4 ವರ್ಷ 3 ತಿಂಗಳ ಅವಧಿಯಲ್ಲಿ ಪಕ್ಷಕ್ಕಾಗಿ ಶ್ರದ್ಧೆಯಿಂದ ದುಡಿದಿದ್ದೇನೆ: ನಳಿನ್ ಕುಮಾರ್ ಕಟೀಲ್

ದೇಶದ ಅತಿದೊಡ್ಡ ಪಕ್ಷದ ರಾಜ್ಯಾಧ್ಯಕ್ಷನಾಗಿ 4 ವರ್ಷ 3 ತಿಂಗಳ ಅವಧಿಯಲ್ಲಿ ಮಾತೃಸಮಾನ ಪಕ್ಷದ ಸಂಘಟನೆಗಾಗಿ ಶ್ರದ್ಧೆಯಿಂದ ದುಡಿದಿದ್ದೇನೆಂದು ನಳಿನ್ ಕುಮಾರ್ ಕಟೀಲ್ ಅವರು ಬುಧವಾರ ಹೇಳಿದ್ದಾರೆ.
ನಳಿನ್ ಕುಮಾರ್ ಕಟೀಲ್
ನಳಿನ್ ಕುಮಾರ್ ಕಟೀಲ್

ಬೆಂಗಳೂರು: ದೇಶದ ಅತಿದೊಡ್ಡ ಪಕ್ಷದ ರಾಜ್ಯಾಧ್ಯಕ್ಷನಾಗಿ 4 ವರ್ಷ 3 ತಿಂಗಳ ಅವಧಿಯಲ್ಲಿ ಮಾತೃಸಮಾನ ಪಕ್ಷದ ಸಂಘಟನೆಗಾಗಿ ಶ್ರದ್ಧೆಯಿಂದ ದುಡಿದಿದ್ದೇನೆಂದು ನಳಿನ್ ಕುಮಾರ್ ಕಟೀಲ್ ಅವರು ಬುಧವಾರ ಹೇಳಿದ್ದಾರೆ.

ನೂತನ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರಿಗೆ ಅಧಿಕಾರ ಹಸ್ತಾಂತರಕ್ಕೂ ಮುನ್ನ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರಿಗೆ ಧನ್ಯವಾದ ಹೇಳಿ ನಳಿನ್ ಕುಮಾರ್ ಅವರು ಪತ್ರವೊಂದನ್ನು ಬರೆದಿದ್ದಾರೆ. ಈ ಪತ್ರವನ್ನು ಸಾಮಾಜಿಕ ಜಾಲತಾಣ ಎಕ್ಸ್ (ಟ್ವಿಟರ್)ನಲ್ಲಿ ಪೋಸ್ಟ್ ಮಾಡಿದ್ದಾರೆ.

ಮಾತೃ ಸಮಾನವಾಗಿರುವ ನಮ್ಮ ಪಕ್ಷ ಮತ್ತು ಹಿರಿಯರು ಸಾಮಾನ್ಯ ಕಾರ್ಯಕರ್ತನಾದ ನನಗೆ ಪಕ್ಷದ ರಾಜ್ಯದ ಅತ್ಯುನ್ನತ ಜವಾಬ್ದಾರಿ ವಹಿಸಿದ ಈ 4 ವರ್ಷ 3 ತಿಂಗಳ ಅವಧಿಯಲ್ಲಿ ಈ ಹೊಣೆಗಾರಿಕೆಯನ್ನು ನಿಮ್ಮೆಲ್ಲರ ಸಹಕಾರದಿಂದ ಪರಿಪೂರ್ಣತೆಯಿಂದ ನಿರ್ವಹಿಸಿದ್ದೇನೆ.

