ಬಿಜೆಪಿ ರಾಜ್ಯಾಧ್ಯಕ್ಷ-ಎಚ್‌ಡಿ‌ಕೆ ಭೇಟಿ; ಮ್ಯಾಜಿಕ್ ಮರಳಿ ತರುವ ಜವಾಬ್ದಾರಿ ವಿಜಯೇಂದ್ರ-ನಿಖಿಲ್‌ ಹೆಗಲಿಗೆ!

ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌ಡಿ ಕುಮಾರಸ್ವಾಮಿ ಅವರು ಬಿಜೆಪಿ ಮತ್ತು ಜೆಡಿಎಸ್ ಎರಡೂ ಒಟ್ಟಾಗಿ 2006ರಲ್ಲಿ ತಾವು ಮತ್ತು ಬಿಜೆಪಿ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಜಂಟಿಯಾಗಿ ರೂಪಿಸಿದ ಅಭಿವೃದ್ಧಿಯ 'ಸುವರ್ಣ ಯುಗ'ವನ್ನು ಮರಳಿ ತರುತ್ತವೆ ಎಂದು ಭಾನುವಾರ ಆಶಿಸಿದರು.
ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿಯವರನ್ನು ಭೇಟಿ ಮಾಡಿದ ಬಿವೈ ವಿಜಯೇಂದ್ರ
ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿಯವರನ್ನು ಭೇಟಿ ಮಾಡಿದ ಬಿವೈ ವಿಜಯೇಂದ್ರ

ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌ಡಿ ಕುಮಾರಸ್ವಾಮಿ ಅವರು ಬಿಜೆಪಿ ಮತ್ತು ಜೆಡಿಎಸ್ ಎರಡೂ ಒಟ್ಟಾಗಿ 2006ರಲ್ಲಿ ತಾವು ಮತ್ತು ಬಿಜೆಪಿ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಜಂಟಿಯಾಗಿ ರೂಪಿಸಿದ ಅಭಿವೃದ್ಧಿಯ 'ಸುವರ್ಣ ಯುಗ'ವನ್ನು ಮರಳಿ ತರುತ್ತವೆ ಎಂದು ಭಾನುವಾರ ಆಶಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರನ್ನು ಭಾನುವಾರ ಬೆಂಗಳೂರು ಹೊರವಲಯ ಬಿಡದಿಯಲ್ಲಿರುವ ತೋಟದ ಮನೆಯಲ್ಲಿ ಭೇಟಿ ಮಾಡಿದ ನಂತರ ಕುಮಾರಸ್ವಾಮಿ ಅವರು ಈ ವಿಷಯ ತಿಳಿಸಿದರು.

'ಆಗ ನಮ್ಮ (ಕುಮಾರಸ್ವಾಮಿ-ಯಡಿಯೂರಪ್ಪ) ಕಾಂಬಿನೇಷನ್ ಚೆನ್ನಾಗಿ ಕೆಲಸ ಮಾಡಿತ್ತು. ನಾವು ಅಡಿಪಾಯ ಹಾಕಿದ್ದೇವೆ ಮತ್ತು ಈಗ ಆ ಮ್ಯಾಜಿಕ್ ಅನ್ನು ಮರಳಿ ತರುವುದು ನಿಖಿಲ್ ಮತ್ತು ವಿಜಯೇಂದ್ರ ಇಬ್ಬರದ್ದೂ ಆಗಿದೆ' ಎಂದು ಅವರು ಹೇಳಿದರು.

