ಹಿಂದೂ ಧರ್ಮದ ಮೂಲ ಪ್ರಶ್ನಿಸಿದ ಪರಮೇಶ್ವರ್: ಇಷ್ಟವಿಲ್ಲದಿದ್ದರೆ ಧರ್ಮ ತೊರೆಯಿರಿ ಎಂದು ಅಶ್ವತ್ಥ್ ನಾರಾಯಣ್ ಸವಾಲು

ಹಿಂದೂ ಧರ್ಮದ ಮೂಲ ಪ್ರಶ್ನಿಸಿ ಗೃಹ ಸಚಿವ ಜಿ ಪರಮೇಶ್ವರ್ ಅವರು ನೀಡಿದ ಹೇಳಿಕೆಯೊಂದು ವಿವಾದದ ಸ್ವರೂಪ ಪಡೆದುಕೊಂಡಿದ್ದು, ಪರಮೇಶ್ವರ್ ಅವರ ಹೇಳಿಕೆಗೆ ರಾಜ್ಯ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದೆ.
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮತ್ತು ಮಾಜಿ ಸಚಿವ ಅಶ್ವತ್ಥ್ ನಾರಾಯಣ್.
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮತ್ತು ಮಾಜಿ ಸಚಿವ ಅಶ್ವತ್ಥ್ ನಾರಾಯಣ್.

ಬೆಂಗಳೂರು: ಹಿಂದೂ ಧರ್ಮದ ಮೂಲ ಪ್ರಶ್ನಿಸಿ ಗೃಹ ಸಚಿವ ಜಿ ಪರಮೇಶ್ವರ್ ಅವರು ನೀಡಿದ ಹೇಳಿಕೆಯೊಂದು ವಿವಾದದ ಸ್ವರೂಪ ಪಡೆದುಕೊಂಡಿದ್ದು, ಪರಮೇಶ್ವರ್ ಅವರ ಹೇಳಿಕೆಗೆ ರಾಜ್ಯ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದೆ.

ಪರಮೇಶ್ವರ್ ಅವರ ಹೇಳಿಕೆ ಸಂಬಂಧ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಶಾಸಕ ಮತ್ತು ಮಾಜಿ ಸಚಿವ ಸಿಎನ್ ಅಶ್ವತ್ಥ್ ನಾರಾಯಣ್ ಅವರು, ಪರಮೇಶ್ವರ್ ಅವರು ಎಲ್ಲವನ್ನೂ ತಿಳಿದ ವ್ಯಕ್ತಿ. ಇಂತಹ ದುರಂಹಂಕಾರ ಒಳ್ಳೆಯದಲ್ಲ ಎಂಬುದನ್ನು ಅರಿತುಕೊಳ್ಳಬೇಕಿದೆ. ಪರಮೇಶ್ವರ್ ಎಡಪಂಥೀಯರ ಪ್ರಭಾವಕ್ಕೆ ಒಳಗಾಗಿದ್ದು, ಹೀಗಾಗಿಯೇ ಭಾರತದ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ನಾಶಪಡಿಸಲು ಬಯಸುತ್ತಿದ್ದಾರೆಂದು ಹೇಳಿದ್ದಾರೆ.

ಹಿಂದೂ ಧರ್ಮದ ಬಗ್ಗೆ ಮಾತನಾಡುತ್ತಿರುವ ಅವರು, ಧೈರ್ಯವಿದ್ದರೆ ಬೇರೆ ಧರ್ಮಗಳ ಮಾತನಾಡಲಿ ಎಂದು ಸವಾಲು ಹಾಕಿದ್ದಾರೆ.

ಈ ನಡುವೆ ಮಾಜಿ ಮುಖ್ಯಮಂತ್ರಿ ಡಿವಿ.ಸದಾನಂದ ಗೌಡ ಅವರು ಪ್ರತಿಕ್ರಿಯೆ ನೀಡಿದ್ದು, ಹಿಂದೂ ಧರ್ಮದ ಬಗ್ಗೆ ಮಾತನಾಡುವಾಗ ಪರಮೇಶ್ವರ್ ಅವರು ಪರಿಜ್ಞಾನ ಇಟ್ಟುಕೊಂಡು ಮಾತನಾಡಬೇಕೆಂದು ಕಿಡಿಕಾರಿದ್ದಾರೆ.

