ಕುಂದಗೋಳ ವಿಧಾನಸಭಾ ಕ್ಷೇತ್ರ: ಕುಸುಮಾವತಿ ಶಿವಳ್ಳಿ ಸ್ಪರ್ಧೆಗೆ ಸ್ವಪಕ್ಷೀಯರ ತೀವ್ರ ವಿರೋಧ; ಲಾಭ ಪಡೆಯಲು ಬಿಜೆಪಿ ಯತ್ನ!

ಕುಂದಗೋಳ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳಿಗೆ ಸವಾಲಾಗಿ ಪರಿಣಮಿಸಿದೆ. ಹಾಲಿ ಶಾಸಕಿ ಕುಸುಮಾವತಿ ಶಿವಳ್ಳಿ ಸ್ಪರ್ಧೆಗೆ ಕಾಂಗ್ರೆಸ್‌ನಲ್ಲಿ ತೀವ್ರ ಪ್ರತಿರೋಧ ವ್ಯಕ್ತವಾಗುತ್ತಿದೆ.
ಕುಸುಮಾವತಿ ಶಿವಳ್ಳಿ
ಕುಸುಮಾವತಿ ಶಿವಳ್ಳಿ

ಧಾರವಾಡ: ಕುಂದಗೋಳ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳಿಗೆ ಸವಾಲಾಗಿ ಪರಿಣಮಿಸಿದೆ. ಹಾಲಿ ಶಾಸಕಿ ಕುಸುಮಾವತಿ ಶಿವಳ್ಳಿ ಸ್ಪರ್ಧೆಗೆ ಕಾಂಗ್ರೆಸ್‌ನಲ್ಲಿ ತೀವ್ರ ಪ್ರತಿರೋಧ ವ್ಯಕ್ತವಾಗುತ್ತಿದೆ. ಈ ನಡುವೆ ಮಾಜಿ ಶಾಸಕ ಎಸ್‌ಐ ಚಿಕ್ಕನಗೌಡರ್ ಮತ್ತು ಎಂಆರ್ ಪಾಟೀಲ್ ಬಿಜೆಪಿ ಟಿಕೆಟ್‌ಗಾಗಿ ತೀವ್ರ ಲಾಬಿ ನಡೆಸುತ್ತಿದ್ದಾರೆ.

ಕುಂದಗೋಳ ಯಾವುದೇ ರಾಜಕೀಯ ಪಕ್ಷದ ಭದ್ರಕೋಟೆಯಲ್ಲ, ಆದರೆ ಈ ಭಾಗದಲ್ಲಿ ಈ ಹಿಂದೆ ಹಲವು ಬಾರಿ ಗೆದ್ದಿರುವ ಕಾಂಗ್ರೆಸ್ ಹೆಚ್ಚು ಗಮನ ಹರಿಸುತ್ತಿದೆ. ಶಾಸಕ ಸಿ.ಎಸ್.ಶಿವಳ್ಳಿ ಅವರ ನಿಧನದ ನಂತರ ನಡೆದ ಉಪಚುನಾವಣೆ ಸೇರಿದಂತೆ ಹಿಂದಿನ ಮೂರು ಚುನಾವಣೆಗಳಲ್ಲಿ ಪಕ್ಷ ಗೆದ್ದಿದ್ದರೂ ಗೆಲುವಿನ ಅಂತರ ಅಷ್ಟಾಗಿ ಇರಲಿಲ್ಲ.

2018 ರ ಚುನಾವಣೆಯಲ್ಲಿ, ಶಿವಳ್ಳಿ ಕೇವಲ 634 ಮತಗಳಿಂದ ಗೆದ್ದರು ಮತ್ತು ಉಪಚುನಾವಣೆಯಲ್ಲಿ ಅನುಕಂಪದ ಅಲೆಯಿದ್ದರೂ ಅವರ ಪತ್ನಿ 1,601 ಮತದಾರರ ಅಲ್ಪ ಅಂತರದಿಂದ ಗೆಲುವು ಸಾಧಿಸಿದ್ದರು.

ಈ ಹಿಂದೆ ಬೇರೆ ಪಕ್ಷಗಳ ಪ್ರಬಲ ಅಸ್ತಿತ್ವವಿದ್ದರೂ ಶಿವಳ್ಳಿ ಹಲವು ಬಾರಿ ಗೆದ್ದಿದ್ದರು. ಶಿವಳ್ಳಿ ಅವರು ಜನರ ಸಮಸ್ಯೆ, ಕುಂದುಕೊರತೆಗಳಿಗೆ ಸ್ಪಂದಿಸುವ ಮೂಲಕ ಮತದಾರರಲ್ಲಿ ಅಭಿಮಾನ ಕಾಪಾಡಿಕೊಂಡಿದ್ದರು. ಆದಾಗ್ಯೂ, ಸಹಾನುಭೂತಿಯ ಅಲೆಯಿದ್ದರೂ, ಕುಸುಮಾವತಿ ಸಾರ್ವಜನಿಕರೊಂದಿಗೆ ತನ್ನ ಪತಿಯಂತೆ  ಬೆರೆಯುವುದಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ.