ಮುಂದಿನ ವರ್ಷ ಎಲ್ಲಾ 28 ಲೋಕಸಭಾ ಸ್ಥಾನಗಳನ್ನು ಮೈತ್ರಿ ಪಕ್ಷ ಗೆಲ್ಲಲು ವಿಜಯೇಂದ್ರ ಅವರು ತಮ್ಮ ಪಕ್ಷದ ಕಾರ್ಯಕರ್ತರನ್ನು ತಳಮಟ್ಟದಲ್ಲಿ ಸಂಘಟಿಸಲು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

'ನಾವಿಬ್ಬರೂ ಒಟ್ಟಾಗಿ ಎಲ್ಲಾ 28 ಸ್ಥಾನಗಳನ್ನು ಗೆಲ್ಲುವ ಮತ್ತು 2024ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕೈಗಳನ್ನು ಬಲಪಡಿಸುವ ಬಗ್ಗೆ ಚರ್ಚಿಸಿದ್ದೇವೆ. ಸೀಟು ಹಂಚಿಕೆ ವಿಷಯದ ಬಗ್ಗೆ ಈವರೆಗೂ ಯಾವುದೇ ಚರ್ಚೆಯಾಗಿಲ್ಲ. ಅಂತಹ ವಿಚಾರಗಳನ್ನು ದೆಹಲಿಯಲ್ಲಿ ವ್ಯವಹರಿಸುತ್ತೇವೆ, ಇಲ್ಲಿ ಅಲ್ಲ' ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಜಂಟಿ ಪ್ರಚಾರದ ಅಗತ್ಯವಿದ್ದರೆ ಇಬ್ಬರೂ (ನಿಖಿಲ್ ಮತ್ತು ವಿಜಯೇಂದ್ರ) ರಾಜ್ಯ ಪ್ರವಾಸ ಮಾಡುತ್ತಾರೆ ಎಂದು ಅವರು ಒತ್ತಿ ಹೇಳಿದರು.

ಒಗ್ಗಟ್ಟಿನಿಂದ ಹೋರಾಡುವ ಕುರಿತು ಚರ್ಚೆ: ಬಿವೈ ವಿಜಯೇಂದ್ರ

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷದ ವಿಫಲತೆಯನ್ನು ಬಯಲಿಗೆಳೆಯಲು ಉಭಯ ಪಕ್ಷಗಳು ಮುಂದಾಗಿರುವ ಕುರಿತು ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಿರುವುದಾಗಿ ಬಿವೈ ವಿಜಯೇಂದ್ರ ತಿಳಿಸಿದರು.

'ರಾಜ್ಯದಲ್ಲಿನ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಒಗ್ಗಟ್ಟಿನಿಂದ ಹೋರಾಡುವ ಬಗ್ಗೆ ಚರ್ಚಿಸಿದ್ದೇವೆ. ವಿಧಾನಸೌಧದ ಒಳಗೆ ಮತ್ತು ಹೊರಗೆ ಆಡಳಿತ ಪಕ್ಷದ ರೈತ, ಬಡವರ ಮತ್ತು ದಲಿತ ವಿರೋಧಿ ನೀತಿಗಳನ್ನು ಬಯಲಿಗೆಳೆಯುತ್ತೇವೆ' ಎಂದರು.

ತಮ್ಮ ಪಕ್ಷದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿವೆ ಎಂಬುದನ್ನು ಒಪ್ಪಿಕೊಂಡ ವಿಜಯೇಂದ್ರ, ಮುಂದಿನ ದಿನಗಳಲ್ಲಿ ಪಕ್ಷದ ವರಿಷ್ಠರ ನೆರವಿನಿಂದ ಅವುಗಳನ್ನು ಪರಿಹರಿಸಲಾಗುವುದು. ನಮ್ಮದು ರಾಷ್ಟ್ರೀಯ ಪಕ್ಷವಾಗಿರುವುದರಿಂದ ಕೆಲವು ಭಿನ್ನಾಭಿಪ್ರಾಯಗಳಿವೆ. ಅವು ಸ್ವಭಾವತಃ ಚಿಕ್ಕದಾಗಿವೆ. ಶೀಘ್ರದಲ್ಲಿಯೇ ಅವುಗಳನ್ನು ಬಗೆಹರಿಸಲು ಹಿರಿಯ ನಾಯಕರ ನೆರವು ಪಡೆಯುತ್ತೇನೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com