ಬಜರಂಗದಳಕ್ಕೂ, ಹನುಮನಿಗೂ ಸಂಬಂಧವಿಲ್ಲ; ಬಜರಂಗದಳ ನಿಷೇಧ ಪ್ರಸ್ತಾವ ಸಮರ್ಥಿಸಿಕೊಂಡ ಕಾಂಗ್ರೆಸ್

ಬಜರಂಗದಳ ಸಂಘಟನೆ ನಿಷೇಧಿಸುವ ಪ್ರಸ್ತಾವಕ್ಕೆ ಕೇಸರಿ ಪಡೆಗಳು ತೀವ್ರ ಆಕ್ರೋಶ ಹೊರಹಾಕುತ್ತಿದ್ದು, ಇದರ ನಡುವಲ್ಲೂ ಇಟ್ಟ ಹೆಜ್ಜೆಯನ್ನು ಕಾಂಗ್ರೆಸ್ ಸಮರ್ಥಿಸಿಕೊಂಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಬಜರಂಗದಳ ಸಂಘಟನೆ ನಿಷೇಧಿಸುವ ಪ್ರಸ್ತಾವಕ್ಕೆ ಕೇಸರಿ ಪಡೆಗಳು ತೀವ್ರ ಆಕ್ರೋಶ ಹೊರಹಾಕುತ್ತಿದ್ದು, ಇದರ ನಡುವಲ್ಲೂ ಇಟ್ಟ ಹೆಜ್ಜೆಯನ್ನು ಕಾಂಗ್ರೆಸ್ ಸಮರ್ಥಿಸಿಕೊಂಡಿದೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲ, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮತ್ತಿತರ ನಾಯಕರ ಸಭೆ ಬುಧವಾರ ನಡೆಯಿತು.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರು, ನಿರ್ಧಾರವನ್ನು ಸಮರ್ಥಿಸಿಕೊಂಡರು.

'ಇದು ಕೋಮು ವಿಚಾರವಲ್ಲ. ಬಜರಂಗದಳಕ್ಕೂ, ಹನುಮನಿಗೂ ಸಂಬಂಧವಿಲ್ಲ. ನಮ್ಮ ಪ್ರಣಾಳಿಕೆಯಲ್ಲಿ ಸಂವಿಧಾನ ಉಲ್ಲಂಘಿಸುವವರ ವಿರುದ್ಧ ಮತ್ತು ಕಾನೂನನ್ನು ಕೈಗೆತ್ತಿಕೊಳ್ಳುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು  ಎಂದು ತಿಳಿಸಲಾಗಿದೆ ಎಂದು ಹೇಳಿದ್ದಾರೆ.

ದಲಿತ ಯುವಕ ದಿನೇಶ್ ನನ್ನು ಹಗಲು ಹೊತ್ತಿನಲ್ಲಿ ಬಜರಂಗದಳದ ಕಾರ್ಯಕರ್ತರು ಹತ್ಯೆ ಮಾಡಿದರೆ ಅದು ಕಾನೂನು ಉಲ್ಲಂಘನೆಯಾಗುವುದಿಲ್ಲವೇ? ಈ ವಿಚಾರವಾಗಿ ದಲಿತ ಸಂಘರ್ಷ ಸಮಿತಿಯವರು ಮುಖ್ಯಮಂತ್ರಿಗಳನ್ನು ಸಂಪರ್ಕಿಸಿದ್ದರು. ಆದರೆ, ದಿನೇಶ್ ಅವರ ಕುಟುಂಬಸ್ಥರನ್ನು ಮುಖ್ಯಮಂತ್ರಿಗಳು ಭೇಟಿ ಮಾಡಲಿಲ್ಲ. ದ್ವೇಷವನ್ನು ಹರಡುವವರ ವಿರುದ್ಧ ನಾವು ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆಂದು ತಿಳಿಸಿದ್ದಾರೆ.

ಹನುಮಾನ್ ಚಾಲೀಸಾ ಪಠಿಸುತ್ತೇವೆಂದು ಹೇಳುತ್ತಿರುವ ಬಿಜೆಪಿಯವರಿಗೆ ಹನುಮಾನ್ ಚಾಲೀಸಾ ಪಠಣೆ ಗೊತ್ತಿಲ್ಲ. ಅವರಿಗೆ ಗೊತ್ತಿರುವುದು ಚಾಲೀಸ್ ಪರ್ಸೆಂಟೇಜ್ ಪಡೆಯುವುದು ಮಾತ್ರ. ಬಿಜೆಪಿ ಸರ್ಕಾರ ಕಳೆದ 4 ವರ್ಷದಲ್ಲಿ ರಾಜ್ಯದಲ್ಲಿ 1500 ದೇವಾಲಯ ಕೆಡವಿದೆ. ಹೀಗಿದ್ದರೂ ಈಗ ಮಾತನಾಡುತ್ತಿರುವವರು ಯಾಕೆ ಪ್ರತಿಭಟನೆ ಮಾಡಲಿಲ್ಲ ಎಂದು ಕಿಡಿಕಾರಿದರು.

