ಯಡಿಯೂರಪ್ಪರನ್ನು ಕಡೆಗಣಿಸಿದ ಶಾಪದಿಂದಾಗಿ ಬಿಜೆಪಿ ಸೋತಿದೆ; ಬಿ ಎಲ್ ಸಂತೋಷ್ ಗೆ ಸಿಎಂ ಆಗುವ ಆಸೆ: ರೇಣುಕಾಚಾರ್ಯ ಸಿಡಿಮಿಡಿ

ಬಿಎಸ್​ ಯಡಿಯೂರಪ್ಪ (BS Yediyurappa) ಅವರು ಬಿಜೆಪಿಯಲ್ಲಿ ಮಹಾನ್ ನಾಯಕ. ಅಂಥವರನ್ನು ಕಡೆಗಣಿಸಿದ್ದು ಬಿಜೆಪಿಗೆ ಶಾಪ ಆಗಿದೆ ಎಂದು ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಆರೋಪಿಸಿದ್ದಾರೆ.
ಎಂ ಪಿ ರೇಣುಕಾಚಾರ್ಯ -ಬಿ ಎಸ್ ಯಡಿಯೂರಪ್ಪ(ಸಂಗ್ರಹ ಚಿತ್ರ)
ಎಂ ಪಿ ರೇಣುಕಾಚಾರ್ಯ -ಬಿ ಎಸ್ ಯಡಿಯೂರಪ್ಪ(ಸಂಗ್ರಹ ಚಿತ್ರ)

ಬೆಂಗಳೂರು: ಬಿಎಸ್​ ಯಡಿಯೂರಪ್ಪ (BS Yediyurappa) ಅವರು ಬಿಜೆಪಿಯಲ್ಲಿ ಮಹಾನ್ ನಾಯಕ. ಅಂಥವರನ್ನು ಕಡೆಗಣಿಸಿದ್ದು ಬಿಜೆಪಿಗೆ ಶಾಪ ಆಗಿದೆ ಎಂದು ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಆರೋಪಿಸಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇವತ್ತು ಬಿಜೆಪಿ ಪಕ್ಷದಲ್ಲಿ ವರ್ಚಸ್ಸು ಇರುವವರಿಗೆ ಬೆಳೆಯಲು ಬಿಡುತ್ತಿಲ್ಲ. ಇದರಿಂದ ನನಗೆ ವೈಯಕ್ತಿಕವಾಗಿ ಯಾವ ಲಾಭ ಇಲ್ಲ, ನಷ್ಟವೂ ಇಲ್ಲ. ಪ್ರತಿಯೊಬ್ಬ ಪಕ್ಷದ ಸಾಮಾನ್ಯ ಕಾರ್ಯಕರ್ತನ ಅಪೇಕ್ಷೆಯನ್ನು ನಾನು ನೇರವಾಗಿ ಹೇಳಿದ್ದೇನೆ ಎಂದರು.

ನಾನು ಪಕ್ಷ, ಮೋದಿ, ನಡ್ಡಾ, ಅಮಿತ್ ಶಾ ವಿರುದ್ಧ ಮಾತಾಡಿಲ್ಲ. ಕೆಲ ವ್ಯಕ್ತಿಗಳ ದೌರ್ಬಲ್ಯವನ್ನು ನಾನು ನೇರವಾಗಿ ಖಂಡಿಸಿದ್ದೇನೆ. ನಾನು ಬಿಜೆಪಿ ಬಿಡೋದಿಲ್ಲ, ಪಕ್ಷದಲ್ಲೇ ಇದ್ದೇನೆ. ನಾನು ಯಾವುದನ್ನು ಮುಚ್ಚುಮರೆ ಇಲ್ಲದೆ ಹೇಳಿದ್ದೇನೆ. ಪಕ್ಷದಲ್ಲಿ ಸಂಘಟನೆ ಕೊರತೆ ಇದೆ, ಇದು ಸರಿಯಾಗಬೇಕು, ಬಿಎಸ್ ವೈಯರನ್ನು ಕಡೆಗಣಿಸಿದ್ದು ಪಕ್ಷಕ್ಕೆ ಶಾಪ ಆಗಿದೆ ಎಂದರು.

ನಿನ್ನೆ ಬೆಂಗಳೂರಿನಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಯಡಿಯೂರಪ್ಪ, ಬೊಮ್ಮಾಯಿಯಂತಹ ಮುಖಂಡರೆಲ್ಲರೂ ಇರಬೇಕಾಗಿತ್ತು. ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಬಳಿಕ ಸೋಲಿಗೆ ಏನು ಕಾರಣ ಎಂದು ಆತ್ಮಾವಲೋಕನ ಸಭೆ ಮಾಡಬೇಕಾಗಿತ್ತು, ಮಾಡಲಿಲ್ಲ. ಯಡಿಯೂರಪ್ಪನವರನ್ನು ಸೈಡ್ ಲೈನ್ ಮಾಡಿದರು.ನಾನು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ, ನಾನು ಪಕ್ಷ ಬಿಡುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ, ಪಕ್ಷದ ಶಿಸ್ತಿನ ಸಿಪಾಯಿ ನಾನು ಎಂದರು.

