ಶಿವಸೇನೆಯಂತೆ ಇಬ್ಬಾಗವಾಗುತ್ತಾ ಜೆಡಿಎಸ್? NDA ಸೇರುವ ದೇವೇಗೌಡರ ನಿರ್ಧಾರವನ್ನು ಧಿಕ್ಕರಿಸಿದ ರಾಜ್ಯಾಧ್ಯಕ್ಷ ಇಬ್ರಾಹಿಂ

ಲೋಕಸಭೆ ಚುನಾವಣೆ ಹಿನ್ನಲೆ ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿ ಮಾಡಿಕೊಳ್ಳುವ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ನಿರ್ಧಾರವನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಧಿಕ್ಕರಿಸಿದ್ದು, ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟಕ್ಕೆ ಜೆಡಿಎಸ್ ಸೇರುವುದಿಲ್ಲ ಎಂದು ಹೇಳಿದ್ದಾರೆ.
ಸಿ ಎಂ ಇಬ್ರಾಹಿಂ
ಸಿ ಎಂ ಇಬ್ರಾಹಿಂ

ಬೆಂಗಳೂರು: ಲೋಕಸಭೆ ಚುನಾವಣೆ ಹಿನ್ನಲೆ ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿ ಮಾಡಿಕೊಳ್ಳುವ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ನಿರ್ಧಾರವನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಧಿಕ್ಕರಿಸಿದ್ದು, ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟಕ್ಕೆ ಜೆಡಿಎಸ್ ಸೇರುವುದಿಲ್ಲ ಎಂದು ಹೇಳಿದ್ದಾರೆ. 

ಜೆಡಿಎಸ್ ನಲ್ಲಿನ ಸಂಭವನೀಯ ಒಡಕು ಬಗ್ಗೆ ಸುಳಿವು ನೀಡಿದ ಮಾಜಿ ಕೇಂದ್ರ ಸಚಿವ ಇಬ್ರಾಹಿಂ, ಜಾತ್ಯಾತೀತತೆ ಪಾಲಿಸುವ ನಮ್ಮ ಬಣವೇ ಒರಿಜಿನಲ್ ಜೆಡಿಎಸ್. ರಾಜ್ಯಾಧ್ಯಕ್ಷರಾಗಿರುವ ತಾವು ಕರ್ನಾಟಕದಲ್ಲಿ ಪಕ್ಷವನ್ನು ಸಜ್ಜುಗೊಳಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದು ಎಂದರು. ಇನ್ನು ಅಕ್ಕಪಕ್ಕದ ರಾಜ್ಯಗಳಲ್ಲಿ ಅನೇಕರು ಪಕ್ಷ ತೊರೆದಿರುವ ಕಾರಣ ಬಿಜೆಪಿ ಜತೆಗಿನ ಮೈತ್ರಿಗೆ ಒಪ್ಪಿಗೆ ನೀಡಬೇಡಿ ಎಂದು ಮಾಜಿ ಪ್ರಧಾನಿ ಗೌಡರಿಗೆ ಮನವಿ ಮಾಡಿದರು.

ಪಕ್ಷದ ಕೆಲ ಮುಖಂಡರ ಜತೆಗಿನ ಚಿಂತನ ಮಂಥನ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎನ್‌ಡಿಎ ಜೊತೆ ಹೋಗದಿರುವುದೇ ನಮ್ಮ ಮೊದಲ ನಿರ್ಣಯ. ಈ ಮೈತ್ರಿಗೆ ಒಪ್ಪಿಗೆ ನೀಡಬಾರದು ಎಂದು ದೇವೇಗೌಡರಿಗೆ ಮನವಿ ಮಾಡುವುದು ನಮ್ಮ ಎರಡನೇ ನಿರ್ಣಯವಾಗಿದೆ ಎಂದರು. ಇನ್ನು ಬಿಜೆಪಿ-ಜೆಡಿಎಸ್ ಒಪ್ಪಂದದ ನಂತರ ಕೇರಳ, ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿ ಜೆಡಿಎಸ್ ನ ನಾಯಕರು ಪಕ್ಷವನ್ನು ತೊರೆದಿರುವುದನ್ನು ಅವರು ಸೂಚಿಸಿದರು. ನಾವು ಇನ್ನೂ ನಿಮ್ಮ ಮೇಲೆ ಪ್ರೀತಿಯನ್ನು ಹೊಂದಿದ್ದೇವೆ. ನೀವು ನಮ್ಮ ತಂದೆಯ ಸಮಾನರು.ನಾವು ಬಿಜೆಪಿಯೊಂದಿಗೆ ಯಾವುದೇ ಸಂಬಂಧ ಹೊಂದಬಾರದು ಎಂದು ನಾವು ದೇವೇಗೌಡರಿಗೆ ಹೇಳುತ್ತೇವೆ ಎಂದು ಇಬ್ರಾಹಿಂ ಹೇಳಿದರು.

