ಶಿವಮೊಗ್ಗ ಕಾಂಗ್ರೆಸ್ ನಲ್ಲಿ ಭಿನ್ನಮತ: ಸಚಿವರ ಅಡುಗೆ ಮನೆಯಲ್ಲಿರುವವರ ದೂರಿಗೆ ಡೋಂಟ್ ಕೇರ್; ತಾರಕಕ್ಕೇರಿದ ಬೇಳೂರು- ಮಧು ಗುದ್ದಾಟ!

ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹಾಗೂ ಶಾಸಕ ಬೇಳೂರು ಗೋಪಾಲಕೃಷ್ಣ ನಡುವಿನ ತಿಕ್ಕಾಟ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ.
ಮಧು ಬಂಗಾರಪ್ಪ ಮತ್ತು ಬೇಳೂರು ಗೋಪಾಲಕೃಷ್ಣ
ಮಧು ಬಂಗಾರಪ್ಪ ಮತ್ತು ಬೇಳೂರು ಗೋಪಾಲಕೃಷ್ಣ

ಬೆಂಗಳೂರು: ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹಾಗೂ ಶಾಸಕ ಬೇಳೂರು ಗೋಪಾಲಕೃಷ್ಣ ನಡುವಿನ ತಿಕ್ಕಾಟ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ.

ಸಚಿವ ಮಧು ಬಂಗಾರಪ್ಪ ವಿರುದ್ಧ ಅಸಮಾಧಾನ ಹೊರಹಾಕಿದ್ದ ಬೇಳೂರು ತಾನೂ ಸಚಿವ ಸ್ಥಾನದ ಆಕಾಂಕ್ಷಿ ಎಂದು ಹೇಳಿದ್ದರು. ಮಾಜಿ ಸಿಎಂ ಮಗ ಎಂದು ಮಧುಗೆ ಸಚಿವ ಸ್ಥಾನ ನೀಡಿದ್ದಾರೆ ಎಂದೂ ಆರೋಪಿಸಿದ್ದರು.

ಜಿಲ್ಲಾ ಉಸ್ತುವಾರಿ ಸಚಿವರು ಯಾರೋ ಗೊತ್ತಿಲ್ಲ ಎಂದಿರುವ ಬೇಳೂರು ಗೋಪಾಲಕೃಷ್ಣ ವಿರುದ್ಧ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ  ಶುಕ್ರವಾರ ಮಧು ಬಂಗಾರಪ್ಪ ಬೆಂಬಲಿಗರು ದೂರು ಸಲ್ಲಿಸಿದರು.

ಈ ದೂರಿನ ಬಗ್ಗೆ ಪ್ರತಿಕ್ರಿಯಿಸಿರುವ ಬೇಳೂರು ಗೋಪಾಲ ಕೃಷ್ಣ, ಕೆಪಿಸಿಸಿ ಅಧ್ಯಕ್ಷರಿಗೆ ನನ್ನ ವಿರುದ್ಧ ದೂರು ನೀಡಿರುವವರು ಆ ಸಚಿವರ ಅಡುಗೆ ಮನೆಯಲ್ಲಿರುವವರು. ಅವರಲ್ಲಿ ಪಕ್ಷಕ್ಕೆ ದುಡಿದವರು ಯಾರು ಎಂಬುದು ಗೊತ್ತಿದೆ. ನಾನು ಸಹ ನಾಳೆ 100 ಜನರನ್ನು ಕರೆದುಕೊಂಡು ಹೋಗಬಲ್ಲೆ, ಆ ತಾಕತ್ತು ನನಗಿದೆ. ಅಲ್ಲದೆ, ನಾನು ಉಸ್ತುವಾರಿ ಸಚಿವರ ಕಾರ್ಯವೈಖರಿ ಬದಲಿಸಿಕೊಳ್ಳುವಂತೆ ನೇರವಾಗಿ ಹೇಳಿದ್ದೇನೆ. ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ನೇರವಾಗಿ ಹರಿಹಾಯ್ದಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಚಿವರು ಶಾಸಕರುಗಳನ್ನು ಕರೆದುಕೊಂಡು ಕ್ಷೇತ್ರದಲ್ಲಿ ಕೆಲಸ ಮಾಡಬೇಕು. ಕೆಡಿಪಿ ಮೀಟಿಂಗ್ ಮತ್ತೊಂದು ಮೀಟಿಂಗ್ ಮಾಡದೇ ಹೋದರೆ ಏನು ಮಾಡುವುದು. ಅದಕ್ಕೆ ನಾನು ಉತ್ತರ ಕೊಟ್ಟಿದ್ದೇನೆ. ಅದನ್ನು ಬಿಟ್ಟರೆ ಬೇರೆ ಏನು ಇಲ್ಲ ಎಂದು ತಿಳಿಸಿದರು.

