ರಾಜ್ಯದ ಅಣೆಕಟ್ಟುಗಳಲ್ಲಿನ ಪರಿಸ್ಥಿತಿ ಅವಲೋಕನಕ್ಕೆ ತಂಡ ರವಾನಿಸದ ಕೇಂದ್ರದ ವಿರುದ್ಧ ಕಾಂಗ್ರೆಸ್ ಕಿಡಿ
ಮೈಸೂರು: ರಾಜ್ಯದ ಅಣೆಕಟ್ಟುಗಳಲ್ಲಿನ ಪರಿಸ್ಥಿತಿ ಅವಲೋಕನಕ್ಕೆ ತಂಡ ರವಾನಿಸದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಭಾನುವಾರ ತೀವ್ರವಾಗಿ ಕಿಡಿಕಾರಿತು.
ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಅವರು, ತಮಿಳುನಾಡು ರಾಜ್ಯಕ್ಕೆ ಕಾವೇರಿ ನೀರು ಬಿಡುಗಡೆ ಮಾಡುತ್ತಿರುವುದಕ್ಕೆ ಬಿಜೆಪಿ ನಾಯಕರು ರಾಜ್ಯ ಸರ್ಕಾರವನ್ನು ದೂಷಿಸುತ್ತಿದೆ. “ರಾಜ್ಯ ಸರ್ಕಾರವು CWMA ಆದೇಶಕ್ಕೆ ಬದ್ಧವಾಗಿದೆ. ಆದರೆ, ರಾಜ್ಯದ ಪರಿಸ್ಥಿತಿಯನ್ನು ಕೇಂದ್ರಕ್ಕೆ ಮನವರಿಕೆ ಮಾಡಿಕೊಟ್ಟು ಅದನ್ನು ತಡೆಯಲು ಸರ್ಕಾರ ಮುಂದಾಗಿದೆ. ರಾಜ್ಯ ಸರ್ಕಾರವನ್ನು ದೂಷಿಸುವ ಮೊದಲು ಅಣೆಕಟ್ಟುಗಳು ಕೇಂದ್ರ ಸರ್ಕಾರದ ಆಡಳಿತದಲ್ಲಿ ಬರುತ್ತವೆ ಎಂಬುದನ್ನು ಬಿಜೆಪಿ ನಾಯಕರು ತಿಳಿದಿರಬೇಕು. ಇಲ್ಲಿಯವರೆಗೂ ಕೇಂದ್ರ ಸರ್ಕಾರದ ಯಾವುದೇ ಎಂಜಿನಿಯರ್ ಅಥವಾ ಯಾವುದೇ ತಂಡವನ್ನು ರಾಜ್ಯದ ಅಣೆಕಟ್ಟುಗಳ ಪರಿಶೀಲನೆಗೆ ಏಕೆ ಕಳುಹಿಸಲಿಲ್ಲ.
ಕಾವೇರಿ ಮಾನಿಟರಿಂಗ್ ಬೋರ್ಡ್ ಪ್ರಾಧಿಕಾರ ರಚಿಸಿದ್ದು ಪ್ರಧಾನಿ ಮೋದಿ, ಇದಕ್ಕೆ ಕೇಂದ್ರ ಸರ್ಕಾರ ಚೀಫ್ ಎಂಜಿನಿಯರ್ ಮುಖ್ಯಸ್ಥರು. ಎಲ್ಲಾ ರಾಜ್ಯದ ಎಂಜನಿಯರ್ ಅಲ್ಲಿರುತ್ತಾರೆ. ಅಲ್ಲಿ ನಿರ್ಧಾರ ಮಾಡುವವರು ನೀವೇ, ನೀರು ಕೊಡಿ ಎಂದು ಹೇಳಿದವರು ನೀವೇ, ನೀರು ಇದ್ದರೆ ತಾನೇ ಕೊಡುವುದು? ಇಲ್ಲಿದರುವ ನೀರನ್ನು ಹೇಗೆ ಕೊಡುವುದು ಎಂದು ಪ್ರಶ್ನಿಸಿದರು.
ಇಲ್ಲಿ ಬಂದು ಪರಿಸ್ಥಿತಿ ನೋಡಿ ತೀರ್ಮಾನ ಮಾಡಲಿಲ್ಲ. ಈಗ ಇಲ್ಲಿ ಬಂದು ಬಾಯಿ ಬಡಿದುಕೊಳ್ಳುತ್ತಿದ್ದೀರಾ. ನಮಗೆ ಕುಡಿಯಲು ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಲಿದೆ. ಇದರ ಜೊತೆಗೆ ಕೃಷಿಗೂ ನೀರು ಬೇಕು. ನಿಮ್ಮ ಯೋಗ್ಯತೆಗೆ ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸಲಿಲ್ಲ. ಅದರಲ್ಲಿ ನೀರು ಶೇಖರಣೆಯಾಗಿದ್ದರೆ, ಈಗ ಅನುಕೂಲವಾಗುತ್ತಿತ್ತು. 25 ಸಂಸದರು ಎಲ್ಲಿ ಹೋಗಿದ್ದಾರಂದು ಪ್ರಶ್ನಿಸಿದರು.
