ಮೈಸೂರು: ಸೋಮಣ್ಣ ಮತಗಟ್ಟೆ ಭೇಟಿಗೆ ಕಾಂಗ್ರೆಸ್ ಕಾರ್ಯಕರ್ತರ ಅಡ್ಡಿ; ಕೆಲಕಾಲ ಉದ್ವಿಗ್ನ ಪರಿಸ್ಥಿತಿ
ಮೈಸೂರು: ಈ ಬಾರಿಯ ಹೈವೋಲ್ಟೇಜ್ ಕಣವಾಗಿರುವ ವರುಣಾದಲ್ಲಿ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಮತಗಟ್ಟೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಗದ್ದಲ ಸಂಭವಿಸಿದೆ. ನಂಜನಗೂಡು ತಾಲೂಕಿನ ಕಾರ್ಯ ಗ್ರಾಮದಲ್ಲಿ ಸೋಮಣ್ಣ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ.
ಮತಗಟ್ಟೆಗೆ ಭೇಟಿ ನೀಡಲು ತೆರಳಿದ್ದ ವರುಣಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಅಡ್ಡಗಟ್ಟಿದರು. ಕಾರ್ಯ ಗ್ರಾಮಕ್ಕೆ ಆಗಮಿಸಿದ್ದ ವಿ ಸೋಮಣ್ಣ ಮತಗಟ್ಟೆ ಬಳಿ ತೆರಳಬಾರದು ಎಂದು ಕಾಂಗ್ರೆಸ್ ಕಾರ್ಯಕರ್ತರು ಅಡ್ಡಗಟ್ಟಿದ್ದರು.
ಇದರಿಂದ ಆಕ್ರೋಶಗೊಂಡ ಬಿಜೆಪಿ ಕಾರ್ಯಕರ್ತರು ಬೂತ್‌ಗೆ ತೆರಳಲೇ ಬೇಕೆಂದು ಬಿಜೆಪಿ ಕಾರ್ಯಕರ್ತರು ಪಟ್ಟು ಹಿಡಿದರು.
ಪೊಲೀಸರ ಸಮಯೋಚಿತ ಮಧ್ಯಪ್ರವೇಶದಿಂದಾಗಿ ಎರಡೂ ಗುಂಪುಗಳನ್ನು ಹತೋಟಿಗೆ ತಂದರು. ಕೆಲಕಾಲ ಸ್ಥಳದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು, ಬೂತ್ ಬಳಿ ಸೋಮಣ್ಣ ತೆರಳಬಾರದು ಎಂದು ಒಂದು ಗುಂಪು ಗಲಾಟೆ ಆರಂಭಿಸಿತ್ತು. ಕೂಡಲೇ ಅಧಿಕಾರಿಗಳಿಗೆ ಕರೆ ಮಾಡಿದ ಸೋಮಣ್ಣ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿದ್ದಾರೆ. ಅಲ್ಲಿ ಇರುವ ಜನರೆಲ್ಲ ಇಲ್ಲಿಯವರಲ್ಲ. ಅವರನ್ನು ಒಮ್ಮೆ ವಿಚಾರಿಸಿ ಎಂದು ಅಧಿಕಾರಿಗಳಿಗೆ ಸೋಮಣ್ಣ ಸೂಚಿಸಿದ್ದಾರೆ.
ಬೂತ್ ಪರಿಶೀಲನೆಗೆ ಸೋಮಣ್ಣ ಹೋಗಬಾರದು ಎಂದು ಕಾಂಗ್ರೆಸ್ ಕಾರ್ಯಕರ್ತರು ಪಟ್ಟು ಹಿಡಿದರೆ ಬೂತ್ ತೆರಳಲೇಬೇಕು ಎಂದು ಬಿಜೆಪಿ ಕಾರ್ಯಕರ್ತರು ಕ್ಯಾತೆ ತೆಗೆದಿದ್ದರು. ಇದರಿಂದಾಗಿ ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಕೊನೆಗೆ ಪೊಲೀಸ್ ಬಂದೋಬಸ್ತ್ನಲ್ಲಿ ಸೋಮಣ್ಣ ಬೂತ್ ಪರಿಶೀಲನೆ ಮಾಡಿ ತೆರಳಿದ್ದಾರೆ.
ನಾನು 40 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ ಮತ್ತು ಈ ಹಿಂದೆ ಹಲವಾರು ಚುನಾವಣೆಗಳಲ್ಲಿ ಸ್ಪರ್ಧಿಸಿದ್ದೇನೆ. ಚುನಾವಣೆಯ ನಂತರ ನಾನು ಈ ಜನರೊಂದಿಗೆ ಮಾತನಾಡುತ್ತೇನೆ ಎಂದು ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