ಕುತೂಹಲ ಮೂಡಿಸಿದ ಡಿ.ಕೆ ಶಿವಕುಮಾರ್- ತೇಜಸ್ವಿನಿ ಅನಂತ್ ಕುಮಾರ್ ಭೇಟಿ: ಮೀಟಿಂಗ್ ಹಿಂದಿದ್ಯಾ ಆಪರೇಷನ್?

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರನ್ನು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷೆ, ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥರೂ ಆಗಿರುವ ತೇಜಸ್ವಿನಿ ಅನಂತಕುಮಾರ್ ಅವರು ಕುಮಾರಕೃಪಾ ಅತಿಥಿ ಗೃಹದಲ್ಲಿ ಸೋಮವಾರ ಭೇಟಿ ಮಾಡಿ ಕೆಲಹೊತ್ತು ಚರ್ಚೆ ನಡೆಸಿದರು.
ಡಿ.ಕೆ ಶಿವಕುಮಾರ್ ಮತ್ತು ತೇಜಸ್ವಿನಿ ಅನಂತ್ ಕುಮಾರ್ ಭೇಟಿ
ಡಿ.ಕೆ ಶಿವಕುಮಾರ್ ಮತ್ತು ತೇಜಸ್ವಿನಿ ಅನಂತ್ ಕುಮಾರ್ ಭೇಟಿ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರನ್ನು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷೆ, ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥರೂ ಆಗಿರುವ ತೇಜಸ್ವಿನಿ ಅನಂತಕುಮಾರ್ ಅವರು ಕುಮಾರಕೃಪಾ ಅತಿಥಿ ಗೃಹದಲ್ಲಿ ಸೋಮವಾರ ಭೇಟಿ ಮಾಡಿ ಕೆಲಹೊತ್ತು ಚರ್ಚೆ ನಡೆಸಿದರು.

ರಾಜ್ಯದಲ್ಲಿ ಆಪರೇಷನ್ ಹಸ್ತದ ವಿಚಾರ ಜೋರಾಗಿ ಚರ್ಚೆಯಾಗುತ್ತಿರುವ ನಡುವೆ, ಬಿಜೆಪಿಯ ಹಿರಿಯ ನಾಯಕ ದಿ.ಅನಂತ್ ಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಡಿಸಿಎಂ ಡಿ.ಕೆ ಶಿವಕುಮಾರ್ ಅವರನ್ನು ಭೇಟಿಯಾಗಿರುವುದು ರಾಜ್ಯ ರಾಜಕೀಯ ನಾಯಕರ ಹುಬ್ಬೇರುವಂತೆ ಮಾಡಿದೆ.

ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥರಾದ ತೇಜಸ್ವಿನಿ ಅನಂತಕುಮಾರ್, ಕುಮಾರಕೃಪಾ ಅತಿಥಿ ಗೃಹದಲ್ಲಿ ಡಿಕೆಶಿ ಅವರ ಭೇಟಿ ಮಾಡಿದ್ದಾರೆ. ಈ ವೇಳೆ ಕೆಲ ಕಾಲ ಮಾತುಕತೆ ನಡೆಸಿದ್ದಾರೆ. ಅದಮ್ಯ ಚೇತನ ಸಂಸ್ಥೆ ಮೂಲಕ ಇಂದಿರಾ ಕ್ಯಾಂಟೀನ್‌ ಹಾಗೂ ಪೌರ ಕಾರ್ಮಿಕರಿಗೆ ಊಟ ಸರಬರಾಜು ಮಾಡಲಾಗಿತ್ತು. ಈ ಸಂಬಂಧ ಬಾಕಿ ಇರುವ ಬಿಲ್‌ನ ಹಣ ಬಿಡುಗಡೆ ಸಂಬಂಧ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಇದರ ಜೊತೆ ಅನಂತ್‌ಕುಮಾರ್ 64 ಕಾರ್ಯಕ್ರಮಕ್ಕೆ ಆಗಮಿಸುವಂತೆ ಉಪಮುಖ್ಯಮಂತ್ರಿಗೆ ಆಹ್ವಾನ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದು, ಕನಿಷ್ಠ 20 ಸ್ಥಾನಗಳನ್ನು ಗೆಲ್ಲುವ ಗುರಿಯೊಂದಿಗೆ ಕಾಂಗೆಸ್ ತಂತ್ರ ಹೆಣೆಯುತ್ತಿದೆ. ಈ ನಡುವೆ ಹಲವು ನಾಯಕರಿಗೆ ಕಾಂಗ್ರೆಸ್ ಗಾಳ ಹಾಕಿದೆ. ಈ ನಡುವೆ ತೇಜಸ್ವಿನಿ ಅನಂತ್ ಕುಮಾರ್ ಸಹ ಕಾಂಗ್ರೆಸ್ ಸೇರುತ್ತಾರಾ ಎಂಬ ಗುಮಾನಿ ಎದ್ದಿದೆ.

ತೇಜಸ್ವಿನಿ ಅನಂತ್ ಕುಮಾರ್ ಕೂಡ ಒಂದು ರೀತಿ ಬಿಜೆಪಿಯ ಅಸಮಾಧಾನಿತರು ಎಂದೇ ಹೇಳಬಹುದು. ಯಾಕೆಂದರೆ ಅನಂತ್ ಕುಮಾರ್ ಅವರ ನಿಧನದ ಬಳಿಕ ತೇಜಸ್ವಿನಿ ಅವರಿಗೆ ಬಿಜೆಪಿಗೆ ಯಾವುದೇ ಅವಕಾಶ ಕೊಟ್ಟಿಲ್ಲ. 2019ರ ಲೋಕಸಭೆ ಚುನಾವಣೆಗೆ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ತೇಜಸ್ವಿನಿ ಅನಂತ್ ಕುಮಾರ್ ಟಿಕೆಟ್ ಆಕಾಂಕ್ಷಿಯಾಗಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್‌, ‘ನಾವಿಬ್ಬರೂ ಯಾವುದೇ ರಾಜಕೀಯ ವಿಚಾರಗಳನ್ನು ಚರ್ಚೆ ಮಾಡಿಲ್ಲ’ ಎಂದರು. ‘ರಾಜಕೀಯ ವಿಚಾರ ಮಾತನಾಡಿದ್ದೇವೆ ಎಂದು ಯಾರಾದರೂ ಹೇಳಿದ್ದರೆ ಅದು ಸುಳ್ಳು. ತೇಜಸ್ವಿನಿ ಅವರು ಅನಂತ್‌ಕುಮಾರ್‌ ಅವರ ಜನ್ಮದಿನ, ಅನ್ನಭಾಗ್ಯ ವಿಚಾರಗಳ ಬಗ್ಗೆ ನನ್ನ ಜತೆ ಚರ್ಚೆ ಮಾಡಿದರು. ರಾಜಕೀಯ ವಿಚಾರಗಳನ್ನು ಚರ್ಚೆ ಮಾಡಲಾಯಿತು ಎಂಬುದು ಸುಳ್ಳು ಸುದ್ದಿ’ ಎಂದರು. ಅದಕ್ಕೂ ಮೊದಲು ಡಿ.ಕೆ. ಶಿವಕುಮಾರ್‌ ಅವರ ಟ್ವಿಟರ್‌ ಖಾತೆಯಿಂದ, ಇಬ್ಬರೂ ರಾಜಕೀಯ ಚರ್ಚೆ ನಡೆಸಿದರು ಎಂದು ಟ್ವೀಟ್‌ ಮಾಡಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com