ಪಂಚರಾಜ್ಯಗಳ ಜನರಿಗೆ ಕಾಂಗ್ರೆಸ್ 'ಸುಳ್ಳು ಗ್ಯಾರಂಟಿಗಳ' ಮಂಕುಬೂದಿ ಎರಚುತ್ತಿದೆ: ಕುಮಾರಸ್ವಾಮಿ ವಾಗ್ದಾಳಿ

ಪಂಚರಾಜ್ಯಗಳ ಜನರಿಗೆ ಕಾಂಗ್ರೆಸ್  ಸುಳ್ಳು ಗ್ಯಾರಂಟಿಗಳ ಮಂಕುಬೂದಿ ಎರಚುತ್ತಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಹೆಚ್ ಡಿ ಕುಮಾರಸ್ವಾಮಿ
ಹೆಚ್ ಡಿ ಕುಮಾರಸ್ವಾಮಿ

ಬೆಂಗಳೂರು: ಪಂಚರಾಜ್ಯಗಳ ಜನರಿಗೆ ಕಾಂಗ್ರೆಸ್  ಸುಳ್ಳು ಗ್ಯಾರಂಟಿಗಳ ಮಂಕುಬೂದಿ ಎರಚುತ್ತಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಪಕ್ಷದ ಕಚೇರಿ ಜೆಪಿ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಜಾರಿ ಆಗಿರುವ ಐದು ಗ್ಯಾರಂಟಿಗಳ ವೈಫಲ್ಯ ಕುರಿತು ವಿವರಿಸಿದರು. 

ಶಕ್ತಿ ಕಾರ್ಯಕ್ರಮ ಬಹಳ ದೊಡ್ಡ ಸುದ್ದಿ ಮಾಡಿಬಿಟ್ಟಿದ್ದಾರೆ. ಮಕ್ಕಳಿಗೆ ಶಾಲೆಗೆ ಹೋಗಲು ಬಸ್ ಸಿಗುತ್ತಿಲ್ಲ. ಜೆಸಿಬಿಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಅಂತಹ ಪರಿಸ್ಥಿತಿ ತಂದಿಟ್ಟಿದ್ದಾರೆ. ಇನ್ನೂ ಗೃಹಜ್ಯೋತಿ, ಮಹಾದೇವಪ್ಪ ನಿಂಗೂ‌ ಕತ್ತಲು ಫ್ರೀ! ನಂಗೂ ಕತ್ತಲು ಫ್ರೀ!! ಕಾಕಾ ಪಾಟೀಲ್, ನಿಂಗೂ ಕತ್ತಲು ಫ್ರೀ!! ಎಂಬಂತಾಗಿದೆ. ಗೃಹ ಲಕ್ಷ್ಮಿ ಯೋಜನಗೆ ಸದಾ ಸರ್ವರ್‌ ಸಮಸ್ಯೆಯಾಗಿದೆ. ಬಡಜನರಿಗೆ ಉಚಿತವಾಗಿ 10 ಕೆಜಿ ಅಕ್ಕಿ ವಿತರಿಸುವುದಾಗಿ ಘೋಷಿಸಿದ ಅಕ್ಕಿ ಭಾಗ್ಯ ಯೋಜನೆಗೆ ನೂರೆಂಟು ವಿಘ್ನ ಆಗಿದೆ. ಯುವ ನಿಧಿ ಹೆಸರಿನಲ್ಲಿ ಯುವಕರಿಗೆ ಉಂಡೆ ನಾಮ ಹಾಕಿದ್ದು, ಬಾಲಗ್ರಹಪೀಡಿತವಾಗಿದೆ ಎಂದು ವ್ಯಂಗ್ಯವಾಡಿದದರು. 

ಕರ್ನಾಟಕದ ರೈತರಿಗೆ ಬಿಜೆಪಿ ಸರ್ಕಾರ 4000 ಕೊಡುತ್ತಿತ್ತು. ಅದನ್ನು ನಿಲ್ಲಿಸಿ ರೈತರಿಗೆ ದ್ರೋಹ ಬಗೆದಿದ್ದೀರಿ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಕುಮಾರಸ್ವಾಮಿ, ರಾಜ್ಯದಲ್ಲಿ 65 ಲಕ್ಷ ಹೆಕ್ಟೇರ್ ಬೆಳೆ ನಷ್ಟವಾಗಿದೆ. ನಯಾ ಪೈಸೆ ಪರಿಹಾರ ಕೊಟ್ಟಿಲ್ಲ. ಕಾಂಗ್ರೆಸ್ ಮೋಸ ಮಾಡುತ್ತಿದೆ. ಸಿದ್ದರಾಮಯ್ಯ ಅವರೇ ನೀವು ಐದು ವರ್ಷ ಸಿಎಂ ಆದಾಗ 2.42 ಲಕ್ಷ ಕೋಟಿ ಸಾಲ ಮಾಡಿದ್ದೀರಿ. 14 ಬಜೆಟ್ ಮಂಡಿಸಿದ ಆರ್ಥಿಕ ತಜ್ಞತೆ ಎಂದರೆ ಇದೇನಾ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಒಬ್ಬರು ಟೆಂಪ್ರವರಿ ಮುಖ್ಯಮಂತ್ರಿ ಹಾಗೂ ಇನ್ಬೊಬ್ಬರು ಡುಪ್ಲಿಕೇಟ್ ಮುಖ್ಯಮಂತ್ರಿ ಇದ್ದಾರೆ. ಅವರು ತೆಲಂಗಾಣದಲ್ಲಿ ಗ್ಯಾರಂಟಿಗಳ ಬಗ್ಗೆ ಮಾತನಾಡಲು ಹೋಗಿ ಅಪಮಾನಕ್ಕೊಳಗಾಗಿ ಬಂದಿದ್ದಾರೆ. ತೆಲಂಗಾಣದ ಜನರು ಈ ಪೊಳ್ಳು ಗ್ಯಾರಂಟಿಗಳಿಗೆ ಮರುಳಾಗಬಾರದು ಎಂದು ಕುಮಾರಸ್ವಾಮಿ ಮನವಿ ಮಾಡಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com