'ಬೆಡ್ ಮೇಲೆ ನಾವು ಮಲಗಲು ಹೋಗಿದ್ವಾ? 100 ರಮೇಶ್‌ ಜಾರಕಿಹೊಳಿ ಬಂದ್ರೂ ಡಿಕೆಶಿ ಟಚ್‌ ಮಾಡಲಾಗದು'

ನೂರು ಜನ ರಮೇಶ್‌ ಜಾರಕಿಹೊಳಿ ಬಂದರೂ ಡಿ.ಕೆ.ಶಿವಕುಮಾರ್‌ ಅವರನ್ನು ಟಚ್ ಮಾಡುವುದಕ್ಕೆ ಆಗೋದಿಲ್ಲ. ಒಕ್ಕಲಿಗ ನಾಯಕತ್ವವನ್ನು ಸಾಯಿಸಲು ಒಂದು ತಂಡ ವ್ಯವಸ್ಥಿತವಾಗಿ ಸಂಚು ನಡೆಸಿದೆ.
ರಮೇಶ್ ಜಾರಕಿಹೊಳಿ
ರಮೇಶ್ ಜಾರಕಿಹೊಳಿ

ಮಂಡ್ಯ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮತ್ತು ರಮೇಶ್‌ ಜಾರಕಿಹೊಳಿ ನಡುವಿನ ಸಂಘರ್ಷ ಮತ್ತಷ್ಟು ಹೆಚ್ಚಾಗುವ ಲಕ್ಷಣಗಳು ಕಾಣಿಸುತ್ತಿವೆ. ಡಿ.ಕೆ. ಶಿವಕುಮಾರ್‌ ಅವರನ್ನು ಸಿ.ಡಿ ಮಾಸ್ಟರ್‌ ಎಂದು ಕರೆದಿರುವ ಜಾರಕಿಹೊಳಿ ವಿರುದ್ಧ ಡಿಕೆಶಿ ಆಪ್ತರು ತಿರುಗಿಬಿದ್ದಿದ್ದಾರೆ.

ನೂರು ಜನ ರಮೇಶ್‌ ಜಾರಕಿಹೊಳಿ ಬಂದರೂ ಡಿ.ಕೆ.ಶಿವಕುಮಾರ್‌ ಅವರನ್ನು ಟಚ್ ಮಾಡುವುದಕ್ಕೆ ಆಗೋದಿಲ್ಲ. ಒಕ್ಕಲಿಗ ನಾಯಕತ್ವವನ್ನು ಸಾಯಿಸಲು ಒಂದು ತಂಡ ವ್ಯವಸ್ಥಿತವಾಗಿ ಸಂಚು ನಡೆಸಿದೆ ಎಂದು ಮಂಡ್ಯ ಕ್ಷೇತ್ರದ ಶಾಸಕ ಗಣಿಗ ರವಿ ಕಿಡಿಕಾರಿದ್ದಾರೆ.

ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಮತ್ತವರ ತಂಡ ಏಳು ಜನ್ಮ ಎತ್ತಿ ಬಂದರೂ ಡಿ.ಕೆ.ಶಿವಕುಮಾರ್‌ ಅವರನ್ನು ಜೈಲಿಗೆ ಕಳುಹಿಸಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರದ ಏಜೆನ್ಸಿಗಳು ರಮೇಶ್ ಜಾರಕಿಹೊಳಿ ಕೈಯಲ್ಲಿದ್ಯಾ? ಅಧಿಕಾರ ಕಳೆದುಕೊಂಡಿರುವ ರಮೇಶ್ ಜಾರಕಿಹೊಳಿ ಹೀಗೆ ಅಸಂಬದ್ಧವಾಗಿ ಆಡುತ್ತಿದ್ದಾರೆ.

ಚುನಾವಣೆ ಮುಂಚೆ ಡಿಕೆಶಿ ಕಾಲು ಹಿಡಿಯಲು ಬಂದಿದ್ದ ರಮೇಶ್ ಜಾರಕಿಹೊಳಿ ಈಗ ಅವರಿಗೇ ತೇಜೋವಧೆ ಮಾಡಲು ಯತ್ನಿಸುತ್ತಿದ್ದಾರೆ ಎಂದರು. ಆಪರೇಷನ್ ಕಮಲ ಸುಳ್ಳು ಎಂಬ ರಮೇಶ್‌ ಹೇಳಿಕೆಗೆ ತಿರುಗೇಟು ನೀಡಿದ ಗಣಿಗ, ಆಪರೇಷನ್ ಕಮಲಕ್ಕೆ ಕೈ ಹಾಕಿಲ್ಲ ಎನ್ನುವುದಾದರೆ ಕೈ ಶಾಸಕರಿಗೆ ಆಫರ್ ಮಾಡಿದ್ದು ಯಾಕೆ? ಎಂದು ಪ್ರಶ್ನಿಸಿದ್ದಾರೆ.

