ಶಿಕಾರಿಪುರದಲ್ಲಿ 'ಸನ್ ರೈಸ್'? ಅಪ್ಪನ ಭದ್ರಕೋಟೆಯಲ್ಲಿ ಮಗನಿಗೆ ಯಾವುದು ಪ್ಲಸ್, ಯಾವುದು ಮೈನಸ್?

ನಾಲ್ಕು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಈ ಕ್ಷೇತ್ರದಲ್ಲಿ ಯಡಿಯೂರಪ್ಪ ಅವರಿಲ್ಲದೆ ಚುನಾವಣೆ ನಡೆಯುತ್ತಿದೆ.  2018ರ ವಿಧಾನಸಭೆ ಚುನಾವಣೆಯಲ್ಲಿ  ಯಡಿಯೂರಪ್ಪ ವಿರುದ್ಧ 35,000 ಮತಗಳಿಂದ ಸೋತಿದ್ದ ಗೋಣಿ ಮಾಲತೇಶ್ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. 
ಯಡಿಯೂರಪ್ಪ ಮತ್ತು ವಿಜಯೇಂದ್ರ
ಯಡಿಯೂರಪ್ಪ ಮತ್ತು ವಿಜಯೇಂದ್ರ

ಶಿವಮೊಗ್ಗ: ಜಿಲ್ಲೆಯ ಶಿಕಾರಿಪುರದ ಬಿಜೆಪಿ ಭದ್ರಕೋಟೆಯಲ್ಲಿ ಈ ಬಾರಿ "ಸನ್ ರೈಸ್" ಆಗುತ್ತಾ? ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ತಂದೆ ಮತ್ತು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ  ಅವರ ಕ್ಷೇತ್ರದಿಂದ ಚುನಾವಣಾ ರಾಜಕೀಯಕ್ಕೆ ಎಂಟ್ರಿ ನೀಡುತ್ತಿದ್ದಾರೆ.

ನಾಲ್ಕು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಈ ಕ್ಷೇತ್ರದಲ್ಲಿ ಯಡಿಯೂರಪ್ಪ ಅವರಿಲ್ಲದೆ ಚುನಾವಣೆ ನಡೆಯುತ್ತಿದೆ.  2018ರ ವಿಧಾನಸಭೆ ಚುನಾವಣೆಯಲ್ಲಿ  ಯಡಿಯೂರಪ್ಪ ವಿರುದ್ಧ 35,000 ಮತಗಳಿಂದ ಸೋತಿದ್ದ ಗೋಣಿ ಮಾಲತೇಶ್ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ.  ಕಾಂಗ್ರೆಸ್ ಬಂಡಾಯ ಎಸ್‌ಪಿ ನಾಗರಾಜ ಗೌಡ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಯಡಿಯೂರಪ್ಪ 2018ರಲ್ಲಿ 86,983 ಮತಗಳನ್ನು ಪಡೆದರೆ, ಮಾಲತೇಶ್ 51,586 ಮತಗಳನ್ನು ಪಡೆದಿದ್ದರು.

ದಲಿತರ ಮೀಸಲಾತಿ ಹೆಚ್ಚಳದ ವಿಚಾರದಲ್ಲಿ ಬಂಜಾರ ಸಮುದಾಯ ಬಿಜೆಪಿ-ಬಿಎಸ್‌ವೈ ವಿರುದ್ಧ ತಿರುಗಿ ಬಿದ್ದಿರುವುದು, ವಿಜಯೇಂದ್ರ ಪಾಲಿಗೆ ಹಿನ್ನಡೆಯಾಗುವ ಸಾದ್ಯತೆಯಿದೆ. ಈ ಲಾಭ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಪಾಲಾಗಬಹುದು ಎಂಬ ನಿರೀಕ್ಷೆಯಿದೆ.

