ಚುನಾವಣೆಯ ತಂತ್ರಗಾರಿಕೆ ಮಕಾಡೆ ಮಲಗಿದಾಗ ಗಂಟು ಮೂಟೆ ಕಟ್ಟಿ ನಾಪತ್ತೆ; ಬಿಎಸ್ ವೈಗೆ ಸೆಡ್ಡು ಹೊಡೆಯಲು ಪ್ರತ್ಯಕ್ಷ!

ಚುನಾವಣೆಯ ತಂತ್ರಗಾರಿಕೆ ಮಕಾಡೆ ಮಲಗಿ ಹೀನಾಯ ಸೋಲು ಅನುಭವಿಸಿದಾಗ ಇದೇ ಸಂತೋಷ್ ಗಂಟು ಮೂಟೆ ಕಟ್ಟಿಕೊಂಡು ನಾಪತ್ತೆಯಾಗಿದ್ದರು ಎಂದು ಲೇವಡಿ ಮಾಡಿದೆ.
ಬಿ.ಎಲ್ ಸಂತೋಷ್
ಬಿ.ಎಲ್ ಸಂತೋಷ್
Updated on

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ನಿನ್ನೆ ನಡೆಸಿದ ಪಕ್ಷದ ಸಭೆಯ ಸಂಬಂಧ ಕಾಂಗ್ರೆಸ್ ತಿರುಗೇಟು ನೀಡಿದೆ. ಚುನಾವಣೆಯ ತಂತ್ರಗಾರಿಕೆ ಮಕಾಡೆ ಮಲಗಿ ಹೀನಾಯ ಸೋಲು ಅನುಭವಿಸಿದಾಗ ಇದೇ ಸಂತೋಷ್ ಗಂಟು ಮೂಟೆ ಕಟ್ಟಿಕೊಂಡು ನಾಪತ್ತೆಯಾಗಿದ್ದರು ಎಂದು ಲೇವಡಿ ಮಾಡಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್ ಯಡಿಯೂರಪ್ಪನವರಿಗೆ ಸೆಡ್ಡು ಹೊಡೆಯಲು ನಡೆಸಿದ ಸಭೆಗೆ ಹಲವು ಬಿಜೆಪಿ ಶಾಸಕರು, ನಾಯಕರೇ ಗೈರಾಗಿದ್ದರು. ಬಿ.ಎಲ್ ಸಂತೋಷ್ ಅವರು ಸ್ವತಃ ಬಿಜೆಪಿ ಶಾಸಕರೊಂದಿಗೇ ಸಂಪರ್ಕ ಸಾಧಿಸಲು ಸಾಧ್ಯವಾಗಿಲ್ಲ, ಇನ್ನೂ ಕಾಂಗ್ರೆಸ್ ಶಾಸಕರು ಸಂಪರ್ಕದಲ್ಲಿದ್ದಾರೆ ಎನ್ನುವುದು ಶತಮಾನದ ಜೋಕ್ ಎಂದು ಲೇವಡಿ ಮಾಡಿದೆ. ಸುಳ್ಳು ಹೇಳಿಕೊಂಡು ತಿರುಗುವ ಮೊದಲು ಸಂತೋಷ್ ಅವರು ತಮ್ಮ ಪಕ್ಷದ ಶಾಸಕರೊಂದಿಗೆ ಸಂಪರ್ಕ ಹಾಗೂ ವಿಶ್ವಾಸವನ್ನು ಹೊಂದಲು ಪ್ರಯತ್ನಿಸಲಿ ಎಂದು ಕಾಂಗ್ರೆಸ್ ತಿವಿದಿದೆ.