ಬಿಜೆಪಿಯು ಕಳೆದ 4 ವರ್ಷದಲ್ಲಿ ಅತ್ಯಂತ ಪುರಾತನ ಹನುಮ ದೇವಾಲಯಗಳನ್ನು ಕೆಡವಿದೆ. ನಂಜನಗೂಡಿನಲ್ಲಿ ಸಾವಿರಾರು ವರ್ಷ ಇತಿಹಾಸದ ಹನುಮಂತನ ದೇವಾಲಯ ಕೆಡಿದೆ. ಅದರ ವಿರುದ್ಧ ವಿಹೆಚ್'ಪಿ, ಬಜರಂಗ ದಳ ಯಾಕೆ ವಿರೋಧಿಸಲಿಲ್ಲ? ಬೆಂಗಳೂರಿನಲ್ಲಿ ಮೆಟ್ರೋ ನಿರ್ಮಾಣಕ್ಕೆ ಯಡಿಯೂರಪ್ಪ, ಬೊಮ್ಮಾಯಿಯವರು 2020ರಲ್ಲಿ 150 ವರ್ಷಗಳ ಹಳೆಯ ಹನುಮಂತನ ದೇವಾಲಯ ಕೆಡವಿದ್ದರು. ಇದರ ಬಗ್ಗೆ ಬಜರಂಗ ದಳ ಹೋರಾಟ ಮಾಡಿತ್ತೇ? ಆದ ಹನುಮಾನ್ ಚಾಲೀಸಾ ಪಠಿಸಲಾಗಿತ್ತೇ ಎಂದು ಪ್ರಶ್ನಿಸಿದರು.

ಎಐಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಪವನ್ ಖೇರಾ ಮತ್ತು ವಕ್ತಾರ ಸುಪ್ರಿಯಾ ಶ್ರೀನತೆ ಮಾತನಾಡಿ, ‘ಕಾನೂನು ಉಲ್ಲಂಘಿಸುವ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಪಕ್ಷಕ್ಕೆ ಸ್ಪಷ್ಟತೆಗಳಿವೆ. ಹೀಗಾಗಿಯೇ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಬಜರಂಗದಳ ಮತ್ತು ಪಿಎಫ್‌ಐ ಸಂಘಟನೆಗಳ ಮೇಲಿನ ನಿಷೇಧವನ್ನು ಹೇರುವ ಭರವಸೆಯನ್ನು ನೀಡಲಾಗಿದೆ. ಇದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಅವರು ಮಾತನಾಡಿ, ಕಾಂಗ್ರೆಸ್ ಪ್ರಣಾಳಿಕೆಯಲ್ಲಿನ ಭಜರಂಗದಳವನ್ನು ನಿಷೇಧಿಸುವ ಭರವಸೆಯನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ. “ನಾವೂ ಹನುಮಂತನ ಭಕ್ತರೇ. ಆದರೆ ಬಜರಂಗದಳ ಸಂಘಟನೆಗೂ ಹನುಮಂತನಿಗೂ ಇರುವ ಸಂಬಂಧವೇನು? ಬಜರಂಗದಳ ಹೆಸರನ್ನು ಇಟ್ಟುಕೊಂಡಾಕ್ಷಣ ಹನುಮಂತನಾಗಲು ಸಾಧ್ಯವಿಲ್ಲ. ಸಂಘಟನೆಯ ಕಾರ್ಯಕರ್ತರು ನೈತಿಕ ಪೊಲೀಸ್ ಗಿರಿ ಮೂಲಕ ಕಾನೂನು ಉಲ್ಲಂಘಿಸುತ್ತಿದ್ದಾರೆ. ಅವರು ಕಾನೂನಿನ ವ್ಯಾಪ್ತಿಯೊಳಗೆ ಇರುವುದನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಉದ್ದೇಶವಾಗಿದೆ. ನಮ್ಮ ಪ್ರಣಾಳಿಕೆಯ ಸಾರವನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿದ್ದಾರೆ.

ಬಜರಂಗ ದಳ ನಿಷೇಧ ಭರವಸೆಗೆ ಬಿಜೆಪಿ ಹೊಸ ನಿರೂಪಣೆಯನ್ನು ನೀಡಲು ಪ್ರಯತ್ನಿಸುತ್ತಿದೆ. ನಾವೇಕೆ ಹೆದರಬೇಕು?ಸಮಾಜದಲ್ಲಿ ಶಾಂತಿ ಕದಡುವ ಸಂಘಟನೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಪ್ರಣಾಳಿಕೆಯಲ್ಲಿ ಹೇಳಿದ್ದೇವೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com