ಮಾರ್ಚ್ 17ಕ್ಕೆ ಪಾಲಿಟಿಕ್ಸ್ ನಲ್ಲಿ ಅರ್ಧ ಶತಕ ಪೂರ್ಣ; ಅಂದೇ ರಾಜಕೀಯ ನಿವೃತ್ತಿ: ಶ್ರೀನಿವಾಸ್ ಪ್ರಸಾದ್

2024ನೇ ಮಾರ್ಚ್ 17ಕ್ಕೆ ನಾನು ಚುನಾವಣಾ ರಾಜಕೀಯಕ್ಕೆ ಬಂದು 50 ವರ್ಷ ಪೂರ್ಣವಾಗಲಿದೆ. ಅಂದು ರಾಜಕೀಯಕ್ಕೆ ನಿವೃತ್ತಿ ಘೋಷಿಸುತ್ತೇನೆ ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್ ಹೇಳಿದ್ದಾರೆ.
ಶ್ರೀನಿವಾಸ್ ಪ್ರಸಾದ್
ಶ್ರೀನಿವಾಸ್ ಪ್ರಸಾದ್

ಚಾಮರಾಜನಗರ: 2024ನೇ  ಮಾರ್ಚ್ 17ಕ್ಕೆ ನಾನು ಚುನಾವಣಾ ರಾಜಕೀಯಕ್ಕೆ ಬಂದು 50 ವರ್ಷ ಪೂರ್ಣವಾಗಲಿದೆ. ಅಂದು ರಾಜಕೀಯಕ್ಕೆ ನಿವೃತ್ತಿ ಘೋಷಿಸುತ್ತೇನೆ ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್ ಹೇಳಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ನಿವೃತ್ತಿ ಘೋಷಣೆ ನಂತರ ಯಾವ ರಾಜಕೀಯ ಪಕ್ಷದ ಪರ ಚುನಾವಣಾ ಪ್ರಚಾರ ಮಾಡುವುದಿಲ್ಲ. ಮುಂದಿನ ಚುನಾವಣೆಗೆ ನಮ್ಮ ಕುಟುಂಬದಿಂದ ಯಾರ ಹೆಸರನ್ನು ಪ್ರಸ್ತಾಪ ಮಾಡುವುದಿಲ್ಲ ಎಂದರು. ಇಷ್ಟು ವರ್ಷದ ರಾಜಕಾರಣ ನನಗೆ ತೃಪ್ತಿಯಿದೆ. ಇನ್ನು ಮುಂದೆ ರಾಜಕೀಯದ ಬಗ್ಗೆ ಮಾತನಾಡುವುದಿಲ್ಲ. ಎಲ್ಲವನ್ನೂ ಗಮನಿಸುತ್ತೇನೆ ಅಷ್ಟೆ ಎಂದರು.

ಬಿಜೆಪಿ ಜೆಡಿಎಸ್ ಮೈತ್ರಿ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಮೈತ್ರಿ ಕುರಿತು ಬೊಬ್ಬೆ ಹಾಕುವುದು ಸರಿಯಲ್ಲ. ‘ಇಂಡಿಯಾ’ ಎಂದು ಮೈತ್ರಿಯಾಗಿದೆ. ಕಾಂಗ್ರೆಸ್ ಪಕ್ಷವನ್ನು ಕಟುವಾಗಿ ವಿರೋಧಿಸುವ 30 ಪಕ್ಷಗಳು ‘ಇಂಡಿಯಾ’ ಹೆಸರಿನಲ್ಲಿ ಒಂದಾಗಬಹುದು. ಇವರಿಬ್ಬರು ಒಂದಾಗಬಾರದಾ? ಜೆಡಿಎಸ್ ಬಿಜೆಪಿ-ಮೈತ್ರಿ ಜನಾದೇಶಕ್ಕೆ ಬಿಟ್ಟದ್ದು’ ಎಂದರು.

ಕಾಂಗ್ರೆಸ್ ನಲ್ಲಿ ಲಿಂಗಾಯತರ ಕಡೆಗಣಿಸಲಾಗುತ್ತಿದೆ ಎಂಬ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆ ಆಘಾತಕಾರಿಯಾದದ್ದು. ಅವರು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು. ಅವರು ಹೇಳಿರುವ ಈ ಮಾತು ತುಂಬಾ ಗಂಭೀರವಾದದ್ದು, ಸಮಾಜದ ಹಿತದೃಷ್ಟಿಯಿಂದ ಇದು ಒಳ್ಳೆಯದಲ್ಲ ಅಂತ ಅಭಿಪ್ರಾಯಪಟ್ಟರು.

ಇನ್ನು ಕಾವೇರಿ ನೀರಿನ ವಿವಾದಕ್ಕೆ ಮೇಕೆದಾಟು ಯೋಜನೆ ಅನುಷ್ಠಾನವೇ ಏಕೈಕ ಪರಿಹಾರವಾಗಿದೆ. ಉತ್ತಮ ಮಳೆಯಾದಾಗ ಯಥೇಚ್ಛ ನೀರು ತಮಿಳುನಾಡಿಗೆ ಹರಿಯುತ್ತೆ. ಆದ್ರೆ, ಮಳೆ ಕೊರತೆ ಉಂಟಾದಾಗ ಸಮಸ್ಯೆ ಎದುರಾಗುತ್ತದೆ. ಇನ್ನ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಬಂದು ಮತ್ತೊಂದು ಅಣೆಕಟ್ಟು ನಿರ್ಮಾಣವಾದ್ರೆ ಮಳೆ ಕೊರತೆ ಉಂಟಾದಾಗಲೂ ತಮಿಳುನಾಡಿಗೆ ನೀರು ಹರಿಸಬಹುದು. ಹೀಗಾಗಿ ಮೇಕೆದಾಟು ಅನುಷ್ಠಾನವಾದರೆ ಕಾವೇರಿ ಸಮಸ್ಯೆಗೆ ಪರಿಹಾರ ಸಿಗುತ್ತೆ ಎಂದು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com