ಈ ಅವಧಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಮಾರ್ಗದರ್ಶನ ಮಾಡಿರುವ ನಮ್ಮ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿಜಿಯವರಿಗೆ, ಜವಾಬ್ದಾರಿ ಸ್ವೀಕರಿಸುವ ಸಂದರ್ಭದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಮತ್ತು ಈಗ ರಾಷ್ಟ್ರೀಯ ಗೃಹಸಚಿವರಾಗಿರುವ ಶ್ರೀ ಅಮಿತ್ ಶಾ ಅವರಿಗೆ, ಪಕ್ಷದ ಪ್ರಸ್ತುತ ರಾಷ್ಟ್ರಾಧ್ಯಕ್ಷರಾದ ಶ್ರೀ ಜೆ. ಪಿ. ನಡ್ಡಾ ಅವರಿಗೆ, ಹೆಜ್ಜೆಹೆಜ್ಜೆಗೂ ಮಾರ್ಗದರ್ಶನ ನೀಡುತ್ತಾ ಬಂದಿರುವ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಶ್ರೀ ಬಿ. ಎಲ್. ಸಂತೋಷ್ ಜಯವರಿಗೆ, ನಮ್ಮ ಪಕ್ಷದ ಶಕ್ತಿ ಯಡಿಯೂರಪ್ಪನವರಿಗೆ, ಪಕ್ಷದ ಎಲ್ಲಾ ರಾಷ್ಟ್ರೀಯ ಮತ್ತು ರಾಜ್ಯ ಮುಖಂಡರುಗಳಿಗೆ, ಪಕ್ಷದ ರಾಜ್ಯ ಪದಾಧಿಕಾರಿಗಳಿಗೆ, ಮೋರ್ಚಾಗಳ ಮುಖಂಡರುಗಳಿಗೆ ಹಾಗೂ ವಿಶೇಷವಾಗಿ ನಮ್ಮ ಪಕ್ಷದ ಎಲ್ಲಾ ದೇವದುರ್ಲಭ ಕಾರ್ಯಕರ್ತ ಬಂಧುಗಳಿಗೆ ಧನ್ಯವಾದಗಳು.

ಈ ಅವಧಿಯಲ್ಲಿ ಕಾಯಾ, ವಾಚಾ, ಮನಸಾ ಪಕ್ಷದ ಸೇವೆ ಮಾಡುವ ಸಂದರ್ಭದಲ್ಲಿ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ನನ್ನ ಕೈ ಹಿಡಿದು ಮುನ್ನಡೆಸಿದ ಎಲ್ಲಾ ಪ್ರೀತಿಪಾತ್ರರಿಗೆ ಧನ್ಯವಾದಗಳು. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಯ ಕೃಪೆ, ದೈವದೇವರುಗಳ ಅನುಗ್ರಹದಿಂದ ಪಕ್ಷದ ಬೆಳವಣಿಗೆಗೆ ನನ್ನ ಸೇವೆ ನಿರಂತರವಾಗಿರಲಿದೆ. ಇನ್ನು ಮುಂದೆಯೂ ಸರ್ವರ ಸಹಕಾರ, ಪ್ರೀತಿ, ವಿಶ್ವಾಸ ಬಯಸುವ ನಿಮ್ಮ ನಳಿನ್ ಕುಮಾರ್ ಕಟೀಲ್ ಎಂದು ಹೇಳಿದ್ದಾರೆ.

ನನಗೆ ಕೊಟ್ಟ ಸಹಕಾರವನ್ನು ಬಿ.ವೈ.ವಿಜಯೇಂದ್ರಗೂ ಕೊಡಬೇಕು
ವಿಜಯೇಂದ್ರ ಅವರಿಗೆ ಅಧಿಕಾರ ಹಸ್ತಾಂತರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಟೀಲ್ ಅವರು, ವಿಜಯೇಂದ್ರ ನೇತೃತ್ವದಲ್ಲಿ ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡುತ್ತೇವೆಂದು ಹೇಳಿದರು.

ನನಗೆ ಕೊಟ್ಟ ಸಹಕಾರವನ್ನು ಬಿ.ವೈ.ವಿಜಯೇಂದ್ರಗೂ ಕೊಡಬೇಕು. ರಾಜ್ಯಾಧ್ಯಕ್ಷರಾದ ವಿಜಯೇಂದ್ರಗೆ ನಾವೆಲ್ಲರೂ ಜೊತೆಯಾಗಿ ನಿಲ್ತೇವೆ. ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 28 ಸ್ಥಾನಗಳಲ್ಲೂ ಗೆಲ್ಲುವ ಪ್ರಯತ್ನ ಮಾಡುತ್ತೇವೆಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com