ಕರ್ನಾಟಕ ವಿಧಾನಸಭೆ ಚುನಾವಣೆ: ಈ ಪಕ್ಷೇತರರಿಗೆ ಹೆಸರಿನಲ್ಲೇ ಆಟ; ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳಿಗೆ ಸಂಕಷ್ಟ!

ರಾಜ್ಯದಲ್ಲಿ ನಾಳೆ ನಡೆಯಲಿರುವ ವಿಧಾನಸಭೆ ಚುನಾವಣೆಯ ಕಣದಲ್ಲಿರುವ ಸ್ಪರ್ಧಿಗಳ ಪಟ್ಟಿಯನ್ನು ಪರಿಶೀಲಿಸಿದಾಗ, ಹಾಲಿ ಶಾಸಕ ಅಥವಾ ಅವರ ಪ್ರಮುಖ ಅಭ್ಯರ್ಥಿಗಳ ಹೆಸರನ್ನು ಹೋಲುವ ಅನೇಕ ಸ್ವತಂತ್ರ ಅಭ್ಯರ್ಥಿಗಳು ಈ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದು ಕಂಡುಬಂದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ರಾಜ್ಯದಲ್ಲಿ ನಾಳೆ ನಡೆಯಲಿರುವ ವಿಧಾನಸಭೆ ಚುನಾವಣೆಯ ಕಣದಲ್ಲಿರುವ ಸ್ಪರ್ಧಿಗಳ ಪಟ್ಟಿಯನ್ನು ಪರಿಶೀಲಿಸಿದಾಗ, ಹಾಲಿ ಶಾಸಕ ಅಥವಾ ಅವರ ಪ್ರಮುಖ ಅಭ್ಯರ್ಥಿಗಳ ಹೆಸರನ್ನು ಹೋಲುವ ಅನೇಕ ಸ್ವತಂತ್ರ ಅಭ್ಯರ್ಥಿಗಳು ಈ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದು ಕಂಡುಬಂದಿದೆ.

ಬಿಟಿಎಂ ಲೇಔಟ್ ಕ್ಷೇತ್ರದಲ್ಲಿ ಹಾಲಿ ಶಾಸಕ ರಾಮಲಿಂಗಾರೆಡ್ಡಿ ಅವರು ಬಿಜೆಪಿಯ ಕೆ.ಆರ್. ಶ್ರೀಧರ್ ರೆಡ್ಡಿ ಹಾಗೂ ಇತರರ ವಿರುದ್ಧ ಸ್ಪರ್ಧಿಸಿದ್ದಾರೆ. ಕುತೂಹಲದ ಸಂಗತಿಯೆಂದರೆ, ಇದೇ ಶ್ರೀಧರ್ ಹೆಸರಿನ ಇನ್ನೂ ಮೂವರು ಕಣದಲ್ಲಿದ್ದಾರೆ. ಅವರು ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸುತ್ತಿದ್ದಾರೆ. ಹೂಕೋಸು ಚಿಹ್ನೆಯೊಂದಿಗೆ ಶ್ರೀಧರ್ ರೆಡ್ಡಿ, ಕೆಎಸ್ ಶ್ರೀಧರ್ (ಐಸ್ ಕ್ರೀಮ್) ಮತ್ತು ಕೆಎಸ್ ಶ್ರೀಧರ್ (ದ್ರಾಕ್ಷಿ) ಸ್ಪರ್ಧಿಸಿದ್ದಾರೆ.

ಪಕ್ಕದ ಕ್ಷೇತ್ರ ಜಯನಗರದಲ್ಲಿ ಅವರ ಪುತ್ರಿ ಸೌಮ್ಯಾ ರೆಡ್ಡಿ ಹಾಲಿ ಶಾಸಕಿಯಾಗಿದ್ದು, ಮತ್ತೊಬ್ಬ ಸೌಮ್ಯಾ ರೆಡ್ಡಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ಎನ್ ಮಂಜುನಾಥ್ ಹಾಲಿ ಶಾಸಕರಾಗಿರುವ ದಾಸರಹಳ್ಳಿಯಲ್ಲಿ ಇದೇ ಹೆಸರಿನ ಮೂವರು ಸ್ವತಂತ್ರರು ಇದ್ದಾರೆ. ಆರ್ ಮಂಜುನಾಥ (ಗ್ಯಾಸ್ ಸಿಲಿಂಡರ್), ಆರ್ ಮಂಜುನಾಥ್ (ಹೊಲಿಗೆ ಯಂತ್ರ) ಮತ್ತು ಎನ್ ಮಂಜುನಾಥ (ಕಹಳೆ ಊದುವ ವ್ಯಕ್ತಿ) ಕಣದಲ್ಲಿದ್ದಾರೆ.

