ಸಿದ್ದರಾಮಯ್ಯ ಅವರ ವಿರುದ್ಧ ವರುಣಾದಲ್ಲಿ ಸ್ಪರ್ಧಿಸುವ ಇರಾದೆ ಇರಲಿಲ್ಲ, ಆದರೆ....: ಸಚಿವ ವಿ ಸೋಮಣ್ಣ

'ನನ್ನ ಮಗ ಡಾ. ಅರುಣ್ ಸೋಮಣ್ಣಗಾಗಿ ಗೋವಿಂದರಾಜನಗರ (ಬೆಂಗಳೂರು) ಕ್ಷೇತ್ರವನ್ನು ಬಿಟ್ಟುಕೊಡುವ ಮೂಲಕ ನಾನು ಚುನಾವಣಾ ರಾಜಕೀಯದಿಂದ ನಿವೃತ್ತಿ ಹೊಂದಲು ಬಯಸಿದ್ದೆ. ಆದರೆ, ವರುಣಾ ಮತ್ತು ಚಾಮರಾಜನಗರ ಕ್ಷೇತ್ರಗಳಿಂದ ಸ್ಪರ್ಧಿಸುವಂತಾಯಿತು. ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸುವ ಯಾವುದೇ ಉದ್ದೇಶ ನನಗಿರಲಿಲ್ಲ ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದರು.
ವಿ ಸೋಮಣ್ಣ
ವಿ ಸೋಮಣ್ಣ

ಮೈಸೂರು: 'ನನ್ನ ಮಗ ಡಾ. ಅರುಣ್ ಸೋಮಣ್ಣಗಾಗಿ ಗೋವಿಂದರಾಜನಗರ (ಬೆಂಗಳೂರು) ಕ್ಷೇತ್ರವನ್ನು ಬಿಟ್ಟುಕೊಡುವ ಮೂಲಕ ನಾನು ಚುನಾವಣಾ ರಾಜಕೀಯದಿಂದ ನಿವೃತ್ತಿ ಹೊಂದಲು ಬಯಸಿದ್ದೆ. ಆದರೆ, ಪಕ್ಷದ ಹೈಕಮಾಂಡ್ ನನಗೆ ವರುಣಾ ಮತ್ತು ಚಾಮರಾಜನಗರ ಕ್ಷೇತ್ರಗಳಿಂದ ಸ್ಪರ್ಧಿಸುವಂತೆ ಸೂಚಿಸಿತು. ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸುವ ಯಾವುದೇ ಉದ್ದೇಶ ನನಗಿರಲಿಲ್ಲ ಎಂದು ವಸತಿ ಸಚಿವ ವಿ. ಸೋಮಣ್ಣ ಭಾನುವಾರ ಇಲ್ಲಿ ಹೇಳಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 'ತಮಗೆ 72 ವರ್ಷ ವಯಸ್ಸಾಗಿದ್ದು, 11 ಬಾರಿ ಚುನಾವಣೆಗೆ ಸ್ಪರ್ಧಿಸಿ ಮೂರರಲ್ಲಿ ಸೋತಿದ್ದೇನೆ. ನಾನು ಚುನಾವಣಾ ರಾಜಕೀಯದಿಂದ ನಿವೃತ್ತಿ ಹೊಂದಲು ಬಯಸಿದ್ದೆ ಮತ್ತು ನನ್ನ ಮಗನನ್ನು ಗೋವಿಂದರಾಜನಗರದಿಂದ ಕಣಕ್ಕಿಳಿಸಲು ಪಕ್ಷದ ಹೈಕಮಾಂಡ್‌ಗೆ ಮನವಿ ಮಾಡಿದ್ದೆ. ಆದರೆ, ಹಣೆಬರಹ ಬೇರೆಯದೇ ಯೋಜನೆಗಳನ್ನು ಹೊಂದಿತ್ತು. ವರುಣಾ ಮತ್ತು ಚಾಮರಾಜನಗರದಿಂದ ಸ್ಪರ್ಧಿಸುವಂತೆ ಪಕ್ಷ ನನಗೆ ಸೂಚನೆ ನೀಡಿದೆ' ಎಂದರು.

20 ದಿನಗಳಲ್ಲಿ ವರುಣಾದ ಎಲ್ಲ ಗ್ರಾಮಗಳನ್ನು ಸುತ್ತಿದ್ದೇನೆ: ಸೋಮಣ್ಣ

ಮೂರು ತಿಂಗಳ ಹಿಂದೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ನನ್ನ ಮನೆಗೆ ಭೇಟಿ ನೀಡಿ ಮಾತನಾಡಿದ್ದರು. ನಂತರ ಆದಿಚುಂಚನಗಿರಿ ಮಠಕ್ಕೆ ಆಹ್ವಾನಿಸಿ ಪಕ್ಷದ ಕೇಂದ್ರ ನಾಯಕರನ್ನು ಭೇಟಿ ಮಾಡಲು ಹೇಳಿದರು. ಅಲ್ಲಿ ಗೋವಿಂದರಾಜನಗರದ ಅಭಿವೃದ್ಧಿ ಕುರಿತು ಪ್ರಶ್ನಿಸಲಾಯಿತು. ನಂತರ ಪಕ್ಷದ ಹೈಕಮಾಂಡ್ ಭೇಟಿ ಮಾಡಲು ದೆಹಲಿಗೆ ಭೇಟಿ ನೀಡುವಂತೆ ತಿಳಿಸಲಾಯಿತು ಎಂದರು.