ಬೆಳಗಾವಿ ಏರ್‌ರ್ಪೋರ್ಟ್‌ನಲ್ಲಿ ಆ ಭಾಗದ ಶಾಸಕರಿಗೆ ಏನು ಆಫರ್ ಮಾಡಿದ್ರಿ? ಅದರ ದಾಖಲೆಗಳು ನನ್ನ ಬಳಿ ಇವೆ. ಸಮಯ ಬಂದಾಗ ಎಲ್ಲವನ್ನೂ ಬಹಿರಂಗ ಮಾಡ್ತೀವಿ ಎಂದು ಎಚ್ಚರಿಸಿದ ಅವರು, ನೀವು ಆಫರ್‌ ನೀಡಿದ ಅಷ್ಟೂ ಶಾಸಕರು ಮಾಧ್ಯಮದ ಮುಂದೆ ಬರ್ತಾರೆ‌, ಕಾಯಿರಿ ಎಂದು ಹೇಳಿದರು.

ಡಿ.ಕೆ. ಶಿವಕುಮಾರ್‌ ಅವರನ್ನು ಸಿ.ಡಿ. ಮಾಸ್ಟರ್‌ ಅಂತ ಹೇಳುವ ರಮೇಶ್‌ ಜಾರಕಿಹೊಳಿ ಬೆಡ್‌ ಮೇಲೆ ಮಲಗಿದ್ದಕ್ಕೇ ಅಲ್ವಾ ಸಿಡಿ ಆಗಿರುವುದು ಎಂದು ಪ್ರಶ್ನೆ ಮಾಡಿದ್ದಾರೆ ಗಣಿಗ ರವಿ. ʻʻಮಾಡಿರೋನು ಯಾರೋ ತೋರಿಸಿರೋನು ಯಾರೋ ಅದಕ್ಕೂ ನನಗೂ ಏನ್ ಸಂಬಂಧʼʼ ಎಂದು ಕೇಳಿದ್ದಾರೆ.

ಡಿಕೆಶಿ ಅವರಿಗೆ ಬ್ಲಾಕ್ ಮೇಲ್ ಮಾಡೋ ದರ್ದು ಏನೂ ಇಲ್ಲ. ಅವರು ಹೋಗಿ ಎಲ್ಲಾದ್ರು ಬೆಡ್ ಮೇಲೆ ಮಲಗಿದ್ರಾ? ಹೋಗಿದ್ದವರದ್ದನ್ನ ತೋರಿಸಿದ್ದಾರೆ. ನಿಮ್ದನ್ನು ನೀವೇ ತೋರಿಸಿದ್ದೀರಲ್ವಾ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಹೀಗೆ ಮಾತಾಡಿ ಮಾತಾಡಿಯೇ ಅವರು ಮಾಜಿ ಆಗಿರೋದು, ನಾವು ಅಧಿಕಾರಕ್ಕೆ ಬಂದಿರೋದು. ಡಿಸಿಎಂ ಅವರನ್ನ ಜೈಲಿಗೆ ಕಳುಹಿಸ್ತೀನಿ. ಅವರನ್ನು ಮಾಜಿ ಮಾಡ್ತೀನಿ ಅಂತೆಲ್ಲ ಹುಚ್ಚುಚ್ಚಾಗಿ ಮಾತನಾಡಬಾರದು. ಏಳೂ ಜನ್ಮ ಎತ್ತಿ ಬಂದ್ರೂ ಡಿಕೆಶಿ ಅವರನ್ನ ಮತ್ತೆ ಮಾಜಿ ಮಾಡಲು ಆಗಲ್ಲ, ಜೈಲಿಗೆ ಕಳುಹಿಸೊಕ್ಕೂ ಆಗಲ್ಲʼʼ ಎಂದು ಹೇಳಿದರು ಕೈ ಶಾಸಕ.

ನಮ್ಮ ಶಾಸಕರಲ್ಲಿ ಯಾವುದೇ ಅಸಮಾಧಾನ ಇಲ್ಲ. 137 ಜನ ಶಾಸಕರು ಎಲ್ಲರೂ ಜೊತೆಗೇ ಇದ್ದೀವಿ. ನಾವೆಲ್ಲಾ ಸಂತೋಷವಾಗಿದ್ದೀವಿ. ವಿರೋಧ ಪಕ್ಷದವರು ಅಧಿಕಾರ ಕಳ್ಕೊಂಡು ಇನ್ನೂ ನಾಲ್ಕು ತಿಂಗಳಾಗಿದೆ ಅಷ್ಟೆ. ಅವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ರಮೇಶ್‌ ಜಾರಕಿಹೊಳಿಗಂತೂ ಹುಚ್ಚೇ ಹಿಡಿದಿದೆʼ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com