ್ಕೆ ಬಂದಿದ್ದು, ಅವರನ್ನು ನಾವು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಸ್ವಾಗತಿಸುತ್ತೇನೆ. ಗುಬ್ಬಿ ವಾಸು ಅವರು ಕೂಡ ವಿಧಾನಸಭೆ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಪಕ್ಷ ಸೇರಲು ಅರ್ಜಿ ಹಾಕಲು ಬಂದಿದ್ದಾರೆ. ಅವರನ್ನು ಮತ್ತೊಂದು ದಿನ ಕಾರ್ಯಕ್ರಮ ಮಾಡಿ ಪಕ್ಷಕ್ಕೆ ಸೇರಿಸಿಕೊಳ್ಳುತ್ತೇವೆ’ ಎಂದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