ನವದೆಹಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಕಾಂಗ್ರೆಸ್ ಸಂಸದೀಯ ಪಕ್ಷದ (ಸಿಪಿಪಿ) ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದರು.
ತಮ್ಮ ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸಲು ಸಿದ್ದರಾಮಯ್ಯ ಅವರು ರಾಷ್ಟ್ರ ರಾಜಧಾನಿಗೆ ತೆರಳಿದ್ದು, ದಕ್ಷಿಣದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಿದ ನಂತರ ಸೋನಿಯಾ ಗಾಂಧಿ ಅವರೊಂದಿಗಿನ ಅವರ ಮೊದಲ ಸಭೆ ಇದಾಗಿದೆ.
ಸಿದ್ದರಾಮಯ್ಯ ಅವರು ಸಿಪಿಪಿ ಅಧ್ಯಕ್ಷರಿಗೆ ರಾಜ್ಯದಲ್ಲಿ ಉತ್ತಮ ಆಡಳಿತದ ಭರವಸೆ ನೀಡಿದ್ದಾರೆ ಮತ್ತು ವಿಧಾನಸಭಾ ಚುನಾವಣೆಯ ಸಮಯದಲ್ಲಿ ಅವರ ಮಾರ್ಗದರ್ಶನ ಮತ್ತು ಪ್ರಚಾರಕ್ಕಾಗಿ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ ಎಂದು ತಿಳಿದುಬಂದಿದೆ.
ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತು ಕಾಂಗ್ರೆಸ್‌ನ ಉನ್ನತ ನಾಯಕರು ಗುರುವಾರ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೊಂದಿಗೆ ಚರ್ಚೆ ನಡೆಸಿದ್ದಾರೆ.
ಕರ್ನಾಟಕ ಉಸ್ತುವಾರಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ, ಪಕ್ಷದ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಉಭಯ ನಾಯಕರು ಭೇಟಿ ಮಾಡಿದ್ದರು.
ಕರ್ನಾಟಕ ಸಂಪುಟಕ್ಕೆ ಸುಮಾರು 20 ಸಚಿವರನ್ನು ಸೇರ್ಪಡೆ ಮಾಡಿಕೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿದ್ದು, ಅದು ಅಂತಿಮಗೊಳ್ಳುವ ಮೊದಲು ಮತ್ತೊಂದು ಸುತ್ತಿನ ಚರ್ಚೆ ನಡೆಸಲಾಗುವುದು ಎಂದು ಹೇಳಿವೆ.
ಮೇ 20 ರಂದು ಎಂಟು ಕ್ಯಾಬಿನೆಟ್ ಸಚಿವರೊಂದಿಗೆ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಕ್ರಮವಾಗಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.
ಮೊದಲ ಹಂತದಲ್ಲಿಯೇ ಸುಮಾರು 28 ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಹಿಂದಿನ ಯೋಜನೆಗೆ ವಿರುದ್ಧವಾಗಿ ಎಂಟು ಸಚಿವರ ಮೊದಲ ಪಟ್ಟಿಗೆ ಕಾಂಗ್ರೆಸ್ ಹೈಕಮಾಂಡ್ ಅನುಮೋದನೆ ನೀಡಿತ್ತು. ಬಳಿಕ ಅವರು ಪ್ರಮಾಣ ವಚನ ಸ್ವೀಕರಿಸಿದ್ದರು.
ಕರ್ನಾಟಕದಲ್ಲಿ ಗರಿಷ್ಠ 34 ಮಂದಿ ಸಚಿವರಾಗಬಹುದಾಗಿದ್ದು, ಎಲ್ಲ ಆಕಾಂಕ್ಷಿಗಳಿಗೆ ಅವಕಾಶ ಕಲ್ಪಿಸುವುದು ಕಾಂಗ್ರೆಸ್‌ಗೆ ಕಷ್ಟವಾಗಲಿದೆ.
ಎಲ್ಲ ವರ್ಗಗಳನ್ನು ಪ್ರತಿನಿಧಿಸುವ ಮತ್ತು ಹಿರಿಯರಾಗಿರುವ ಶಾಸಕರ ಹೆಸರನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಲಾಗಿದೆ ಮತ್ತು ಈ ಆಯ್ಕೆಯ ಬಗ್ಗೆ ಯಾವುದೇ ಆಕ್ಷೇಪಣೆಗಳಿಲ್ಲ ಎಂದು ಮೂಲಗಳು ತಿಳಿಸಿವೆ.
Advertisement