ಸದ್ಯಕ್ಕಿಲ್ಲ ನಿಗಮ-ಮಂಡಳಿಗೆ ಅಧ್ಯಕ್ಷರ ನೇಮಕ; ಹುದ್ದೆಗಳಿಗಾಗಿ ಆಕಾಂಕ್ಷಿಗಳ ತವಕ; ಆಸಕ್ತಿ ತೋರದ ಕಾಂಗ್ರೆಸ್ ಹೈಕಮಾಂಡ್!

ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ, ತೆಲಂಗಾಣ ಮತ್ತು ಮಿಜೋರಾಂ ರಾಜ್ಯಗಳ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಸೋಮವಾರ ಪ್ರಕಟವಾಗಿದ್ದು, ರಾಜ್ಯದಲ್ಲಿ ಅನೇಕ ತಿಂಗಳಿಂದ ಬಾಕಿ ಉಳಿದಿರುವ ನಿಗಮ-ಮಂಡಳಿ ಅಧ್ಯಕ್ಷರ ನೇಮಕ ಮತ್ತಷ್ಟು ವಿಳಂಬವಾಗಲಿದೆ.
ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ
ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ

ಬೆಂಗಳೂರು: ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ, ತೆಲಂಗಾಣ ಮತ್ತು ಮಿಜೋರಾಂ ರಾಜ್ಯಗಳ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಸೋಮವಾರ ಪ್ರಕಟವಾಗಿದ್ದು, ರಾಜ್ಯದಲ್ಲಿ ಅನೇಕ ತಿಂಗಳಿಂದ ಬಾಕಿ ಉಳಿದಿರುವ ನಿಗಮ-ಮಂಡಳಿ ಅಧ್ಯಕ್ಷರ ನೇಮಕ ಮತ್ತಷ್ಟು ವಿಳಂಬವಾಗಲಿದೆ.

ನಿಗಮ-ಮಂಡಳಿ ಅಧ್ಯಕ್ಷರುಗಳ ನೇಮಕಕ್ಕೆ ಹಲವು ತೊಂದರೆಗಳು ಇರುವ ಕಾರಣ ನೇಮಕ ಮಾಡಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ, ಹಾಗಾಗಿ ಕಾಂಗ್ರೆಸ್ ಕೇಂದ್ರ ನಾಯಕರು ಸದ್ಯ ಗಮನ ಹರಿಸುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.

ಅಧ್ಯಕ್ಷರ ನೇಮಕಕ್ಕೆ ಎರಡರಿಂದ ಮೂರು ವಾರಗಳು ಬೇಕಾಗಬಹುದು ಎಂದು ಕಾಂಗ್ರೆಸ್‌ನ ಕೆಲವರು ಹೇಳಿದರೆ, ಇನ್ನು ಕೆಲವರು 5 ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗುವವರೆಗೆ ಅಂದರೆ ಡಿಸೆಂಬರ್‌ವರೆಗೆ ವಿಳಂಬವಾಗಬಹುದು ಎಂದು ಹೇಳಿದ್ದಾರೆ.

ಕಾಂಗ್ರೆಸ್ ನಾಯಕರು ಸೆಪ್ಟೆಂಬರ್‌ನೊಳಗೆ ನೇಮಕಾತಿಗಳನ್ನು ಪೂರ್ಣಗೊಳಿಸಬೇಕು. ಇದರಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಕೆಲಸ ಮಾಡಲು ನೇಮಕಗೊಂಡ ಸದಸ್ಯರಿಗೆ ಇದು ಪ್ರೋತ್ಸಾಹ ನೀಡಿದಂತಾಗುತ್ತಿತ್ತು ಎಂದು ಮತ್ತೊಂದು ಮೂಲ ತಿಳಿಸಿದೆ.

ಮೇ ತಿಂಗಳಲ್ಲಿ ಈ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅನೇಕ ಪರಾಜಿತ ಅಭ್ಯರ್ಥಿಗಳು ಮತ್ತು ಪಕ್ಷದ ಕಾರ್ಯಕರ್ತರು ಮಂಡಳಿ ಮತ್ತು ನಿಗಮಗಳಲ್ಲಿ ಹುದ್ದೆಗಳಿಗಾಗಿ ಲಾಬಿ ನಡೆಸುತ್ತಿದ್ದಾರೆ. ಆದರೆ ನೇಮಕ ಮಾಡುವಲ್ಲಿ ಸರ್ಕಾರ ವಿಳಂಬ ಮಾಡುತ್ತಿದೆ. ನಿಗಮ-ಮಂಡಳಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ, ಆದಷ್ಟು ಬೇಗ ಮಾಡುತ್ತೇವೆ ಎಂದು  ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಪರಿಷತ್ ಮುಖ್ಯ ಸಚೇತಕ ಸಲೀಂ ಅಹಮದ್ ಹೇಳಿದ್ದಾರೆ.

