ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಅಡಿಯಲ್ಲಿ ವೀರಶೈವ ಲಿಂಗಾಯತ ಸಮುದಾಯದ ಅಧಿಕಾರಿಗಳ ಕಡೆಗಣನೆ ಮಾಡಲಾಗುತ್ತಿದೆ ಎಂಬ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಶಾಸಕ ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆಯು ಇದೀಗ ಆಡಳಿತ ಪಕ್ಷದೊಳಗೆ ಕೋಲಾಹಲ ಸೃಷ್ಟಿಸಿದೆ. ಇದರೊಂದಿಗೆ ಬಿಜೆಪಿಯ ಬಿಎಸ್ ಯಡಿಯೂರಪ್ಪ ಕೂಡ ಶಾಮನೂರು ಅವರ ಹೇಳಿಕೆಗಳನ್ನು ಬೆಂಬಲಿಸಿದ್ದಾರೆ.
ಗ್ರೆಸ್ ಸರ್ಕಾರವನ್ನು ಗುರಿಯಾಗಿಸುವ ಅವಕಾಶವನ್ನು ತಪ್ಪಿಸಿಕೊಳ್ಳದ ಪ್ರತಿಪಕ್ಷ ಬಿಜೆಪಿಯು ಸಂಖ್ಯಾತ್ಮಕವಾಗಿ ದೊಡ್ಡ ಸಮುದಾಯವನ್ನು ನಿರ್ಲಕ್ಷ್ಯಿಸಲಾಗಿದೆ ಎಂದು ಆರೋಪಿಸಿದೆ.
ಶಿವಶಂಕರಪ್ಪ ಅವರ ಹೇಳಿಕೆಯನ್ನು ಸ್ವಾಗತಿಸಿರುವ ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಭಾನುವಾರದಂದು, ಶಿವಶಂಕರಪ್ಪ ಅವರ ಹೇಳಿಕೆಯನ್ನು ಸ್ವಾಗತಿಸಿದ್ದು, ವೀರಶೈವ ಲಿಂಗಾಯತರು ಒಗ್ಗಟ್ಟಾಗಿ ಇರುವಂತೆ ಕರೆ ನೀಡಿದ್ದಾರೆ.
ಪ್ರಬಲ ಸಮುದಾಯವನ್ನು ಪ್ರತಿನಿಧಿಸುವ ಅಖಿಲ ಭಾರತ ವೀರಶೈವ ಮಹಾಸಭಾದ ಮುಖ್ಯಸ್ಥರಾಗಿರುವ 92 ವರ್ಷದ ಶಿವಶಂಕರಪ್ಪ ಅವರು ತಮ್ಮ ಅಸಮಾಧಾನವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿದ್ದು, ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರಾಕರಿಸಿದ್ದಾರೆ.
ನಮ್ಮ ಸಮುದಾಯದ ಹಲವರಿಗೆ ಉತ್ತಮ ಹುದ್ದೆ ನೀಡಿಲ್ಲ. 'ದಿವಂಗತ ಮುಖ್ಯಮಂತ್ರಿಗಳಾದ ನಿಜಲಿಂಗಪ್ಪ ಮತ್ತು ಜೆಎಚ್ ಪಟೇಲ್ ಅವಧಿಯಲ್ಲಿ ಸಮುದಾಯ ಉತ್ತಮವಾಗಿತ್ತು. ಇದೀಗ ನಮ್ಮ ಸಮುದಾಯ ಮತ್ತು ಸಮುದಾಯದ ಅಧಿಕಾರಿಗಳು ತೊಂದರೆ ಎದುರಿಸುತ್ತಿದ್ದಾರೆ. ಎಂದು ಶಿವಶಂಕರಪ್ಪ ಹೇಳಿದ್ದರು.
ಲಿಂಗಾಯತ ಸಮುದಾಯದವರು ಸಿಎಂ ಆಗಬೇಕೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಹಿಂದೆ ನಿಜಲಿಂಗಪ್ಪ ಹಾಗೂ ವೀರೇಂದ್ರ ಪಾಟೀಲ್ ಅವರು ಸಿಎಂ ಆಗಿದ್ದರು. ಅವರ ಅವಧಿಯಲ್ಲಿ ನಾವು ಆಡಳಿತ ನಡೆಸಿದ್ದೆವು. ಅವರು ನಮ್ಮನ್ನು ಚೆನ್ನಾಗಿ ನೋಡಿಕೊಂಡಿದ್ದರು. ಈಗ ನಮ್ಮ ಸಮುದಾಯದವರು ಅಸಹಾಯಕರಾಗಿದ್ದಾರೆ. ಉಪಮುಖ್ಯಮಂತ್ರಿ ಸ್ಥಾನಕ್ಕೆ ಸಮುದಾಯದವರು ಸಮಾಧಾನಪಡುವ ಅಗತ್ಯವಿಲ್ಲ ಎಂದ ಅವರು, ಡಿಸಿಎಂ ಹುದ್ದೆ ಅಗತ್ಯ ನಮಗಿಲ್ಲ. ಸಾಧ್ಯವಾದರೆ ಸಿಎಂ ಆಗಬೇಕು ಇಲ್ಲವೇ ಬೇಡ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಶಾಮನೂರು ಶಿವಶಂಕರಪ್ಪ ಅವರ ಪುತ್ರ ಎಸ್‌ಎಸ್ ಮಲ್ಲಿಕಾರ್ಜುನ ಸಚಿವರಾಗಿ ಸರ್ಕಾರದ ಭಾಗವಾಗಿದ್ದರೂ, ಶಿವಶಂಕರಪ್ಪ ಅವರು ಈ ಹೇಳಿಕೆ ನೀಡಿರುವುದು ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ಉಂಟು ಮಾಡಿದೆ.