ತಮ್ಮ ಬಣವನ್ನು ಮೂಲ ಜೆಡಿಎಸ್ ಎಂದು ಕರೆದಿರುವ ಇಬ್ರಾಹಿಂ, ಕೇಂದ್ರದಲ್ಲಿ ಎಚ್‌ಡಿ ದೇವೇಗೌಡ ನೇತೃತ್ವದ ಸರ್ಕಾರದಲ್ಲಿ ನಾಗರಿಕ ವಿಮಾನಯಾನ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಇನ್ನು ದೇವೇಗೌಡರು ಮತ್ತು ಎಚ್‌ಡಿ ಕುಮಾರಸ್ವಾಮಿ ಅವರು ತಮ್ಮ ನಿರ್ಧಾರವನ್ನು ಒಪ್ಪದಿದ್ದರೆ ಮುಂದಿನ ಕ್ರಮದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಇಬ್ರಾಹಿಂ, ನಾನು ರಾಜ್ಯಾಧ್ಯಕ್ಷ. ರಾಜ್ಯದಲ್ಲಿ ನನ್ನ ಪಕ್ಷದ ಬಗ್ಗೆ ನಾನು ನಿರ್ಧರಿಸಬೇಕು. ಅದನ್ನು ನಾನು ತೆಗೆದುಕೊಳ್ಳುತ್ತೇನೆ. ಈಗಾಗಲೇ ನಾವು ಬಿಜೆಪಿ ಜೊತೆ ಹೋಗುವುದಿಲ್ಲ ಎಂದು ನಿರ್ಧರಿಸಿದ್ದೇವೆ. ಇದಕ್ಕಿಂತ ಹೆಚ್ಚೇನಿದೆ? ದೇವೇಗೌಡರು ಮತ್ತು ಕುಮಾರಸ್ವಾಮಿ ಅವರು ಬಿಜೆಪಿಯೊಂದಿಗೆ ಹೋಗಲು ನಿರ್ಧರಿಸಿದ್ದರೆ ಅವರು ಹೋಗಲಿ ಎಂದು ಇಬ್ರಾಹಿಂ ಹೇಳಿದರು.

ಜೆಡಿಎಸ್ ಶಾಸಕರು ಯಾವ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಿ. ಸಮಯ ಬಂದಾಗ ನಾವು ನಿಮಗೆ ತಿಳಿಸುತ್ತೇವೆ. ಅನೇಕ ಶಾಸಕರು ತಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ. ಆದರೆ ಅವರ ಹೆಸರನ್ನು ಈಗಲೇ ಹೇಳಲು ಸಾಧ್ಯವಿಲ್ಲ. ನಾನು ಶಾಸಕರ ಹೆಸರುಗಳನ್ನು ಬಹಿರಂಗಪಡಿಸಿದರೆ ಅವರ ಮೇಲೆ ಒತ್ತಡ ಹೇರುವ ಸಾಧ್ಯತೆಗಳಿರುತ್ತದೆ. ಶಾಸಕರ ಜತೆ ಒಂದಿಲ್ಲೊಂದು ಸಭೆ ನಡೆಸುತ್ತೇನೆ ಎಂದು ಇಬ್ರಾಹಿಂ ಹೇಳಿದರು.

ಇಬ್ರಾಹಿಂ ನಿರ್ಧಾರ ಕುರಿತಂ ಪ್ರತಿಕ್ರಿಯಿಸಿದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು, ರಾಜ್ಯಾಧ್ಯಕ್ಷರು 'ಅತ್ಯಂತ ಸ್ವತಂತ್ರರು' ಮತ್ತು 'ಅವರ ನಿರ್ಧಾರಕ್ಕಾಗಿ ನಾವು ಕಾಯುತ್ತೇವೆ ಎಂದರು. ಪಕ್ಷದ ಕಾರ್ಯಕರ್ತರು ಮತ್ತು ಎಲ್ಲಾ ನಾಯಕರು ತೆಗೆದುಕೊಂಡ ಒಂದು ನಿರ್ಧಾರವಿದೆ. ಆ ಹಿನ್ನೆಲೆಯಲ್ಲಿ ಇಬ್ರಾಹಿಂ ಕರೆದಿದ್ದ ಸಭೆಯಲ್ಲಿ ತಮ್ಮ ಬೆಂಬಲಿಗರೊಂದಿಗೆ ಸಮಾಲೋಚನೆ ನಡೆಸಿದರು. ಇಬ್ರಾಹಿಂ ನಿರ್ಧಾರ ತೆಗೆದುಕೊಳ್ಳಲು ಸಂಪೂರ್ಣ ಸ್ವತಂತ್ರರು. ಇಬ್ರಾಹಿಂ ಅವರು ಕೋರ್ ಕಮಿಟಿ ರಚಿಸಲಿದ್ದು, ದೇವೇಗೌಡರನ್ನು ಭೇಟಿಯಾಗಿ ಇಂದಿನ ಸಭೆಯಲ್ಲಿ ಕೈಗೊಂಡ ನಿರ್ಧಾರವನ್ನು ತಿಳಿಸಲಾಗುವುದು ಎಂದು ಹೇಳಿದರು.

ಕಳೆದ ಸೆಪ್ಟೆಂಬರ್ 22ರಂದು ಕುಮಾರಸ್ವಾಮಿ ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿಯಾದ ನಂತರ ಎನ್‌ಡಿಎ ಭಾಗವಾಗಲು ಸಮ್ಮತಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com