ಸಿದ್ದರಾಮಯ್ಯ ಲಾಟರಿ ಸಿಎಂ: ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಲೇವಡಿ
ಮೈಸೂರು: ಸಿದ್ದರಾಮಯ್ಯ ಅವರನ್ನು ಲಾಟರಿ ಸಿಎಂ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಲೇವಡಿ ಮಾಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಎರಡೂ ಬಾರಿಯೂ ತಮ್ಮ ಶಕ್ತಿ ಮೇಲೆ ಸಿಎಂ ಆಗಲಿಲ್ಲ. 2013ರಲ್ಲಿ ಕೆಜೆಪಿ- ಬಿಜೆಪಿ ಅಂತ ವಿಭಾಗ ಆಗಿತ್ತು. ಹೀಗಾಗಿ ಕಾಂಗ್ರೆಸ್ ಗೆಲುವು ಸಾಧಿಸಿತು. ಸಿದ್ದರಾಮಯ್ಯ ಮುಖ್ಯಮಂತ್ರಿ ಆದರು. ಈ ಬಾರಿ ಗ್ಯಾರಂಟಿ ಎಂದು ಹೇಳಿಕೊಂಡು ಸಿಎಂ ಆಗಿಬಿಟ್ಟರು. ಸಿದ್ದರಾಮಯ್ಯ ಅಪ್ಪಿತಪ್ಪಿ ಸಿಎಂ ಆಗಿದ್ದಾರೆ. ಮುಂದೆ ಲೋಕಸಭೆ ಚುನಾವಣೆ ಬರುತ್ತಿದೆ. ಕಾಂಗ್ರೆಸ್‍ನವರ ಸ್ಥಿತಿ ಏನು ಎಂದು ತಿಳಿಯಲಿದೆ ಎಂದು ಹೇಳಿದರು.
ಸಿದ್ದರಾಮಯ್ಯ ಮುಸಲ್ಮಾನರ ದತ್ತು ಪುತ್ರ ಆಗಿದ್ದಾರೆ. ಮುಸಲ್ಮಾನರ ಜಾಗದಲ್ಲಿ ನಿಂತು ಮೋದಿ, ಪ್ರತಾಪ್ ಸಿಂಹ ವಿರುದ್ಧ ಮಾತನಾಡಿದರೆ ಕಾಂಗ್ರೆಸ್‍ಗೆ ಮತ ಬರುತ್ತದೆ ಎಂದುಕೊಂಡಿದ್ದಾರೆ. ಅದೇ ಕಾರಣಕ್ಕೆ ಮುಸಲ್ಮಾನರ ಎದುರು ಭಾಷಣ ಮಾಡಿದ್ದಾರೆ. ಇದೆಲ್ಲ ಮುಂದಿನ ಚುನಾವಣೆಯಲ್ಲಿ ನಡೆಯಲ್ಲ ಎಂದು ತಿಳಿಸಿದರು.
ಬಳಿಕ ಸನಾತನ ಧರ್ಮದ ಕುರಿತು ತಮಿಳುನಾಡು ಸಿಎಂ ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ಹೇಳಿಕೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ಅವರೆಲ್ಲಾ ನಾಶವಾಗಿದ್ದಾರೆ. ಇವರೂ ನಾಶವಾಗುತ್ತಾರೆ. ಈ ದೇಶ ಉಳಿದಿರುವುದೇ ಸನಾತನ ಧರ್ಮದಿಂದ’ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸೇಫ್ ಇಲ್ಲ. ಲೋಕಸಭೆ ಚುನಾವಣೆಗೂ ಮುಂಚೆ ಅಥವಾ ಆದ ಮೇಲೆ ಈ ಸರ್ಕಾರ ಬೀಳುತ್ತದೆ. ಸರ್ಕಾರ ಹೇಗಿದೆ ಎನ್ನುವುದನ್ನು ಅವರ ಶಾಸಕ ಬಸವರಾಜ ರಾಯರೆಡ್ಡಿ ಅಥವಾ ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರನ್ನು ಕೇಳಿ. ಇದು ಲಾಟರಿಯಿಂದ ಬಂದ ಸರ್ಕಾರ. ಒಂದು ಸಲ ಬಿಜೆಪಿ- ಕೆಜೆಪಿಯಿಂದ, ಈಗ ಗ್ಯಾರಂಟಿಗಳಿಂದ ಬಂದಿದೆ. ಸಿದ್ದರಾಮಯ್ಯ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವಲ್ಲಿ ವಿಫಲರಾಗಿದ್ದಾರೆಂದು ಆರೋಪಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