ರಾಜ್ಯದ ಜನಸಂಖ್ಯೆಯಲ್ಲಿ ವೀರಶೈವ ಲಿಂಗಾಯತರು ಶೇ 17ರಷ್ಟಿದ್ದಾರೆ ಎನ್ನಲಾಗಿದ್ದು, ರಾಜ್ಯದ ಸಮುದಾಯದ ಹಿರಿಯ ಮುಖಂಡರಾದ ಶಿವಶಂಕರಪ್ಪ ಅವರ ಈ ರೀತಿಯ ಹೇಳಿಕೆ ಪಕ್ಷದ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕ ರಾಜ್ಯ ಕಾಂಗ್ರೆಸ್‌ನ ಹಲವರನ್ನು ಕಾಡುತ್ತಿದೆ.
2023ರ ವಿಧಾನಸಭಾ ಚುನಾವಣೆಯ ಸಮಯದಲ್ಲಿ, ಬಿಜೆಪಿ ಪ್ರಬಲ ಸಮುದಾಯವನ್ನು ನಿರ್ಲಕ್ಷಿಸಿದೆ ಎಂದು ಆರೋಪಿಸಿದ್ದ ಕಾಂಗ್ರೆಸ್, ವೀರಶೈವ ಲಿಂಗಾಯತ ಸಮುದಾಯದ ಬೆಂಬಲ ಪಡೆಯುವಲ್ಲಿ ಯಶಸ್ವಿಯಾಗಿತ್ತು.
ವಶಂಕರಪ್ಪ ಅವರ ಹೇಳಿಕೆಯನ್ನು ಶನಿವಾರ ತಿರಸ್ಕರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ತಮ್ಮ ಸಂಪುಟದಲ್ಲಿ ಏಳು ಲಿಂಗಾಯತ ಸಚಿವರಿದ್ದಾರೆ. ಹೀಗಿರುವಾಗ ಸಮುದಾಯಕ್ಕೆ ಅನ್ಯಾಯವಾಗುವುದು ಹೇಗೆ? ಯಾವುದೇ ಅನ್ಯಾಯಕ್ಕೆ ಅವಕಾಶವಿಲ್ಲ. ಕಾಂಗ್ರೆಸ್ ಅಡಿಯಲ್ಲಿ ಯಾವುದೇ ಧರ್ಮ ಅಥವಾ ಜಾತಿ ಅನ್ಯಾಯವನ್ನು ಎದುರಿಸುವುದಿಲ್ಲ ಎಂದು ಹೇಳಿದರು.
ಶಿವಶಂಕರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, 'ಶಾಮನೂರು ಶಿವಶಂಕರಪ್ಪ ವೀರಶೈವ ಸಮಾಜದ ರಾಷ್ಟ್ರೀಯ ಅಧ್ಯಕ್ಷರು. ಅವರು ವ್ಯಕ್ತಪಡಿಸಿರುವ ಭಾವನೆಗಳಿಗೆ ನನ್ನ ಸಂಪೂರ್ಣ ಸಹಮತವಿದೆ. ಶಾಮನೂರು ಶಿವಶಂಕರಪ್ಪ ಅವರಿಗಷ್ಟೇ ಅಲ್ಲ, ಎಲ್ಲ ವೀರಶೈವ ಸಮುದಾಯದ ಮುಖಂಡರಲ್ಲಿ ಇದೇ ತಳಮಳ ಇದೆ. ಹೀಗಾಗಿ, ನಾನು ಅವರ ಹೇಳಿಕೆಗೆ ನನ್ನ ಸಂಪೂರ್ಣ ಬೆಂಬಲವಿದೆ. ನಾನು ಅವರ ಹೇಳಿಕೆಯನ್ನು ಸ್ವಾಗತಿಸುತ್ತೇನೆ. ಇಂತಹ ಸಂದರ್ಭದಲ್ಲಿ ಸಮುದಾಯ ಎಚ್ಚೆತ್ತುಕೊಳ್ಳಬೇಕು ಮತ್ತು ಒಂದಾಗಬೇಕು ಎಂದು ನಾನು ಕರೆ ನೀಡುತ್ತೇನೆ' ಎಂದು ಹೇಳಿದರು.
ಶಿವಶಂಕರಪ್ಪ ಹೇಳಿಕೆಗೆ ಯಡಿಯೂರಪ್ಪ ಬೆಂಬಲ ನೀಡಿರುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ನಮ್ಮದು ಜಾತ್ಯತೀತ ಸರ್ಕಾರ, ಯಾರಿಗೂ ಅನ್ಯಾಯವಾಗುವುದಿಲ್ಲ. ನಮ್ಮ ಸರ್ಕಾರದ ಯೋಜನೆಗಳು ಯಾವುದೇ ಸಮುದಾಯ ಅಥವಾ ಧರ್ಮಕ್ಕೆ ನಿರ್ದಿಷ್ಟವಾಗಿಲ್ಲ. ನಾವು ಜಾತಿ ಅಥವಾ ಸಮುದಾಯ ರಾಜಕಾರಣ ಮಾಡುವುದಿಲ್ಲ, ಎಲ್ಲರನ್ನೂ ಸಮಾನವಾಗಿ ಕಾಣುತ್ತೇವೆ ಎಂದರು.
Advertisement