ಬೆಂಗಳೂರು: ಸಿದ್ದರಾಮಯ್ಯ ಅವರೇ ಪೂರ್ಣಾವಧಿಗೆ ಸಿಎಂ ಆಗಿರ್ತಾರೆ ಎಂಬ ಸಚಿವ ಎಂಬಿ ಪಾಟೀಲ್ ಹೇಳಿಕೆ ಕಾಂಗ್ರೆಸ್ನಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಈ ಹೇಳಿಕೆಗೆ ಡಿಕೆ ಸಹೋದರರು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಸಚಿವ ಎಂಬಿ ಪಾಟೀಲ್ ವಿರುದ್ಧ ಡಿಸಿಎಂ ಡಿಕೆ ಶಿವಕುಮಾರ್ ಕೆಂಡಾಮಂಡಲವಾಗಿದ್ದು ಈಗ ಹೈಕಮಾಂಡ್ ನಾಯಕರಿಗೆ ದೂರು ನೀಡಿದ್ದಾರೆ. ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಎಂದು ಹೇಳಿಕೆ ನೀಡಿದ್ದಕ್ಕೆ ಡಿಕೆಶಿ ಗರಂ ಆಗಿದ್ದಾರೆ. ಈ ರೀತಿ ಹೇಳಿಕೆ ನೀಡಿದರೆ ನಾನು ಸರ್ಕಾರದಿಂದ ಹೊರಗಿರುತ್ತೇನೆ ಎಂದು ನೇರವಾಗಿಯೇ ಹೈಕಮಾಂಡ್ ನಾಯಕರಿಗೆ ಡಿಕೆಶಿ ಸಂದೇಶ ರವಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್, ಕರ್ನಾಟಕ ಉಸ್ತುವಾರಿ ರಣ್‌ದೀಪ್ ಸುರ್ಜೇವಾಲಾ ಅವರಿಗೆ ಕರೆ ಮಾಡಿದ ಡಿಕೆಶಿ ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಎಂದು ಹೇಳಲು ಎಂಬಿ ಪಾಟೀಲ್ ಯಾರು? ಅವರು ಹೈಕಮಾಂಡ್ ನಾಯಕರೇ? ಅವರು ಕಾಂಗ್ರೆಸ್ ಅಧ್ಯಕ್ಷರೇ? ಯಾವ ಆಧಾರದ ಮೇಲೆ ಎಂ.ಬಿ.ಪಾಟೀಲ್ ಮಾತನಾಡಿದ್ದಾರೆ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ ಎನ್ನಲಾಗಿದೆ.
ಕೊಟ್ಟ ಮಾತು ಉಳಿಸಿಕೊಂಡು ಸರ್ಕಾರದ ಭರವಸೆ ಈಡೇರಿಸುವುದು ನನ್ನ ಮೊದಲ ಆದ್ಯತೆ. ಈ ರೀತಿಯ ಮಾತುಗಳು ಮತ್ತಷ್ಟು ಬಂದರೆ ನಾನು ಸರ್ಕಾರದಿಂದ ಹೊರಗಿರಲು ಸಿದ್ದ. ಬಹಿರಂಗ ಹೇಳಿಕೆಗಳಿಗೆ ಸಂಪೂರ್ಣ ಬ್ರೇಕ್ ಹಾಕುವುದಾದರೆ ಹಾಕಿಸಿ. ಈ ರೀತಿಯ ಹೇಳಿಕೆಗಳಿಗೆ ಕಡಿವಾಣ ಬೀಳದೇ ಇದ್ದರೆ ನಾನು ಸರ್ಕಾರದ ಭಾಗವಾಗಿರಲ್ಲ ಎಂದು ಡಿಕೆಶಿ ಹೈಕಮಾಂಡ್ ನಾಯಕರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಎಂ ಬಿ ಪಾಟೀಲ್ ಹೇಳಿಕೆ ಬಗ್ಗೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್, ಯಾರಾದರೂ ಏನು ಬೇಕಾದರೂ ಹೇಳಿಕೊಳ್ಳಲಿ. ನಾನು ಆ ಬಗ್ಗೆ ಏನೂ ಮಾತಾಡುವುದಿಲ್ಲ. ಅಧಿಕಾರ ಮತ್ತಿತರ ಪಕ್ಷದ ವಿಚಾರಗಳನ್ನು ನೋಡಿಕೊಳ್ಳಲು ಎಐಸಿಸಿ ಇದೆ. ಕಾಂಗ್ರೆಸ್ ರಾಷ್ಟ್ರೀಯ ಮುಖಂಡರು ಇದ್ದಾರೆ. ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಮಾತ್ರ ನಮ್ಮ ಆದ್ಯತೆ ಎಂದು ಹೇಳಿದ್ದಾರೆ.
ಸಿಎಂ ಸ್ಥಾನ ಅಧಿಕಾರ ಹಂಚಿಕೆ ವಿಚಾರವಾಗಿ ಸಚಿವ ಎಂಬಿ ಪಾಟೀಲ್ ಹೇಳಿಕೆ ಹಿನ್ನಲೆಯಲ್ಲಿ ಗರಂ ಆಗಿರುವ ಸಂಸದ ಡಿಕೆ ಸುರೇಶ್ ನೇರ ಎಚ್ಚರಿಕೆ ಕೊಟ್ಟಿದ್ದಾರೆ. ನಾನು ಎಂಬಿ ಪಾಟೀಲ್ ಗೆ ತೀಕ್ಷ್ಣವಾದ ಎಚ್ಚರಿಕೆ ಕೊಡಬಲ್ಲೆ. ಆದರೆ ಈಗ ಅದು ಬೇಡ ಎಂದರು. ಅವರ ಹೇಳಿಕೆಗೆ ಹೆಚ್ಚಿನ ಮಾಹಿತಿ ಬೇಕಾದರೆ ಸುರ್ಜೇವಾಲರನ್ನೇ ಕೇಳಿ. ಎಂಬಿ ಪಾಟೀಲ್ ಗೆ ಹೇಳಿ ಇದೆಲ್ಲ ಬೇಡ ಅಂತ. ನನಗೂ ಎಂಬಿ ಪಾಟೀಲ್ ಹೇಳಿಕೆಗೆ ತೀಕ್ಷ್ಣ ಉತ್ತರ ನೀಡಲು ಬರುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
Advertisement