ಬಿ.ಎಸ್. ಸುರೇಶ್ ಪ್ರತಿನಿಧಿಸುತ್ತಿರುವ ಹೆಬ್ಬಾಳದಲ್ಲಿ ಬಿಜೆಪಿ ಅಭ್ಯರ್ಥಿ ಕಟ್ಟಾ ಜಗದೀಶ್ ಕಣಕ್ಕಿಳಿದಿದ್ದು, ಟಿ.ಎಸ್. ಜಗದೀಶ್ ಎಂಬ ಸ್ವತಂತ್ರ ಅಭ್ಯರ್ಥಿಯೂ ಕಣದಲ್ಲಿದ್ದಾರೆ. ರಾಜಾಜಿನಗರದಲ್ಲಿ ಬಿಜೆಪಿಯಿಂದ ಹಾಲಿ ಶಾಸಕ ಸುರೇಶ್ ಕುಮಾರ್ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಇದ್ದು, ಸ್ವತಂತ್ರವಾಗಿಯೂ ಮತ್ತೋರ್ವ ಪುಟ್ಟಣ್ಣ ಕಣಕ್ಕಿಳಿದಿದ್ದಾರೆ.

ವಿಜಯನಗರದಲ್ಲಿ ಹಾಲಿ ಶಾಸಕ ಎಂ.ಕೃಷ್ಣಪ್ಪ ಅವರ ಕ್ರಮ ಸಂಖ್ಯೆ 01, ಸ್ವತಂತ್ರ ಅಭ್ಯರ್ಥಿ ಎಂ. ಕೃಷ್ಣಪ್ಪ ಅವರ ಕ್ರಮ ಸಂಖ್ಯೆ 10. ಹಾಲಿ ಶಾಸಕ ಸತೀಶ್ ರೆಡ್ಡಿ ಸ್ಪರ್ಧಿಸಿರುವ ಬೊಮ್ಮನಹಳ್ಳಿಯಲ್ಲಿ ಇಬ್ಬರು ಸತೀಶ್ ರೆಡ್ಡಿ ಸ್ವತಂತ್ರವಾಗಿ ಸ್ಪರ್ಧಿಸಿದ್ದಾರೆ.

ಶರತ್ ಬಚ್ಚೇಗೌಡ ಹಾಲಿ ಶಾಸಕರಾಗಿರುವ ಹೊಸಕೋಟೆಯಲ್ಲಿ ಬಿಜೆಪಿಯು ಎಂಟಿಬಿ ನಾಗರಾಜ್ ಅವರನ್ನು ಕಣಕ್ಕಿಳಿಸಿದೆ. ಇಲ್ಲಿ ಎನ್ ನಾಗರಾಜ (ಎಂಟಿಬಿ), ನವೀನ್ ಕುಮಾರ್ (ಎಂಟಿಬಿ), ಈರೇಗೌಡ (ಎಂಟಿಬಿ), ಟಿ ನಾಗರಾಜ್ (ಜೆಸಿಬಿ) ಮತ್ತು ನಿತೀಶ್ ಕುಮಾರ್ (ಎನ್‌ಟಿಬಿ) ಎಂಬ ಅಭ್ಯರ್ಥಿಗಳು ಸ್ವತಂತ್ರವಾಗಿ ಕಣದಲ್ಲಿದ್ದಾರೆ.

ತುಮಕೂರಿನ ಗುಬ್ಬಿಯಲ್ಲಿ ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಪಕ್ಷಾಂತರಗೊಂಡ ಎಸ್‌ಆರ್‌ ಶ್ರೀನಿವಾಸ್‌ ಸ್ಪರ್ಧಿಸುತ್ತಿದ್ದು, ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್‌ ಚಿಹ್ನೆಯ ಶ್ರೀನಿವಾಸ್‌ ಟಿವಿ ಎಂಬ ಅಭ್ಯರ್ಥಿ ಇದ್ದಾರೆ. ಸಚಿವ ಡಾ. ಕೆ.ಸುಧಾಕರ್ ಸ್ಪರ್ಧಿಸಿರುವ ಚಿಕ್ಕಬಳ್ಳಾಪುರದಲ್ಲಿ ಸುಧಾಕರ್.ಎನ್ ಎಂಬ ಅಭ್ಯರ್ಥಿ ಸ್ವತಂತ್ರವಾಗಿ ಸ್ಪರ್ಧಿಸಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಲ್ಲಿ ಸುಮಲತಾ ಅಂಬರೀಶ್ ವಿರುದ್ಧ ಹಲವು ಸುಮಲತಾ ಸ್ಪರ್ಧಿಸಿ ಹಲವು ಮತಗಳನ್ನು ಕಸಿದುಕೊಂಡಿದ್ದರು. ಆದರೂ, ಸುಮಲತಾ ಅಂಬರೀಶ್ ಗೆದ್ದಿದ್ದರು.

ಹೀಗಾಗಿ, 'ಒಂದೇ ಹೆಸರಿನ ಅಭ್ಯರ್ಥಿಗಳು ನಿಲ್ಲುವುದು ಯಾವುದೋ ಒಂದು ರೀತಿಯಲ್ಲಿ ಮತವನ್ನು ಕಸಿದುಕೊಳ್ಳುವ ವಿಧಾನವಾಗಿದ್ದು, ಮತದಾರರು ಗುಂಡಿ ಒತ್ತುವ ಸಂದರ್ಭದಲ್ಲಿ ಎಚ್ಚರಿಕೆ ವಹಿಸಬೇಕು’ ಎಂದು ತಜ್ಞರು ಎಚ್ಚರಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com