ತಮ್ಮ ಹೇಳಿಕೆಯಿಂದ ಪಕ್ಷಕ್ಕೆ ಮುಜುಗರ ಆಗುತ್ತಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾರ್ಯಾರು ಪಕ್ಷಕ್ಕೆ ದುಡಿದಿದ್ದಾರೆ ಚೆನ್ನಾಗಿ ಗೊತ್ತಿದೆ. ನಿತ್ಯ ಅವರೆಲ್ಲ ಅವರ ಅಡುಗೆ ಕೊಣೆಯಲ್ಲಿ ಇರುವವರು ಅಷ್ಟೇ. ಪಕ್ಷಕ್ಕೆ ನಾನು ಸಹ ಮುಜುಗರ ಮಾಡೋಕೆ ಆಗಲ್ಲ. ನಾನು ಸರ್ಕಾರದ ವಿರುದ್ಧವಾಗಲಿ, ಪಕ್ಷದ ಬಗ್ಗೆ ಮಾತನಾಡಿಲ್ಲ ನಾನು ನೇರವಾಗಿ ಹೇಳಿದ್ದು ಉಸ್ತುವಾರಿ ಸಚಿವರಿಗೆ ಅಷ್ಟೇ. ಅವರ ಕಾರ್ಯವೈಖರಿ ತಿದ್ದುಪಡಿ ಮಾಡಿಕೊಳ್ಳಲಿ ಎಂದಷ್ಟೇ ಹೇಳಿದ್ದೆ. ನನ್ನನ್ನು ಕಡೆಗಣಿಸುತ್ತಿದ್ದಾರೆ. ಅವರ ದೂರು ಬಗ್ಗೆ ನಾನು ತಲೆಕಡೆಸಿಕೊಳ್ಳಲ್ಲ. ಮಾಜಿ ಸಿಎಂ ಮಗ ಎಂದು ಸಚಿವ ಸ್ಥಾನ ಕೊಟ್ಟಿದ್ದಾರೆ ಎಂದಿದ್ದಾರೆ.

ಬೇಳೂರು ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಮಧು ಬಂಗಾರಪ್ಪ, ಇದೆಲ್ಲ ಪಕ್ಷದ ಆಂತರಿಕ ವಿಚಾರ, ಏನೇ ಇದ್ದರೂ ಪಕ್ಷವೇ ನಿರ್ಣಯ ಕೈಗೊಳ್ಳುತ್ತದೆ. ನನಗೆ ಬೇರೆ ಕೆಲಸ ಕೊಟ್ಟಿದ್ದಾರೆ. ನಾವು ಪಕ್ಷದ ಚಿಹ್ನೆಯಡಿ ಗೆದ್ದಿದ್ದೇವೆ, ಹುಷಾರಾಗಿ ಮಾತಾಡಬೇಕು.  ನಾವು ಪಕ್ಷದ ಆಧಾರದ ಮೇಲೆ ಕೆಲಸ ಮಾಡುತ್ತೇವೆ, ನಾವು ಪಕ್ಷದ ಆಳ್ವಿಕೆಯಲ್ಲಿ ಇದ್ದೇವೆ, ನಾವು ಸ್ವತಂತ್ರವಾಗಿ ಗೆದ್ದಿಲ್ಲ, ಇದು ಪಕ್ಷದ ಗೆಲುವು ಮತ್ತು ನಾವು ಹೇಗೆ ವರ್ತಿಸಬೇಕು ಎಂಬುದನ್ನು ನಾವು ತಿಳಿದಿರಬೇಕು. ಯಾವುದೇ ವ್ಯಕ್ತಿಗಿಂತ ಪಕ್ಷ ಮುಖ್ಯ, ಈ ಬಗ್ಗೆ ಸಿಎಂ, ಉಪಮುಖ್ಯಮಂತ್ರಿ ಹೇಳಿದ್ದಾರೆ. ನಾನಾಗಲಿ ಬೇಳೂರಾಗಲಿ ಹುಷಾರಾಗಿ ಹೇಳಿಕೆ ಕೊಡಬೇಕು. ಅವರ ಹೇಳಿಕೆಗೆ ನಾನು ಕಮೆಂಟ್ ಮಾಡಲ್ಲ. ಎಲ್ಲಿ ಉತ್ತರ ಕೊಡಬೇಕೋ ಅಲ್ಲಿ ಉತ್ತರ ಕೊಡ್ತೇನೆ ಎಂದಿದ್ದಾರೆ.

ಇತ್ತೀಚೆಗಷ್ಟೇ ಪಕ್ಷದಲ್ಲಿನ ಭಿನ್ನಾಭಿಪ್ರಾಯದ ಊಹಾಪೋಹಗಳಿಗೆ ತೆರೆ ಎಳೆದಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರು,  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್‌ನಲ್ಲಿ ಯಾವುದೇ ಗೊಂದಲವಿಲ್ಲ, ಏನೇ ಸಮಸ್ಯೆಯಿದ್ದರೂ ನಾಯಕರು ನಮ್ಮೊಂದಿಗೆ ಮಾತನಾಡಬೇಕು, ಮಾಧ್ಯಮಗಳೊಂದಿಗೆ ಅಲ್ಲ ಎಂದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com