ವಿಜಯೇಂದ್ರರ ಗೆಲುವಿಗೆ ತಡೆಯಾಗಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿರುವವರು ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ನಾಗರಾಜಗೌಡ. 3 ಬಾರಿ ಪುರಸಭಾ ಸದಸ್ಯನಾಗಿ ಕಳೆದ ನಾಲ್ಕೈದು ವರ್ಷಗಳಿಂದ ಚುನಾವಣಾ ಕಣಕ್ಕೆ ಧುಮುಕಲು ಸಕಲ ಪ್ರಯತ್ನಗಳನ್ನು ಮಾಡುತ್ತಲೇ ಬಂದಿದ್ದಾರೆ. ಕ್ಷೇತ್ರದಲ್ಲಿ ಪ್ರಬಲವಾಗಿರುವ ಸಾಧು ವೀರಶೈವ ಸಮುದಾಯಕ್ಕೆ ಸೇರಿರುವ ನಾಗರಾಜಗೌಡ ಈಗ ಅದೇ ಸಮುದಾಯದ ಬಲದೊಂದಿಗೆ ಅದೃಷ್ಟ ಪರೀಕ್ಷೆಗೆ ನಿಂತಿದ್ದಾರೆ. ಇವರು ಇಲ್ಲಿನ ಗ್ರಾಮೀಣ ಭಾಗದ ಮತದಾರರ ಪಾಲಿನ ನೆಚ್ಚಿನ ವ್ಯಕ್ತಿ ಕೂಡ. ಇವೆಲ್ಲದರ ಜೊತೆಗೆ ಬಹುತೇಕ ಬಿಜೆಪಿ ವಿರೋಧಿ ಮುಖಂಡರೆಲ್ಲ ನಾಗರಾಜಗೌಡರ ಬೆಂಬಲಕ್ಕೆ ಟೊಂಕ ಕಟ್ಟಿ ನಿಂತಿರುವುದು ಇವರ ಪಾಲಿಗೆ ಬಲ ತುಂಬಿದೆ.

ಎಸ್‌ಸಿಗಳಿಗೆ ಒಳಮೀಸಲಾತಿ ಘೋಷಿಸಿದ ನಂತರ ಆಡಳಿತಾರೂಢ ಬಿಜೆಪಿ ವಿರುದ್ಧ ಅಸಮಾಧಾನಗೊಂಡಿರುವ ಬಂಜಾರ ಸಮುದಾಯದ ಬೆಂಬಲ ಪಡೆಯುವ ಜೊತೆಗೆ ಶಿಕಾರಿಪುರದಲ್ಲಿ ಸಾಕಷ್ಟು ಅಸ್ತಿತ್ವವನ್ನು ಹೊಂದಿರುವ 'ಸಾದರ ಲಿಂಗಾಯತ' ಸಮುದಾಯದ ಬೆಂಬಲವನ್ನು ಗೌಡರು ಹೆಚ್ಚಿಸುವ ನಿರೀಕ್ಷೆಯಲ್ಲಿದ್ದಾರೆ. ಇತ್ತೀಚೆಗೆ ನಡೆದ ಪ್ರತಿಭಟನೆ ವೇಳೆ ಯಡಿಯೂರಪ್ಪ ಅವರ ಶಿಕಾರಿಪುರ ನಿವಾಸದ ಮೇಲೆ ಕಲ್ಲು ತೂರಾಟ ನಡೆದಿತ್ತು.

ಯಾವುದೇ ಪಕ್ಷದಿಂದ ಅಧಿಕೃತ ಅಭ್ಯರ್ಥಿಯಾಗದಿದ್ದರೂ ಜನರು ನನ್ನ ಮೇಲೆ ಅಪಾರ ಪ್ರೀತಿ, ಬೆಂಬಲ ವ್ಯಕ್ತಪಡಿಸಿದ್ದಾರೆ, ಕಾಂಗ್ರೆಸ್ ಟಿಕೆಟ್ ಕೈ ತಪ್ಪಿರುವುದರಿಂದ ಸಾರ್ವಜನಿಕರ ಸಹಾನುಭೂತಿ ನನ್ನ ಪರವಾಗಿದ್ದು, ನನ್ನ ಗೆಲುವಿಗೆ ಸಹಕಾರಿಯಾಗಲಿದೆ ಎಂದು  ನಾಗರಾಜಗೌಡರು ಹೇಳಿದ್ದಾರೆ.  "ಶಿಕಾರಿಪುರದಲ್ಲಿ 40 ವರ್ಷಗಳ ಬಿಜೆಪಿ ಆಡಳಿತದಿಂದ ಬೇಸತ್ತ ಜನರು ನನ್ನನ್ನು ಬೆಂಬಲಿಸುತ್ತಿದ್ದಾರೆ" ಎಂದು ತಿಳಿಸಿದ್ದಾರೆ.

