ಮುಂದಿನ ವಾರ ಬಿಜೆಪಿ ಶಾಸಕಾಂಗ ಪಕ್ಷದ ಸಭೆ, ವಿಪಕ್ಷ ನಾಯಕನ ಆಯ್ಕೆ: ಬಿಜೆಪಿ ನೂತನ ಅಧ್ಯಕ್ಷ ಬಿವೈ ವಿಜಯೇಂದ್ರ

ರಾಜ್ಯದಲ್ಲಿ ಮುಂದಿನ ವಾರ ವಿರೋಧ ಪಕ್ಷದ ನಾಯಕನನ್ನು ಅಂತಿಮಗೊಳಿಸಲಾಗುವುದು ಎಂದು ನೂತನವಾಗಿ ನೇಮಕಗೊಂಡ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಶುಕ್ರವಾರ ಘೋಷಿಸಿದರು.
ಬಿವೈ ವಿಜಯೇಂದ್ರ
ಬಿವೈ ವಿಜಯೇಂದ್ರ

ಬೆಂಗಳೂರು: ರಾಜ್ಯದಲ್ಲಿ ಮುಂದಿನ ವಾರ ವಿರೋಧ ಪಕ್ಷದ ನಾಯಕನನ್ನು ಅಂತಿಮಗೊಳಿಸಲಾಗುವುದು ಎಂದು ನೂತನವಾಗಿ ನೇಮಕಗೊಂಡ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಶುಕ್ರವಾರ ಘೋಷಿಸಿದರು.

ಶುಕ್ರವಾರ (ನವೆಂಬರ್ 17) ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆಯಲಾಗುವುದು. ದೆಹಲಿಯಿಂದ ವೀಕ್ಷಕರು ಬರುತ್ತಾರೆ. ಪಕ್ಷದ ಎಲ್ಲಾ ಶಾಸಕರು ತಮ್ಮ ಅಭಿಪ್ರಾಯಗಳನ್ನು ನೀಡಲಿದ್ದಾರೆ ಮತ್ತು ವಿರೋಧ ಪಕ್ಷದ ನಾಯಕನನ್ನು ಅಂತಿಮಗೊಳಿಸಲಾಗುವುದು ಎಂದು ಸುದ್ದಿಗಾರರಿಗೆ ತಿಳಿಸಿದರು.

'ಈ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರೊಂದಿಗೆ ಚರ್ಚಿಸಿದ್ದೇನೆ. ಬಿಜೆಪಿ ರಾಜ್ಯಾಧ್ಯಕ್ಷನಾಗಿ ನಾನು ನೇಮಕಗೊಂಡ ನಂತರ (ಶುಕ್ರವಾರ ಸಂಜೆ) ನಾವು ಈ ಬಗ್ಗೆ ಅವರೊಂದಿಗೆ ಮಾತನಾಡಿದ್ದೇನೆ' ಎಂದು ಅವರು ಹೇಳಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದ ಸುಮಾರು ಆರು ತಿಂಗಳಿನಿಂದ ಬಿಜೆಪಿಗೆ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಿಲ್ಲ. ಇದು ಪಕ್ಷದ ಮುಖಂಡರಿಗೆ ಮುಜುಗರ ಉಂಟು ಮಾಡಿದೆ. 

'ನಾವು ಅದರ ಬಗ್ಗೆ ಮಾತನಾಡಿ ಮಾತನಾಡಿ ಸುಸ್ತಾಗಿದ್ದೇವೆ' ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಈ ವಾರದ ಆರಂಭದಲ್ಲಿ ಹೇಳಿದ್ದು, ಬಿಜೆಪಿಗೆ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಕಾಂಗ್ರೆಸ್ ಪದೇ ಪದೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿದೆ.

ಬಿಜೆಪಿ ಜಾತಿ ಲೆಕ್ಕಾಚಾರದಲ್ಲಿ ವಿರೋಧ ಪಕ್ಷದ ನಾಯಕನ ಆಯ್ಕೆಗೆ ಮುಂದಾಗಿದೆ ಎಂಬ ಊಹಾಪೋಹಗಳು ಹರಡಿವೆ. ಲಿಂಗಾಯತ ಸಮುದಾಯದವರು ರಾಜ್ಯಾಧ್ಯಕ್ಷರಾಗಿ ನೇಮಕಗೊಂಡರೆ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಒಕ್ಕಲಿಗ ಅಥವಾ ಒಬಿಸಿ ಆಗಿರಬಹುದು ಎನ್ನಲಾಗಿದೆ.

ಮೂಲಗಳ ಪ್ರಕಾರ, ಮಾಜಿ ಉಪಮುಖ್ಯಮಂತ್ರಿ ಆರ್ ಅಶೋಕ ಮತ್ತು ಡಾ. ಸಿಎನ್ ಅಶ್ವತ್ಥ್ ನಾರಾಯಣ ಅವರು ಒಕ್ಕಲಿಗ ಸಮುದಾಯದಿಂದ ಮುಂಚೂಣಿಯಲ್ಲಿದ್ದಾರೆ. ಬಿಜೆಪಿ ಒಬಿಸಿಯಿಂದ ನಾಯಕನ ಆಯ್ಕೆಗೆ ನಿರ್ಧರಿಸಿದರೆ ಮಾಜಿ ಸಚಿವ ವಿ ಸುನೀಲ್ ಕುಮಾರ್ ಅವರಿಗೆ ನೀಡಬಹುದು. 

'ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಹಿರಿಯ ನಾಯಕ ಎಸ್ ಸುರೇಶ್ ಕುಮಾರ್ ಅವರ ಶ್ರೀಮಂತ ಶಾಸಕಾಂಗ ಅನುಭವವನ್ನು ಪರಿಗಣಿಸುವ ಸಾಧ್ಯತೆಯನ್ನು ನಾವು ತಳ್ಳಿಹಾಕಲು ಸಾಧ್ಯವಿಲ್ಲ' ಎಂದು ಮೂಲವೊಂದು ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com