ಅಮಿತ್ ಶಾ ಬಂದು ಮನೆಯಲ್ಲಿ 2 ಗಂಟೆ ಕೂತು ಜೀವ ತೆಗೆದ್ರು; ಪ್ರಧಾನಿ ಮೋದಿ ದೆಹಲಿಗೆ ಕರೆಸಿ ಸ್ಪರ್ಧಿಸಲೆಬೇಕೆಂದರು!

ಸ್ವತಃ ಅಮಿತ್‌ ಶಾ  ಅವರೇ ಮನೆಗೆ ಬಂದು ಕೂತ್ಕೊಂಡು ಎರಡು ಕಡೆ ಚುನಾವಣೆಗೆ ನಿಲ್ಲಬೇಕು ಎಂದು ಹೇಳಿದರೆ ನಾನೇನು ಮಾಡ್ಲಿ ಹೇಳಿ ಸ್ವಾಮೀಜಿ..: ಹೀಗೆ ಸಿದ್ದಗಂಗಾ ಶ್ರೀಗಳ ಮುಂದೆ ಸೋಮಣ್ಣ ವಿಧಾನಸಭಾ ಚುನಾವಣೆಯ ಸೋಲಿನ ನೋವು ತೋಡಿಕೊಂಡಿದ್ದಾರೆ.
ಸಿದ್ದಗಂಗಾ ಮಠಕ್ಕೆ ಸೋಮಣ್ಣ ಭೇಟಿ
ಸಿದ್ದಗಂಗಾ ಮಠಕ್ಕೆ ಸೋಮಣ್ಣ ಭೇಟಿ

ತುಮಕೂರು: ಸ್ವತಃ ಅಮಿತ್‌ ಶಾ  ಅವರೇ ಮನೆಗೆ ಬಂದು ಕೂತ್ಕೊಂಡು ಎರಡು ಕಡೆ ಚುನಾವಣೆಗೆ ನಿಲ್ಲಬೇಕು ಎಂದು ಹೇಳಿದರೆ ನಾನೇನು ಮಾಡ್ಲಿ ಹೇಳಿ ಸ್ವಾಮೀಜಿ..: ಹೀಗೆ ಸಿದ್ದಗಂಗಾ ಶ್ರೀಗಳ ಮುಂದೆ ಸೋಮಣ್ಣ ವಿಧಾನಸಭಾ ಚುನಾವಣೆಯ ಸೋಲಿನ ನೋವು ತೋಡಿಕೊಂಡಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ಸೋಲಿನ ಹತಾಶೆ, ಬಿಜೆಪಿ ರಾಜ್ಯಾಧ್ಯಕ್ಷ ಕೈತಪ್ಪಿದ್ದಕ್ಕೆ ಅಸಮಾಧಾನಗೊಂಡಿರುವ ಮಾಜಿ ಸಚಿವ ವಿ.ಸೋಮಣ್ಣ ಸಿದ್ದಗಂಗಾ ಮಠಕ್ಕೆ ತೆರಳಿ ಶ್ರೀಗಳನ್ನು ಭೇಟಿಯಾದರು. ಶ್ರೀಗಳ ಮುಂದೆ ಸೋಮಣ್ಣ ಚುನಾವಣಾ ಸೋಲಿನ ನೋವು ತೋಡಿಕೊಂಡರು. ಶಿವಕುಮಾರ ಶ್ರೀಗಳ ಗದ್ದುಗೆಗೆ ಸೋಮಣ್ಣ ವಿಶೇಷ ಪೂಜೆ ಸಲ್ಲಿಸಿದರು. ಗೋವಿಂದರಾಜ ಕ್ಷೇತ್ರ ಬಿಟ್ಟು ಹೋಗಬಾರದಿತ್ತು ಎಂದು ಸ್ಥಳೀಯ ಮುಖಂಡರೊಬ್ಬರು ಮಾತು ಆರಂಭಿಸಿದಾಗ ಶ್ರೀಗಳ ಎದುರು ಅಳಲು ತೋಡಿಕೊಂಡರು.