ನಾಗರಾಜಗೌಡರು ಕಣದಲ್ಲಿ ಇರುವುದು ಕಾಂಗ್ರೆಸ್ ಭವಿಷ್ಯಕ್ಕೆ ಅಡ್ಡಿಯಾಗುತ್ತದೆ ಮತ್ತು ಬದಲಿಗೆ ವಿಜಯೇಂದ್ರ ಅವರಿಗೆ ಸಹಾಯ ಮಾಡುತ್ತದೆ ಎಂದು ಕೆಲವು ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರು ಅಭಿಪ್ರಾಯ ಪಟ್ಟಿದ್ದಾರೆ.

ಅಲ್ಲದೆ, ಬಿಜೆಪಿ ಮತ್ತು ಕಾಂಗ್ರೆಸ್‌ನ ರಾಜಕೀಯ ನಾಯಕರ ನಡುವಿನ ರಾಜಕೀಯ ಒಪ್ಪಂದದ  ವಿಜಯೇಂದ್ರಗೆ ಹಾದಿ ಸುಲಭವಾಗಲಿದೆ ಎನ್ನಲಾಗಿದೆ,  ಆದರೆ, 2018ರ ಚುನಾವಣೆಯಲ್ಲಿ ಯಡಿಯೂರಪ್ಪ ಅವರಂತಹ ಧೀಮಂತ ನಾಯಕರ ವಿರುದ್ಧ 51,586 ಮತಗಳನ್ನು ಪಡೆದ ಮಾಲತೇಶ್, ಈ ಬಾರಿ ತಮ್ಮ ಗೆಲುವು ಎಂದು ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

ಯಡಿಯೂರಪ್ಪ ಉತ್ತರಾಧಿಕಾರಿಯಾಗಿರುವ ವಿಜಯೇಂದ್ರ ಶಿಕಾರಿಪುರ ಸ್ಥಾನ ಉಳಿಸಿಕೊಳ್ಳುವ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.  ಶಿಕಾರಿಪುರದಿಂದ ಸ್ಪರ್ಧಿಸಲು ಪಕ್ಷ ನನಗೆ ಅವಕಾಶ ನೀಡಿದೆ, ನಾನು ಪ್ರಚಾರ ಮಾಡುತ್ತಿದ್ದೇನೆ ಮತ್ತು ಜನರೊಂದಿಗೆ ಸುಲಭವಾಗಿ ಸಂವಹನ ನಡೆಸುತ್ತಿದ್ದೇನೆ, ನನ್ನ ತಂದೆ ಮತ್ತು ಹಿರಿಯ ಸಹೋದರ ಬಿ ವೈ ರಾಘವೇಂದ್ರ (ಶಿವಮೊಗ್ಗ ಸಂಸದ) ಇಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿರುವುದರಿಂದ ಚಿಂತಿಸಬೇಕಾಗಿಲ್ಲ. ಇಲ್ಲಿ ‘ಕಾರ್ಯಕರ್ತರ’ ಬಲಿಷ್ಠ ತಂಡವಿದೆ, ಅವರ ಪ್ರೀತಿಗೆ ಎಲ್ಲೆಯಿಲ್ಲ, ಇವೆಲ್ಲದರ ಆಧಾರದ ಮೇಲೆ ನಾನು ಗೆಲ್ಲುತ್ತೇನೆ ಎಂದು ವಿಜಯೇಂದ್ರ ಹೇಳಿದ್ದಾರೆ.

ಎದುರಾಳಿಗಳನ್ನು ಹಗುರವಾಗಿ ಪರಿಗಣಿಸುತ್ತಿದ್ದೇನೆ ಎಂದರ್ಥವಲ್ಲ.  ಇದು ನನ್ನ ಮೊದಲ ಚುನಾವಣೆಯಾಗಿದ್ದು, ಗಂಭೀರವಾಗಿ ಪರಿಗಣಿಸಿ ಕ್ಷೇತ್ರ ಹಾಗೂ ಗ್ರಾಮಗಳಲ್ಲಿ ಪದೇ ಪದೇ ಪ್ರವಾಸ ಮಾಡುತ್ತಿದ್ದೇನೆ ಎಂದು ವಿಜಯೇಂದ್ರ ತಿಳಿಸಿದ್ದಾರೆ.