ಇಂಡಿಯಾ ದಿನೇ ದಿನೇ ಎಲ್ಲರಿಗೂ ಇಷ್ಟವಾಗುತ್ತಿದೆ. ಅದಕ್ಕಾಗಿ ಒಂದೇ ದೇಶ ಒಂದು ಚುನಾವಣೆ ಎನ್ನುತ್ತಿದ್ದಾರೆ. ಇದೊಂದು ಕೇಂದ್ರ ಸರ್ಕಾರದ ಕುತಂತ್ರ ಎಂದು ಆರೋಪಿಸಿದರು.
ಇದೇ ವೇಲೆ ನನ್ನ ವಿರುದ್ಧ ಮತ ಹಾಕರು 10 ಕಾರಣಗಳನ್ನು ನೀಡಿ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದ್ದ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ವಿರುದ್ಧ ಲಕ್ಷ್ಮಣ್ ಅವರು ತೀವ್ರ ವಾಗ್ದಾಳಿ ನಡೆಸಿದರು.
ಸೆಪ್ಟೆಂಬರ್ 6 ರಂದು ಸಂಸದರ ಕಚೇರಿ ಎದುರು ಬಹಿರಂಗ ಚರ್ಚೆಗೆ ಬರುವಂತೆ ಸವಾಲು ಹಾಕುತ್ತಿದ್ದೇನೆ. ಸಿದ್ದರಾಮಯ್ಯ ಅವರು ಭ್ರಷ್ಟ ರಾಜಕಾರಣಗಳನ್ನು ದೂರವಿಡಿ, ಅವರಿಗೆ ಮತ ಹಾಕಬೇಡಿ ಎಂದು ಹೇಳಿದ್ದರು,ಪ್ರತಾಪ್ ಸಿಂಹನಿಗೆ ಸುಳ್ಳು ಹೇಳೋದೆ ಒಂದು ಚಾಳಿ. ಗ್ರೇಟರ್ ಮೈಸೂರು ಮಾಡಲಿಕ್ಕೆ ಸಿದ್ದರಾಮಯ್ಯ ಅಡ್ಡಿಗಾಲು ಅಂತ ಹೇಳಿಕೆ ನೀಡುತ್ತಿದ್ದಾರೆ. ಗ್ರೇಟರ್ ಮೈಸೂರು ಮಾಡಲು ಕೆಲ ಮಾನದಂಡಗಳು ಇವೆ. ಗ್ರೇಟರ್ ಮೈಸೂರು ಮಾಡುವುದು ಕೇಂದ್ರ ಸರ್ಕಾರವೊ ಅಥವಾ ರಾಜ್ಯ ಸರ್ಕಾರವೊ. ಜನರಿಗೆ ಸತ್ಯ ಕೇಳಿ ಪ್ರತಾಪ್ ಸಿಂಹರವರೆ...
ಗ್ರೇಟರ್ ಮೈಸೂರು ಮಾಡೋದು ಯಾರು ಎನ್ನುವ ಸಾಮಾನ್ಯ ಜ್ಞಾನವು ನಿಮಗೆ ಇಲ್ಲವೇ. ಗ್ರೇಟರ್ ಮೈಸೂರು ಮಾಡುವುದಕ್ಕೆ 200ಕಿಮೀ ವಿಸ್ತೀರ್ಣ ಇರಬೇಕು. ಆದರೆ, ಮೈಸೂರು ನಗರ ಪಾಲಿಕೆ ವ್ಯಾಪ್ತಿ ವಿಸ್ತೀರ್ಣ 128ಕಿಮೀ ಮಾತ್ರ ಇರೋದು. ನಿಮ್ಮದೇ ಸರ್ಕಾರ ಇದ್ದಾಗ ಗ್ರೇಟರ್ ಮೈಸೂರು ಬಗ್ಗೆ ಚಕಾರು ಎತ್ತಲಿಲ್ಲ. ಈಗ ಗ್ರೇಟರ್ ಮೈಸೂರು ನೆನಪಾಯಿತೇ ಎಂದು ಪ್ರಶ್ನಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