ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಬಹಿರಂಗ ಹೇಳಿಕೆ ನೀಡದಿರಿ: ಸಿಎಲ್'ಪಿ ಸಭೆಯಲ್ಲಿ ನಾಯಕರಿಗೆ ಸಿದ್ದು-ಡಿಕೆಶಿ ಖಡಕ್ ಸೂಚನೆ

ಸಚಿವ ಸಂಪುಟ ಬಿಕ್ಕಟ್ಟಿನ ನಡುವೆಯೇ ಶಾಸಕಾಂಗ ಸಭೆಯಲ್ಲಿ ಎಲ್ಲಾ ಶಾಸಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬುಧವಾರ ಖಡಕ್ ಸೂಚನೆ ನೀಡಿದ್ದಾರೆ.
ಕಾಂಗ್ರೆಸ್ ಶಾಸಕಾಂಗ ಸಭೆ.
ಕಾಂಗ್ರೆಸ್ ಶಾಸಕಾಂಗ ಸಭೆ.
Updated on

ಬೆಂಗಳೂರು: ಸಚಿವ ಸಂಪುಟ ಬಿಕ್ಕಟ್ಟಿನ ನಡುವೆಯೇ ಶಾಸಕಾಂಗ ಸಭೆಯಲ್ಲಿ ಎಲ್ಲಾ ಶಾಸಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬುಧವಾರ ಖಡಕ್ ಸೂಚನೆ ನೀಡಿದ್ದಾರೆ.

ಇಂದು ಬೆಳಗ್ಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆ ನಡೆಯಿತು.

ಸಭೆಯಲ್ಲಿ ಅಧಿಕಾರ ಹಂಚಿಕೆ ವಿಚಾರ, ಸಚಿವ ಸ್ಥಾನದ ವಿಚಾರ, ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಮಾಧ್ಯಮಗಳಿಗೆ ಬಹಿರಂಗ ಹೇಳಿಕೆ ನೀಡದಿರಿ. ಈ ರೀತಿಯ ಹೇಳಿಕೆಗಳು ಸರ್ಕಾರ ಹಾಗೂ ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ಎಚ್ಚರಿಕೆ ನೀಡಲಾಯಿತು ಎಂದು ತಿಳಿದುಬಂದಿದೆ.

ಇದೇ ವೇಳೆ ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿದ್ದೇವೆ. ಆದರೆ, ಲೋಕಸಭೆ ಚುನಾವಣೆಯಲ್ಲಿ 20 ಸ್ಥಾನ ಗೆಲ್ಲಬೇಕು ಎಂದು ಡಿಕೆ ಶಿವಕುಮಾರ್ ಶಾಸಕರಿಗೆ ಟಾಸ್ಕ್ ಕೊಟ್ಟಿದ್ದಾರೆಂದು ವರದಿಗಳು ತಿಳಿಸಿವೆ.

ಲೋಕಸಭೆ ಚುನಾವಣೆಯಲ್ಲಿ ನಾವು 20 ಸ್ಥಾನಗಳನ್ನು ಗೆಲ್ಲಲೇಬೇಕು. ಮುಂದಿನ ವರ್ಷ ಮೇ - ಜೂನ್ ನಲ್ಲಿ ಲೋಕಸಭಾ ಚುನಾವಣೆ ನಡೆಯುವ ಸಾಧ್ಯತೆಗಳಿವೆ. ವಿಧಾನಸಭೆ ಚುನಾವಣೆ ಗೆದ್ದೆವು ಎಂದು ಸುಮ್ಮನೆ ಕೂರುವಂತಿಲ್ಲ. ಲೋಕಸಭೆ ಚುನಾವಣೆಯಲ್ಲೂ ಈ ಗೆಲುವಿನ ಯಾನ ಮುಂದುವರೆಯಬೇಕು ಎಂದು ಸಲಹೆ ನೀಡಿದ್ದಾರೆಂದು ತಿಳಿದುಬಂದಿದೆ.