ವಿಜಯೇಂದ್ರ ಅವರಿಗೆ ಈ ಚುನಾವಣೆಯು ಕೇವಲ ಗೆಲುವಿಗಾಗಿ ಮಾತ್ರವಲ್ಲ, ತಲೆಮಾರಿನ ಬದಲಾವಣೆಯ ಹಿನ್ನೆಲೆಯಲ್ಲಿ ಬಿಜೆಪಿಯೊಳಗೆ ನಾಯಕರಾಗಿ ಅವರ ಭವಿಷ್ಯವನ್ನು ರೂಪಿಸಲು ಮುಖ್ಯವಾಗಿದೆ,' ಎಂದು ಪಕ್ಷದ ಪದಾಧಿಕಾರಿಯೊಬ್ಬರು ಹೇಳಿದರು.

ಲಿಂಗಾಯತ ಪ್ರಬಲ ವ್ಯಕ್ತಿ ಮತ್ತು ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ 1983 ರಿಂದ ಎಂಟು ಬಾರಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ, 1999 ರಲ್ಲಿ ಒಮ್ಮೆ ಸೋತಿದ್ದರು. 2013 ರಲ್ಲಿ, ಯಡಿಯೂರಪ್ಪ ಅವರು ಬಿಜೆಪಿಯಿಂದ  ಹೊರಬಂದು ಕರ್ನಾಟಕ ಜನತಾ ಪಕ್ಷ (ಕೆಜೆಪಿ) ಅಭ್ಯರ್ಥಿಯಾಗಿ ಗೆದ್ದರು. 2014ರಲ್ಲಿ ಮತ್ತೆ ಬಿಜೆಪಿಗೆ ಮರಳಿದ್ದರು.

ಕಳೆದ ವರ್ಷ ಜುಲೈನಲ್ಲಿ ಯಡಿಯೂರಪ್ಪ ಅವರು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದರು.  ಹೈಕಮಾಂಡ್ ಒಪ್ಪಿದರೆ ಶಿಕಾರಿಪುರಕ್ಕೆ ವಿಜಯೇಂದ್ರ ಅಭ್ಯರ್ಥಿಯಾಗುತ್ತಾರೆ ಎಂದಿದ್ದರು.

ಕಾಂಗ್ರೆಸ್ ಮುಖಂಡ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವರುಣಾದಿಂದ ವಿಜಯೇಂದ್ರ ಸ್ಪರ್ಧಿಸಬಹುದು ಎಂಬ ಊಹಾಪೋಹಗಳಿದ್ದರೂ, ಅಪ್ಪ-ಮಗ ಇಬ್ಬರೂ ಅಂತಿಮವಾಗಿ ಶಿಕಾರಿಪುರ ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧರಿಸಿದ್ದಾರೆ.

ವಿಜಯೇಂದ್ರ ಅವರನ್ನು ಜುಲೈ 2020 ರಲ್ಲಿ ಪಕ್ಷದ ಉಪಾಧ್ಯಕ್ಷರನ್ನಾಗಿ ನೇಮಿಸಲಾಯಿತು. ಮೇ 2018 ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ, ಕೊನೆಯ ಕ್ಷಣದಲ್ಲಿ ಮೈಸೂರು ಜಿಲ್ಲೆಯ ವರುಣಾದಿಂದ ಸ್ಪರ್ಧಿಸಲು ಪಕ್ಷದ ಟಿಕೆಟ್ ನಿರಾಕರಿಸಿದ ನಂತರ ಬಿಜೆಪಿ ಯುವ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಯಿತು.

2019 ಮತ್ತು 2020 ರಲ್ಲಿ ನಡೆದ ಉಪಚುನಾವಣೆಯಲ್ಲಿ ಕ್ರಮವಾಗಿ ಕೆಆರ್ ಪೇಟೆ ಮತ್ತು ಸಿರಾ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯ ಮೊದಲ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಕೀರ್ತಿಗೆ  ವಿಜಯಂದ್ರ ಕಾರಣವಾಗಿರುವುದರಿಂದ ಪಕ್ಷದಲ್ಲಿ ಪ್ರಾಬಲ್ಯ ಹೆಚ್ಚಿತು. 99,781 ಪುರುಷ ಮತದಾರರು ಸೇರಿದಂತೆ ಒಟ್ಟು 1,98,808 ಮತದಾರರನ್ನು ಹೊಂದಿರುವ ಶಿಕಾರಿಪುರದಲ್ಲಿ ಹತ್ತು ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com