ಜಿಲ್ಲೆ ಮತ್ತು ತಾಲೂಕುಗಳಲ್ಲಿನ ನೇಮಕಾತಿಗಳನ್ನು ಪರಿಗಣಿಸಿ ಒಟ್ಟು 7,000 ಹುದ್ದೆಗಳನ್ನು ಭರ್ತಿ ಮಾಡಬೇಕಿದೆ. ಸುಮಾರು 600 ಅಧ್ಯಕ್ಷ ಮತ್ತು ನಿರ್ದೇಶಕ ಹುದ್ದೆಗಳಿಗೆ ಹೆಚ್ಚು ಬೇಡಿಕೆಯಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇಬ್ಬರೂ ತಮ್ಮದೇ ಬೆಂಬಲಿಗರನ್ನು ನೇಮಿಸಬೇಕೆಂದು ಹಂಬಲ ಹೊಂದಿರುವುದರಿಂದ, ಪ್ರಕ್ರಿಯೆ ಮತ್ತಷ್ಟು ಕ್ಲಿಷ್ಟವಾಗಿದೆ.

ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಕರ್ನಾಟಕದ ಉಸ್ತುವಾರಿ, ರಣದೀಪ್ ಸಿಂಗ್ ಸುರ್ಜೆವಾಲಾ ಅವರಿಗೆ ರಾಜಸ್ಥಾನ ಚುನಾವಣೆಯ ಜವಾಬ್ದಾರಿಯನ್ನು ನೀಡಲಾಗಿದೆ, ಅವರು ವಿಧಾನಸಭೆ ಚುನಾವಣೆಗೆ ಮೊದಲು ಪಟ್ಟಿಯನ್ನು ಪರಿಶೀಲಿಸಲು ಸಾಧ್ಯವಾಗುವುದಿಲ್ಲ. ವಿಧಾನಸಭೆಗಳ  ಫಲಿತಾಂಶ ಡಿಸೆಂಬರ್ 3 ರಂದು ಪ್ರಕಟವಾಗಲಿದೆ.

ಮಂಡಳಿಗಳು ಮತ್ತು ನಿಗಮಗಳ ಮುಖ್ಯಸ್ಥರ ನೇಮಕಾತಿಗಳನ್ನು ಶೀಘ್ರದಲ್ಲೇ ಮಾಡಲಾಗುವುದು. ಶಾಸಕರು ಮತ್ತು ಪಕ್ಷದ ಕಾರ್ಯಕರ್ತರಿಗೆ ಅವಕಾಶ ನೀಡಲಾಗುವುದು ಎಂದು ಶಿವಕುಮಾರ್ ಇತ್ತೀಚೆಗೆ ಹೇಳಿಕೆ ನೀಡಿದ್ದರು.

ಪರಿಷತ್ ಸದಸ್ಯರಿಗೆ ಸಚಿವ ಸ್ಥಾನ ಸಿಗದಿರುವ ಬಗ್ಗೆ ಹಲವು ಎಂಎಲ್ ಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಉಭಯ ಸದನಗಳಲ್ಲಿನ ಶಾಸಕರ ಸಂಖ್ಯೆಯನ್ನು ಪರಿಗಣಿಸಿ ಅನುಪಾತದ ಆಧಾರದ ಮೇಲೆ ಸಚಿವ ಸ್ಥಾನಗಳನ್ನು ನೀಡಬೇಕಾಗಿತ್ತು ಎಂದು ಅವರು ಹೇಳಿದ್ದಾರೆ. ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಅವರೆಲ್ಲರು ಈಗ ಮಂಡಳಿಗಳು ಮತ್ತು ನಿಗಮಗಳಲ್ಲಿ ಅವಕಾಶ ಪಡೆಯಲು ತುದಿಗಾಲಲ್ಲಿ ನಿಂತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com