ಬಿಜೆಪಿ ತನ್ನ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಮಾಡಲು ಸಭೆ ನಡೆಸಬೇಕಿತ್ತು, ನೂತನ ರಾಜ್ಯಾಧ್ಯಕ್ಷರ ನೇಮಕಕ್ಕಾದರೂ ಸಭೆ ನಡೆಸಬೇಕಿತ್ತು. ಆದರೆ ಒಬ್ಬ ವ್ಯಕ್ತಿಯ ಪ್ರತಿಷ್ಠೆಯ ಹಪಹಪಿಯನ್ನು ಸಂತೈಸಲು ಸಭೆ ನಡೆಸಿದೆ,  ಬಿಜೆಪಿಯ ಅಸಮದಾನಿತರು ಈ ಸಭೆಯಿಂದ ದೂರ ಉಳಿಯುವ ಮೂಲಕ #BJPvsBJP ಕಿತ್ತಾಟ ಮತ್ತೊಮ್ಮೆ ಬಹಿರಂಗವಾಗಿದೆ ಹಾಗೂ ಬಿಎಲ್ ಸಂತೋಷ್ ಅವರಿಗೆ ನಯಾಪೈಸೆ ಕಿಮ್ಮತ್ತಿಲ್ಲ ಎಂಬುದನ್ನು ಅನಾವರಣಗೊಂಡಿದೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ಬಿಜೆಪಿ ಪಕ್ಷಕ್ಕೆ ಸಭೆ ಕರೆಯಲು ಒಬ್ಬ ಅಧ್ಯಕ್ಷ ದಿಕ್ಕಿಲ್ಲ, ಬಿಜೆಪಿ ಶಾಸಕರ ಸಭೆ ನಡೆಸಲು ಒಬ್ಬ ಶಾಸಕಾಂಗ ಪಕ್ಷದ ನಾಯಕನಿಲ್ಲ. ಜನಪ್ರತಿನಿಧಿಯಾಗಲು ಅರ್ಹತೆ ಇಲ್ಲದ, ನಾಲ್ಕು ಮತಗಳನ್ನು ಸೆಳೆಯಲು ಶಕ್ತಿ ಇಲ್ಲದ ಬಿ ಎಲ್ ಸಂತೋಷ್ ಸಭೆ ನಡೆಸುವ ದುರ್ಗತಿ ಬಂದಿದೆ ಎಂದರೆ ಬಿಜೆಪಿ ಅದೆಷ್ಟು ರಾಜಕೀಯ ದಿವಾಳಿಯಾಗಿರಬಹುದು! ಯಡಿಯೂರಪ್ಪ ಅವರಿಗೆ ಸೆಡ್ಡು ಹೊಡೆಯುವುದಕ್ಕೆ ಮಾತ್ರ ಈ ಸಭೆ ಸೀಮಿತವಾಗಿದೆ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

ಇತ್ತೀಚಿಗೆ ಬಿಜೆಪಿಯ ಶಾಸಕರು ಯಡಿಯೂರಪ್ಪನವರ ಮನೆಯಲ್ಲಿ ಸಭೆ ಸೇರಿ ನೀವೇ ನಾಯಕತ್ವ ವಹಿಸಿಕೊಳ್ಳಬೇಕು ಎಂದು ಆಗ್ರಹಿಸಿದ್ದರು. ಬಿಜೆಪಿ ಶಾಸಕರೆಲ್ಲ ಯಡಿಯೂರಪ್ಪ ಅವರ ಹಿಂದೆ ಹೋಗಿದ್ದೇ ತಡ ಕುಪಿತರಾದ ಬಿ ಎಲ್ ಸಂತೋಷ್ ನಾನೇ ಲೀಡರ್ ಎಂಬ ಸಂದೇಶ ರವಾನಿಸಲು ಸಭೆ ನಡೆಸಿದ್ದಾರೆ.

ಚುನಾವಣೆಯ ತಂತ್ರಗಾರಿಕೆ ಮಕಾಡೆ ಮಲಗಿ ಹೀನಾಯ ಸೋಲು ಅನುಭವಿಸಿದಾಗ ಇದೇ ಸಂತೋಷ್ ಗಂಟು ಮೂಟೆ ಕಟ್ಟಿಕೊಂಡು ನಾಪತ್ತೆಯಾಗಿದ್ದರು, ಈಗ BSY ಅವರಿಗೆ ಸೆಡ್ಡು ಹೊಡೆಯಲು ಮತ್ತೆ ಪ್ರತ್ಯಕ್ಷರಾಗಿ ಸಭೆ ನಡೆಸಿದ್ದಾರೆ. ಅದೇನೇ ಮಾಡಿದರೂ ಬಿಜೆಪಿಗೆ ಮತ್ತೆ ಜೀವ ಬರುವುದಿಲ್ಲ ಎಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com