ಬೆಂಗಳೂರು: ದಸರಾ ಹಬ್ಬದ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ನಾಯಕನ ನೇಮಕವಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಹಾಲಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಅವಧಿ 2022ರ ಆಗಸ್ಟ್ ತಿಂಗಳಲ್ಲಿ ಮುಕ್ತಾಯಗೊಂಡಿದ್ದು, ನಂತರ ಅಧಿಕಾರಾವಧಿಯನ್ನು ವಿಸ್ತರಣೆ ಮಾಡಲಾಗಿತ್ತು. ವಿಧಾನಸಭಾ ಚುನಾವಣೆ ಫಲಿತಾಂಶ ಬಳಿಕವೂ ರಾಜ್ಯಾಧ್ಯಕ್ಷ ಹಾಗೂ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲಾಗಿರಲಿಲ್ಲ.
ಚುನಾವಣೆ ಫಲಿತಾಂಶ ಪ್ರಕಟಗೊಂಡು ಹೊಸ ಸರ್ಕಾರ ಅಧಿಕಾರಕ್ಕೆ ಬಂದು 3 ತಿಂಗಳು ಕಳೆದರೂ ಬಿಜೆಪಿ ತನ್ನ ಪಕ್ಷದ ರಾಜ್ಯಾಧ್ಯಕ್ಷ ಹಾಗೂ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿಲ್ಲ. ಈಗ ಆಗುತ್ತದೆ, ನಾಳೆ ಆಗುತ್ತದೆ ಎಂದು ರಾಜ್ಯದ ನಾಯಕರು ನಿರೀಕ್ಷೆಯಲ್ಲಿಯೇ ಇದ್ದಾರೆ, ಆದರೆ, ಹೈಕಮಾಂಡ್ ಮಾತ್ರ ಈ ನಿರೀಕ್ಷೆಗಳನ್ನು ಹುಸಿಗೊಳಿಸುತ್ತಲೇ ಬಂದಿದೆ.
ನಾಯಕರ ಆಯ್ಕೆ ಕುರಿತು ಹೈಕಮಾಂಡ್ ಇನ್ನೂ ಯಾವುದೇ ಮಾಹಿತಿ ನೀಡುತ್ತಿಲ್ಲ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.
ಮೇ ತಿಂಗಳಿನಲ್ಲಿ ಚುನಾವಣಾ ಫಲಿತಾಂಶ ಪ್ರಕಟಗೊಂಡ ಬಳಿಕ ಜೂನ್ ನಲ್ಲಿ ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ ಮತ್ತು ಹಿರಿಯ ಬಿಜೆಪಿ ನಾಯಕ ವಿನೋದ್ ತಾವ್ಡೆ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರು ಬೆಂಗಳೂರಿನಲ್ಲಿಯೇ ಇದ್ದರು. ಬಿಜೆಪಿ ರಾಜ್ಯಧ್ಯಕ್ಷ ಸ್ಥಾನ ಹಾಗೂ ವಿರೋಧ ಪಕ್ಷದ ನಾಯಕನ ಆಯ್ಕೆ ಕುರಿತು ರಾಜ್ಯದ ನಾಯಕರಿಂದ ಪ್ರತಿಕ್ರಿಯೆಗಳನ್ನೂ ಕೂಡ ಪಡೆದುಕೊಂಡಿದ್ದರು. ಆದರೆ, ಈವರೆಗೂ ಆಯ್ಕೆ ಮಾಡಿಲ್ಲ ಎಂದು ತಿಳಿಸಿದ್ದಾರೆ.
ಕಟೀಲ್ ಅವರು 4 ವರ್ಷ ಮತ್ತು ಎರಡು ತಿಂಗಳ ಕಾಲ ಪಕ್ಷದ ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಸಾಮಾನ್ಯವಾಗಿ ರಾಜ್ಯಾಧ್ಯಕ್ಷರ ಅವಧಿಯು ಒಂದು ದಿನದಿಂದ 2 ವರ್ಷಗಳವರೆಗೆ ಇರುತ್ತದೆ. ಕಟೀಲ್ ಅವರು ಹೆಚ್ಚಿನ ಅವಧಿಯಲ್ಲಿ ರಾಜ್ಯಾಧ್ಯಕ್ಷ ಹುದ್ದೆಯಲ್ಲಿ ಮುಂದುವರೆದ ನಾಯಕರಾಗಿದ್ದಾರೆ.
ಕಳೆದ ಎಂಟು ತಿಂಗಳಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು, ಬಿಹಾರ, ಹಿಮಾಚಲ ಪ್ರದೇಶ, ಒಡಿಶಾ, ರಾಜಸ್ಥಾನ, ಸಿಕ್ಕಿಂ, ಜಾರ್ಖಂಡ್, ಪಂಜಾಬ್, ಆಂಧ್ರಪ್ರದೇಶ, ತೆಲಂಗಾಣ, ಮೇಘಾಲಯ ಮತ್ತು ನಾಗಾಲ್ಯಾಂಡ್ ಮತ್ತು ಚಂಡೀಗಢ ಮತ್ತು ಪುದುಚೇರಿ ಕೇಂದ್ರಾಡಳಿತ ಪ್ರದೇಶಗಳಿಗೆ ಬಿಜೆಪಿ ಅಧ್ಯಕ್ಷರನ್ನು ನೇಮಿಸಿದರು. "ಆದರೆ ಕರ್ನಾಟಕದಲ್ಲಿ ಆಗಸ್ಟ್ 2022 ರಿಂದಲೂ ರಾಜ್ಯಾಧ್ಯಕ್ಷ ಆಯ್ಕೆ ಬಾಕಿ ಇದ್ದರೂ ಪಕ್ಷದ ವರಿಷ್ಠರು ನೇಮಕ ಮಾಡಿಲ್ಲ" ಎಂದು ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ.
ಡಿಸೆಂಬರ್ ತಿಂಗಳಿನಲ್ಲಿ ವಿಧಾನಮಂಡಲ ಅಧಿವೇಶ ನಡೆಯಲಿದ್ದು, ಆದರೂ, ಬಿಜೆಪಿ ಮಾತ್ರ ರಾಜ್ಯಧ್ಯಕ್ಷನ ಆಯ್ಕೆ, ವಿಪಕ್ಷ ನಾಯಕನ ಆಯ್ಕೆ ವಿಚಾರದಲ್ಲಿ ಉತ್ಸುಕತೆ ತೋರುತ್ತಿಲ್ಲ. ಇದೀಗ ಅಕ್ಟೋಬರ್ 24ರೊಳಗಾಗಿ ಆಯ್ಕೆ ಪ್ರಕ್ರಿಯೆಯನ್ನು ಅಂತಿಮಗೊಳಿಸುವುದಾಗಿ ಭರವಸೆ ನೀಡಿದ್ದಾರೆಂದು ಮೂಲಗಳು ತಿಳಿಸಿವೆ.
Advertisement