ಕುಸುಮಾವತಿ ಅವರ ಕುಟುಂಬದವರು ಸೇರಿದಂತೆ ಪಕ್ಷದಲ್ಲಿರುವ ವಿರೋಧಿಗಳು ಟಿಕೆಟ್ ನಿರಾಕರಿಸಲು ಕುಸುಮಾವತಿ ಅವರ ನ್ಯೂನತೆಗಳನ್ನು ಎತ್ತಿ ತೋರಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಷ್ಟೇ ಅಲ್ಲ, ರಾಜ್ಯದ ಎಲ್ಲ ಪ್ರಮುಖ ನಾಯಕರು ಶಿವಳ್ಳಿ ಅವರ ಪರವಾಗಿದ್ದ ಕಾರಣ 2019ರ ಉಪಚುನಾವಣೆಯಲ್ಲಿ ಕುಸುಮಾವತಿ ಶಿವಳ್ಳಿ ಅವರಿಗೆ ಟಿಕೆಟ್‌ ನೀಡಲು ಬೆಂಬಲಿಸಿದ್ದರು. ಆದರೆ, ಈಗ ಪರಿಸ್ಥಿತಿ ಬದಲಾಗಿದ್ದು, ಟಿಕೆಟ್ ನೀಡದಂತೆ ಪಕ್ಷದ ನಾಯಕತ್ವದ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್  ಪಕ್ಷದ ಕಚ್ಚಾಟವು ಸ್ಪಷ್ಟವಾಗಿ ಕಂಡುಬರುತ್ತಿದ್ದಂತೆ, ಕೇಸರಿ ಪಕ್ಷದ ಆಕಾಂಕ್ಷಿಗಳು ಸುಲಭವಾಗಿ ಸ್ಥಾನವನ್ನು ಗೆಲ್ಲುವ ಅವಕಾಶ ಬಳಸಿಕೊಳ್ಳಲು ನೋಡುತ್ತಿದ್ದಾರೆ. ಕಳೆದ ಮೂರು ಬಾರಿ ಸೋಲು ಕಂಡಿದ್ದರೂ ಬಿಜೆಪಿಯ ಆಕಾಂಕ್ಷಿ ಚಿಕ್ಕನಗೌಡರು ಈ ಕ್ಷೇತ್ರದಿಂದ ಕೊನೆಯ ಬಾರಿಗೆ ಸ್ಪರ್ಧಿಸಲು ಮುಂದಾಗಿದ್ದಾರೆ.

ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ನಿಕಟ ಸಂಬಂಧಿಯಾಗಿರುವ ಮಾಜಿ ಶಾಸಕ ಟಿಕೆಟ್‌ಗಾಗಿ ತೀವ್ರ ಲಾಬಿ ನಡೆಸುತ್ತಿದ್ದಾರೆ. ಆದರೆ, ಹಿಂದಿನ ಸೋಲುಗಳಿಂದ ಜಿಲ್ಲೆಯ ಪ್ರಮುಖ ನಾಯಕರು ಅವರ ಪರವಾಗಿಲ್ಲ. ಮೇಲಾಗಿ ಟಿಕೆಟ್ ನಿರಾಕರಿಸಿದರೆ ಅವರು ಜೆಡಿಎಸ್‌ ಸೇರ್ಪಡೆಯಾಗಬಹುದು ಎಂಬ ವದಂತಿಗಳು ಹರಿದಾಡುತ್ತಿವೆ, ಅಂತಹ ಯಾವುದೇ ಸಾಧ್ಯತೆಯನ್ನು ಅವರು ತಳ್ಳಿ ಹಾಕಿದ್ದಾರೆ.

ಯಡಿಯೂರಪ್ಪ ಬಿಜೆಪಿಯಿಂದ ಪಕ್ಷಾಂತರಗೊಂಡು 2013ರ ಚುನಾವಣೆಯಲ್ಲಿ ಕರ್ನಾಟಕ ಜನತಾ ಪಕ್ಷ ಸ್ಥಾಪಿಸಿ ಸ್ಪರ್ಧಿಸಿದಾಗ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ಚಿಕ್ಕನಗೌಡರ್‌ ಮತ್ತು ಪಾಟೀಲ್‌ ಇಬ್ಬರು ಸ್ಪರ್ಧಿಸಿದ್ದರು. ಇದರಿಂದಾಗಿ ಕಾಂಗ್ರೆಸ್‌ನ ಶಿವಳ್ಳಿ ಅವರು ಸುಲಭವಾಗಿ ಗೆಲುವು ಸಾಧಿಸಿದ್ದರು.

ಮತ್ತೊಂದೆಡೆ 2013ರ ಚುನಾವಣೆಯಲ್ಲಿ ಸೋಲು ಕಂಡಿದ್ದ ಪಾಟೀಲರು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಮೂಲಕ ಟಿಕೆಟ್‌ಗಾಗಿ ತೀವ್ರ ಕಸರತ್ತು ನಡೆಸುತ್ತಿದ್ದಾರೆ. ಆದರೆ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಇನ್ನೂ ತಮ್ಮ ನಿಲುವನ್ನು ಸ್ಪಷ್ಟಪಡಿಸಿಲ್ಲ. ಈ ಭಾಗದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪ್ರಭಾವವೂ ಇರುವುದರಿಂದ ಟಿಕೆಟ್ ಅಂತಿಮಗೊಳಿಸುವ ಮುನ್ನ ಅವರ ಅಭಿಪ್ರಾಯವನ್ನೂ ಪರಿಗಣಿಸಲಾಗುವುದು ಎಂದು ಬಿಜೆಪಿ ಮುಖಂಡರೊಬ್ಬರು ಹೇಳಿದರು. ಒಬ್ಬರಿಗೆ ಟಿಕೆಟ್ ಸಿಕ್ಕರೆ ಪಕ್ಷಕ್ಕೆ ಇನ್ನೊಬ್ಬರನ್ನು ಸಮಾಧಾನಪಡಿಸುವುದು ಕಷ್ಟವಾಗಬಹುದು ಎಂದು ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com