ಇಲ್ಲಿ ಬಿಟ್ಟು ಅಲ್ಲಿ ಸ್ಪರ್ಧೆ ಮಾಡಿದ್ದೇ ನನ್ನ ಮಹಾ ಅಪರಾಧವಾಯ್ತು. ಕೇಂದ್ರ ಗೃಹ ಅಮಿತ್ ಶಾ ನಮ್ಮ ಮನೆಯಲ್ಲಿ ಕುಳಿತುಕೊಂಡು ಜೀವ ತೆಗೆದರು. ಎರಡು ಗಂಟೆ ಮನೆಯಲ್ಲಿ ಕುಳಿತುಕೊಂಡಿದ್ದರು, ಆಗಲ್ಲ ಅಂತಾ ಹೇಳಿದ್ದೆ. ಪ್ರಧಾನಿ ಮೋದಿಯವರು ದೆಹಲಿಗೆ ಕರೆಸಿ ನೀನು ಸ್ಪರ್ಧೆ ಮಾಡು ಅಂದರು, ಏನ್ಮಾಡಲಿ ಎಂದು ಬೇಸರ ವ್ಯಕ್ತಪಡಿಸಿದರು. ಈ ಮೂಲಕ ತಾವು ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಲು ಕಾರಣವೇನು ಎಂಬುವುದರ ಹಿಂದಿನ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ.

ಅಮಿತ್ ಶಾ ಅವರು ಬಂದು ಎರಡೂವರೆ ಗಂಟೆ ಮನೆಯಲ್ಲಿ ಕುತ್ಕೊಂಡ್ ಬಿಟ್ರು. ಅವರೇ ನಿಂತುಕೊ ಅಂದ್ಮೇಲೆ ನಾನು ಏನ್ ಮಾಡಬೇಕು. ಏನ್ ಮಾಡಲಿ ಹೇಳಿ ಸ್ವಾಮೀಜಿ. ಆಗ ನಾನು ಇಲ್ಲಾ ಅಂತಾ ಹೇಳಿದೆ. ಪಿಎಂ ಮೋದಿ ದೆಹಲಿಗೆ ಕರೆಸಿದ್ರು. ನಾಲ್ಕು ದಿನ ಅಲ್ಲೇ ಇಟ್ಕೊಂಡ್ರು. ನೀನು ನಿಂತುಕೊ ಅಂತಾ ಹೇಳಿದಾಗ ಏನ್ ಮಾಡಬೇಕು ಎಂದು ಹತಾಷೆಯ ನುಡಿಗಳನ್ನಾಡಿದರು.

ಮಠಕ್ಕೆ ಭೇಟಿ ಕುರಿತು ಮಾತನಾಡಿದ ಸೋಮಣ್ಣ, ನಾನು ಮಠದ ಭಕ್ತ. 44 ದಶಕಗಳ ಸಂಬಂಧ ನನ್ನದು. ಡಿಸೆಂಬರ್ 6 ರಂದು ಗುರುಭವನ ಲೋಕಾರ್ಪಣೆ ಮಾಡುತ್ತೇವೆ. ಗುರುಭವನ ನಿರ್ಮಾಣ ಮಾಡುವ ಪುಣ್ಯ ಸಿಕ್ಕಿದೆ. 6 ರಂದು ನಡೆಯುವ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಈ ಭಾಗದ ಜನಪ್ರತಿನಿಧಿಗಳನ್ನು ಆಹ್ವಾನಿಸಿದ್ದೇನೆ. ಇಬ್ಬರು ಸಚಿವರು ಇರುತ್ತಾರೆ. ರಾಜಣ್ಣ, ಪರಮೇಶ್ವರ್ ಇರುತ್ತಾರೆ. ಅದಕ್ಕೆ ರಾಜಕೀಯ ಮಾಡೋವಷ್ಟು ಕೀಳುಮಟ್ಟ ನಾನು ಮಾಡಲ್ಲ. ಈ ಕಾರ್ಯಕ್ರಮಕ್ಕೆ ರಾಜಕೀಯ ಲೇಪನ ಬೇಡ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com