ಅಮಿತ್ ಶಾ ಸೂಚನೆ ಮೇರೆಗೆ ಸಿಎಂ, ಡಿಸಿಎಂ ವಿರುದ್ಧ ಹೆಚ್‌ಡಿಕೆ ಆಧಾರ ರಹಿತ ಆರೋಪ: ಕಾಂಗ್ರೆಸ್

ಬಿಜೆಪಿ ನೀಡಿರುವ ಸುಪಾರಿ ಸ್ವೀಕರಿಸಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ವಿರುದ್ಧ ಆಧಾರರಹಿತ ಆರೋಪ ಮಾಡುತ್ತಿದ್ದಾರೆಂದು ಕಾಂಗ್ರೆಸ್ ಗುರುವಾರ ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮೈಸೂರು: ಬಿಜೆಪಿ ನೀಡಿರುವ ಸುಪಾರಿ ಸ್ವೀಕರಿಸಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ವಿರುದ್ಧ ಆಧಾರರಹಿತ ಆರೋಪ ಮಾಡುತ್ತಿದ್ದಾರೆಂದು ಕಾಂಗ್ರೆಸ್ ಗುರುವಾರ ಹೇಳಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಅವರು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಆದೇಶದಂತೆ ಕುಮಾರಸ್ವಾಮಿ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮತ್ತು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆಂದು ಹೇಳಿದ್ದಾರೆ.

ಕುಮಾರಸ್ವಾಮಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದು, ಸುಳ್ಳು ಆರೋಪ ಹೊರಿಸಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುವ ಮುನ್ನ ಸಿ.ಎಂ.ಇಬ್ರಾಹಿಂ ಕೇಳಿದ ಪ್ರಶ್ನೆಗಳಿಗೆ ಕುಮಾರಸ್ವಾಮಿಯವರು ಮೊದಲು ಉತ್ತರಿಸಬೇಕು ಎಂದು ತಿಳಿಸಿದರು.

ಜೆಡಿಎಸ್ ಮತ್ತು ಬಿಜೆಪಿ ನಾಯಕರು ಸರ್ಕಾರದ ಗ್ಯಾರಂಟಿ ಯೋಜನೆಗಳ ಜನಪ್ರಿಯತೆಯಿಂದ ಹತಾಶರಾಗಿದ್ದಾರೆ. ಅದನ್ನು ಜೀರ್ಣಿಸಿಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ. ಅದರಲ್ಲೂ ಒಕ್ಕಲಿಗ ಸಮುದಾಯದಲ್ಲಿ ಶಿವಕುಮಾರ್ ಅವರ ಜನಪ್ರಿಯತೆ ಹೆಚ್ಚುತ್ತಿರುವುದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ವ್ಯಂಗ್ಯವಾಡಿದರು.

ಇದೇ ವೇಳೆ ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡುವ ಕುರಿತು ಸೃಷ್ಟಿಯಾಗಿರುವ ವಿವಾದ ಕುರಿತು ಮಾತನಾಡಿದ ಅವರು, ಬ್ರಾಂಡ್ ಬೆಂಗಳೂರು ನಿರ್ಮಿಸಲು, ಹೂಡಿಕೆಗಳನ್ನು ಆಕರ್ಷಿಸಲು, ಉದ್ಯೋಗ ಸೃಷ್ಟಿಸಲು, ಪ್ರವಾಸೋದ್ಯಮವನ್ನು ಹೆಚ್ಚಿಸಲು ಮತ್ತು ತಲಾ ಆದಾಯವನ್ನು ಹೆಚ್ಚಿಸಲು ಇದು ಸಹಾಯ ಮಾಡುತ್ತದೆ. ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ಕರೆದರೆ ಕುಮಾರಸ್ವಾಮಿಗೆ ಏನು ನಷ್ಟವಾಗುತ್ತದೆ? ಎಂದು ಪ್ರಶ್ನಿಸಿದರು.

ರಾಮನಗರದ ಕೇತಕನಹಳ್ಳಿಯಲ್ಲಿ ನೀವು ಜಾಗ ಖರೀದಿ ಮಾಡಿಕೊಂಡಿದ್ದು ಹೇಗೆ.? ದೇವಗಿರಿ ನಿಮ್ಮ ತೆಕ್ಕೆಗೆ ಹೇಗೆ ಬಂತು..? ನಿಮ್ಮ ವಂಶವೃಕ್ಷವನ್ನ ತಿಳಿಸುವೆ ಕೇಳಿ. ನಿಮ್ಮ 43 ಜನ ಸಂಬಂಧಿಕರ ಹೆಸರಿನಲ್ಲಿ ನೈಸ್ ವ್ಯಾಪ್ತಿಯಲ್ಲಿ  ಬೇನಾಮಿ ಆಸ್ತಿ ಮಾಡಿದ್ದೀರಿ ಇದಕ್ಕೆ ಉತ್ತರ ಕೊಡಿ ಕುಮಾರಸ್ವಾಮಿ ಅವರೇ..? 2011 ಜೂನ್ 27 ಯಡಿಯೂರಪ್ಪ ಅವರನ್ನು ಆಣೆ ಪ್ರಮಾಣಕ್ಕೆ ಧರ್ಮಸ್ಥಳಕ್ಕೆ ಯಾಕೆ ಕರೆದಿದ್ದು..? ನಾವು ನಮ್ಮ ಮುಖ್ಯಮಂತ್ರಿ ಮತ್ತು ಡಿಕೆಶಿ ಅವರನ್ನು ಕರೆದುಕೊಂಡು ಬರುತ್ತೀವಿ. ನೀವು ಬಂದು ನಿಮ್ಮ ಕಾಲದಲ್ಲಿ ಏನು ಮಾಡಿದ್ದೀರಿ ಎಂದು ಪ್ರಮಾಣ ಮಾಡಿ ಎಂದು ಸವಾಲು ಎಸೆದರು.

ಪೆಂಡ್ರೈವ್ ಕಥೆ ಹೇಳಿದ್ದೀರಿ ಅದೆಲ್ಲೋಯ್ತು ನಿಮ್ಮ ಪೆನ್ ಡ್ರೈವ್ ಕಥೆ.? ನನ್ನ ಬಳಿಯೂ ಕೂಡ  ಪೆಂಡ್ರೈವ್ ಇದೆ. ನೀವು ಬಿಟ್ಟ ಮರುದಿನವೇ ನಿಮ್ಮ ಪೆಂಡ್ರೈವ್ ನಾವು ಬಿಡುತ್ತೇನೆ. ಈಗ ನೀವು ಅದೆನೋ ಸರಕು ಇದೆ ಅಂತೀರಾ ಅದನ್ನಾದರೂ ಬಿಡ್ರೀ ಎಂದು ಟಾಂಗ್ ಕೊಟ್ಟರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com