ಇದಷ್ಟೇ ಅಲ್ಲ, ಬಿಬಿಎಂಪಿ ಚುನಾವಣೆಯಲ್ಲೂ ವಿಜಯ ಸಾಧಿಸಬೇಕು.‌ ಜಿಲ್ಲಾ ಸಚಿವರು ಆಗುವವರು ಪ್ರತಿ ಜಿಲ್ಲೆಯಲ್ಲಿ ಹಾಗೂ ಶಾಸಕರು ಪ್ರತಿ ವಿಧಾನಸಭೆ ಕ್ಷೇತ್ರದಲ್ಲೂ ಪಕ್ಷದ ಕಚೇರಿ ಸ್ಥಾಪಿಸಲೇಬೇಕು. ನಮಗೆ ಪಕ್ಷದ ಕಚೇರಿಯೇ ದೇಗುಲ. ಅದಕ್ಕೆ ಮೊದಲ ಆದ್ಯತೆ ನೀಡಬೇಕು ಎಂದರು.

ಎಲ್ಲರಿಗೂ ಅಧಿಕಾರ ಸಿಗದಿರಬಹುದು. ಆದರೆ ನಿಮ್ಮ ಶ್ರಮಕ್ಕೆ ಗೌರವ ಸಿಗುತ್ತದೆ. ಪಕ್ಷದ ಕೆಲಸವನ್ನು ದೇವರ ಕೆಲಸ ಎಂದು ಮಾಡಬೇಕು. ಚುನಾವಣೆಯಲ್ಲಿ ನಿಮ್ಮ ಗೆಲುವಿಗೆ ಶ್ರಮಿಸಿದ ಕಾರ್ಯಕರ್ತರನ್ನು ಮರೆಯಬಾರದು. ರಾಜ್ಯದ ಜನರಿಗೆ ಸ್ವಚ್ಛ ಆಡಳಿತ ನೀಡಲು ಸಹಕರಿಸಬೇಕು. ಮೈಯೆಲ್ಲಾ ಕಣ್ಣಾಗಿ ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಇನ್ನು ಸಿಎಂ ಸಿದ್ದರಾಮಯ್ಯ, ರಾಜ್ಯದಲ್ಲಿ ಮಳೆಗೆ ಪ್ರಾಣಹಾನಿ, ಆಸ್ತಿ ಹಾನಿಯಾಗಿದೆ. ಮುಂದಿನ ದಿನಗಳ ಇನ್ನು ಹೆಚ್ಚಿನ ಮಳೆಯಾಗಲಿದೆ. ಶಾಸಕರು ತಮ್ಮ ಕ್ಷೇತ್ರಗಳ ಹೆಚ್ಚಿನ ಸಮಯ ಇದ್ದು, ಜನರ ಸಮಸ್ಯೆಗಳನ್ನ ಆಲಿಸಬೇಕು ಎಂದು ಸೂಚಿಸಿದರು.

ಜನ ಬದಲಾವಣೆ ಬಯಸಿ ನಮಗೆ ಅಧಿಕಾರ ಕೊಟ್ಟಿದ್ದಾರೆ. ಅವರ ನಿರೀಕ್ಷೆಗಳನ್ನ ನಾವು ಉಳಿಸಿಕೊಳ್ಳಬೇಕು. ಈಗಾಗಲೇ ಡಿಸಿಗಳಿಗೆ ಸೂಚನೆ ನೀಡಲಾಗಿದೆ. ರೈತರಿಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಿ. ರಸ ಗೊಬ್ಬರ, ಬೀಜ ಎಲ್ಲವೂ ಸ್ಟಾಕ್ ಇದೆ, ಎಲ್ಲವನ್ನು ಬಳಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ ಎಂದು ವರದಿಗಳಿಂದ ತಿಳಿದುಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com