ನಿನ್ನೆ ಬಿಲ್ ಸಂತೋಷ್ ನೇತೃತ್ವದಲ್ಲಿ ಯಡಿಯೂರಪ್ಪ ಅನುಪಸ್ಥಿತಿಯಲ್ಲಿ ಸಭೆ: ಬಿಎಸ್ ಯಡಿಯೂರಪ್ಪ ಅನುಪಸ್ಥಿತಿಯಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್​ ಸಂತೋಷ್(BL Santosh) ಅವರು ಲೋಕಸಭಾ ಚುನಾವಣೆ ಪೂರ್ವಸಿದ್ಧತಾ ಸಭೆ ಮಾಡಿರುವುದಕ್ಕೆ ಬಿಜೆಪಿ ಅಸಮಾಧಾನ ಸ್ಫೊಟಗೊಂಡಿದೆ. ಯಡಿಯೂರಪ್ಪ ಶಿವಮೊಗ್ಗ ಪ್ರವಾಸ ನಿಗದಿ ಬಳಿಕವೇ ಬೆಂಗಳೂರಿನಲ್ಲಿ ಸಭೆ ನಡೆಸಲಾಗಿದೆ. ಹೀಗಾಗಿ ಬಿಎಸ್​ ಯಡಿಯೂರಪ್ಪ ಅವರನ್ನ ಸಭೆಯಿಂದ ದೂರವಿಡುವ ಪ್ರಯತ್ನವೇನಾದರೂ ನಡೆಯಿತಾ ಎನ್ನುವ ಸಣ್ಣ ಅನುಮಾನ ಅವರ ಬೆಂಬಲಿಗರದ್ದಾಗಿದೆ. ಈ ಬಗ್ಗೆ  ಎಂಪಿ ರೇಣುಕಾಚಾರ್ಯ ಸಿಡಿದೆದ್ದಿದ್ದು, ಬಿಎಲ್​ ಸಂತೋಷ್​ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಸೋಲಿಗೆ ಯಡಿಯೂರಪ್ಪ ಶಾಪ ಕಾರಣ. ನಿನ್ನೆ ಸಭೆ ಮಾಡಿದವರು ಬಿಜೆಪಿ ಕಟ್ಟಿ ಬೆಳೆಸಿದವರಲ್ಲ. ಅವರು 2006-07 ರಲ್ಲಿ ಸಂಘ ಪರಿವಾರದಿಂದ ಬಂದವರು. ಅವರಿಗೆ ತಾನು ಮುಖ್ಯಮಂತ್ರಿ ಆಗಬೇಕು ಅಂತ ಇದೆ. ಅವರು ಇಡೀ ಪಕ್ಷವನ್ನು ಕಂಟ್ರೋಲ್ ಮಾಡುತ್ತಿದ್ದಾರೆ. ಅವರ ಪರವಾಗಿ ಒಂದು ಗ್ಯಾಂಗ್ ಇದೆ. ಅವರು ಯಾರೂ ಜನರಿಂದ ಆಯ್ಕೆಯಾದವರಲ್ಲ, ಪಕ್ಷ ಕಟ್ಟಿದವರಲ್ಲ ಎಂದು ಕಿಡಿಕಾರಿದರು.

ಇಡೀ ಪಕ್ಷ ಅವರ ಶಿಷ್ಯರ ಕೈಯಲ್ಲಿ ಇರಬೇಕು ಎಂದು ಯಡಿಯೂರಪ್ಪನವರನ್ನು ಸೈಡ್ ಲೈನ್ ಮಾಡಿದರು. ಬಿಜೆಪಿಯಲ್ಲಿರುವ ಲಿಂಗಾಯತ ನಾಯಕರನ್ನೆಲ್ಲ ಮುಗಿಸಿದರು. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಈಶ್ವರಪ್ಪ, ಲಕ್ಷ್ಮಣ ಸವದಿಗೆ ಟಿಕೆಟ್ ಕೊಡದೇ ಕಡೆಗಣಿಸಿದರು. ಏಳೆಂಟು ಜನರ ಗುಂಪು ಕಟ್ಟಿಕೊಂಡಿದ್ದಾರೆ. ಜೀ ಅಂದರೆ ಮಾತ್ರ ಅಲ್ಲಿ ಬೆಲೆ. ಸಂಘಟನೆ ನಿಮ್ಮಿಂದ ಹಾಳಾಗಿದೆ. ಸಂಘಟನೆ ಅಂದರೆ ಬೂತ್ ಮಟ್ಟದಲ್ಲಿ ಆಗಬೇಕು, ಹೈಟೆಕ್ ಸಂಘಟನೆ ಅಲ್ಲ. ನಿನ್ನೆ ಯಡಿಯೂರಪ್ಪನವರ ಸಮಯ ತೆಗೆದುಕೊಂಡು ಸಭೆ ಮಾಡಬೇಕಾಗಿತ್ತು. ಯಡಿಯೂರಪ್ಪನವರನ್ನು ಹೊರಗಿಟ್ಟು ಸಭೆ ಮಾಡಬೇಕೆಂದುಕೊಂಡಿದ್ದೀರಾ ಎಂದು ಪ್ರಶ್ನಿಸಿದ ರೇಣುಕಾಚಾರ್ಯ, ಬಿಜೆಪಿ ಹೀನಾಯ ಸೋಲಿಗೆ ನಮ್ಮವರೇ ಕಾರಣ. ಯಡಿಯೂರಪ್ಪ ಪರ ಮಾತಾಡಿದರೆ ಅವರ ಗುಂಪು ಅಂತಾರೆ, ಮನೆಗೆ ಹೋದರೆ ಶಿಷ್ಯರು ಅಂತಾರೆ ಎಂದು ಬಿಎಲ್​ ಸಂತೋಷ್​ ವಿರುದ್ಧ ಬಹಿರಂಗವಾಗಿ ಕೆಂಡಕಾರಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com