ಪಕ್ಷದ ಹೈಕಮಾಂಡ್ ನನಗೆ ವರುಣಾ ಮತ್ತು ಚಾಮರಾಜನಗರದಿಂದ ಸ್ಪರ್ಧಿಸಲು ಟಾಸ್ಕ್ ನೀಡಿದೆ. ನನಗೆ 72 ವರ್ಷ ವಯಸ್ಸಾಗಿದೆ ಮತ್ತು ಗೌರವ ಮತ್ತು ಘನತೆಯಿಂದ ರಾಜಕೀಯದಿಂದ ನಿವೃತ್ತಿ ಹೊಂದಲು ಬಯಸುತ್ತೇನೆ ಎಂದು ಅವರಿಗೆ ಹೇಳಿದೆ ಮತ್ತು ನನ್ನ ಮಗನಿಗೆ ಟಿಕೆಟ್ ಕೇಳಿದೆ. ವರುಣಾ ಬಗ್ಗೆ ನನಗೆ ಏನೂ ಗೊತ್ತಿಲ್ಲ, ಆದರೆ 20 ದಿನಗಳಲ್ಲಿ ಕ್ಷೇತ್ರದ ಎಲ್ಲಾ ಗ್ರಾಮಗಳಲ್ಲಿ ಪ್ರವಾಸ ಮಾಡಿದ್ದೇನೆ ಎಂದು ಹೇಳಿದರು.

ಗೋವಿಂದರಾಜನಗರದಿಂದ ಟಿಕೆಟ್ ನಿರಾಕರಿಸಿ ವರುಣಾ ಮತ್ತು ಚಾಮರಾಜನಗರದಿಂದ ಸ್ಪರ್ಧಿಸುವಂತೆ ಸೂಚಿಸಿರುವುದು ಪಕ್ಷದ ಹೈಕಮಾಂಡ್‌ನಿಂದ ನೀಡಿರುವ ಶಿಕ್ಷೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸೋಮಣ್ಣ, ಕೇಂದ್ರ ನಾಯಕರು ಎರಡು ಸ್ಥಾನಗಳಿಗೆ ಸ್ಪರ್ಧಿಸುವಂತೆ ಹೇಳಿದ್ದರ ಹಿಂದಿನ ಕಾರಣವೇನು ಎಂಬುದು ಗೊತ್ತಿಲ್ಲ ಎಂದರು.

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಅವರ ಪುತ್ರ ಯತೀಂದ್ರ ಇಬ್ಬರೂ 15 ವರ್ಷಗಳಿಂದ ಕ್ಷೇತ್ರವನ್ನು ಪ್ರತಿನಿಧಿಸಿದರೂ ಅಭಿವೃದ್ಧಿ ಮಾಡಿಲ್ಲ ಎಂದು ಪ್ರತಿಪಾದಿಸಿದ ಸೋಮಣ್ಣ, ಗೋವಿಂದರಾಜನಗರದ ಮಾದರಿಯಲ್ಲಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವುದಾಗಿ ಹೇಳಿದರು.

ಸಿದ್ದರಾಮಯ್ಯ ಪರ ಪ್ರಚಾರ ಮಾಡುತ್ತಿರುವ ನಟ ಶಿವರಾಜ್‌ಕುಮಾರ್ ಅವರ ನಿರ್ಧಾರದಿಂದ ನನಗೆ ನಿರಾಶೆಯಾಗಿದೆ. 'ಡಾ. ರಾಜ್‌ಕುಮಾರ್ ನಮಗೆ ದೇವರು. 45 ವರ್ಷಗಳಿಂದ ಕುಟುಂಬದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದೇನೆ. ಶಿವರಾಜಕುಮಾರ್ ಅವರ ನಿರ್ಧಾರದಿಂದ ನನಗೆ ನಿರಾಸೆಯಾಗಿದೆ' ಎಂದರು.

ಇನ್ನುಳಿದ ನಟರಾದ ಲೂಸ್ ಮಾದ, ದುನಿಯಾ ವಿಜಿ, ರಮ್ಯಾ ಕೂಡ ಸಿದ್ದರಾಮಯ್ಯ ಪರ ಪ್ರಚಾರ ಮಾಡುತ್ತಿದ್ದಾರೆ. ಸಿದ್ದರಾಮಯ್ಯಗೆ ಸೋಲಿನ ಭಯ ಕಾಡುತ್ತಿದೆ. ವರುಣಾದಲ್ಲಿ ಅಭಿವೃದ್ಧಿ ಪರ ಕೆಲಸ ಮಾಡಲು ಅವಕಾಶ ನೀಡುವಂತೆ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದೇನೆ. ನಾನು ಕ್ಷೇತ್ರದಲ್ಲಿ ಆರಂಭಿಸಿರುವ ಯೋಜನೆಗಳಲ್ಲಿ ಸಿದ್ದರಾಮಯ್ಯ ಅವರ ಹೆಸರನ್ನೂ ನಮೂದಿಸಲಾಗುವುದು ಎಂದು ನಾನು ಭರವಸೆ ನೀಡುತ್ತೇನೆ. ಕಾಂಗ್ರೆಸ್ ಬಹುಮತ ಗಳಿಸಿದರೂ ಪಕ್ಷ ಅವರನ್ನು ಮುಖ್ಯಮಂತ್ರಿ ಮಾಡುವುದಿಲ್ಲ ಎಂಬ ವಿಶ್ವಾಸವಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com