ಕೆ.ಎಸ್.ಈಶ್ವರಪ್ಪ ಅವರು ಮಾತನಾಡಿ, ಹಿಂದೂ ಧರ್ಮದ ಬಗ್ಗೆ ಪ್ರಶ್ನೆ‌ ಕೇಳುವಂತಹ ಅವಕಾಶ ಪರಮೇಶ್ವರ ಅವರಂತಹ ಹಿರಿಯರಿಗೆ ಬರಬಾರದು. ಮೇಲಾಗಿ ಅವರು ಡಾಕ್ಟರ್, ರಾಜ್ಯದ‌ ಗೃಹ ಮಂತ್ರಿ ಬೇರೆ. ಯಾರೇ ಏನೇ ಮಾತಾಡಿದರೂ ಹಿಂದೂ ಸಮಾಜ ಶಾಂತವಾಗಿದೆ. ಎಲ್ಲಿ ಖಂಡನೆ ಮಾಡಬೇಕೋ ಅಲ್ಲಿ ಖಂಡನೆ ಮಾಡಿ ಕೂತಿದೆ. ಪತ್ರಿಕೆಯಲ್ಲಿ ಹೆಸರು ಬರಬೇಕೆಂಬ ಖಾಯಿಲೆ ಶುರುವಾಗಿದೆ. ಪರಮೇಶ್ಚರ್ ಗೆ ನಾನು ಪ್ರಾರ್ಥನೆ ಮಾಡುತ್ತೇನೆ. ಹಿಂದೂ ಧರ್ಮದ ಬಗ್ಗೆ ಮಾತಾಡಲು ನಿಮಗೆ ಅಧಿಕಾರ ಇಲ್ಲ. ದಯವಿಟ್ಟು ಹಿಂದೂ ಸಮಾಜದ ಕ್ಷಮೆ ಕೇಳಿಬಿಡಿ. ಇಲ್ಲವೇ ನಿಮ್ಮ ಅಜ್ಜ, ಮುತ್ತಜ್ಜನ ಹೆಸರುಗಳ ಪಟ್ಟಿ ತೆಗೆಯಿರಿ ಎಂದು ಸವಾಲು ಹಾಕಿದರು.

ಪರಮೇಶ್ವರ ಬಗ್ಗೆ ನನಗೆ ಬಹಳ ಗೌರವವಿದೆ. ಆವರ ಬಾಯಲ್ಲಿ ಯಾಕೆ ಈ ರೀತಿಯ ಮಾತು ಬಂದಿತು ಎಂಬುದು ಗೊತ್ತಿಲ್ಲ. ಪರಮೇಶ್ವರ ಅವರ ಅಪ್ಪನ ಹೆಸರು ಗಂಗಾಧರಪ್ಪ, ಅವರ ಅಜ್ಜನ ಹೆಸರು ಮರಿಯಪ್ಪ. ಅವರ ಮುತ್ತಜ್ಜ ಯಾರು ಅಂತಾ ಹೇಳಲಿ ನೋಡೋಣ. ನಿಮ್ಮ ವಂಶದಲ್ಲಿರುವ ಮುತ್ತಜ್ಜನ ಹೆಸರೇ ನಿನಗೆ ಗೊತ್ತಿಲ್ಲ. ನೂರಾರು ವರ್ಷ ಇತಿಹಾಸವಿರುವ ಹಿಂದೂ ಧರ್ಮದ ಬಗ್ಗೆ ಮಾತಾಡುವಷ್ಟು ದೊಡ್ಡವನಾಗಿ ಬಿಟ್ಟಿಯಾ? ಎಂದು ತಿರುಗೇಟು ನೀಡಿದರು.

ಸಾಧು ಸಂತರು, ತಪಸ್ವಿಗಳು ಈ ಧರ್ಮವನ್ನ ಉಳಿಸಿ. ಇಡೀ ವಿಶ್ವವೇ ನಮ್ಮ ಕುಟುಂಬ ಎಂದು ಕರೆದ ಹಿಂದೂ ಧರ್ಮ. ಇದರ ಉದ್ದೇಶ, ಸರ್ವೇಜನ ಸುಖಿನೋ ಭವಂತು, ಸರ್ವ ದೇವಾ ನಮಸ್ಕಾರ, ಕೇಶವಂ ಪ್ರತಿಗಜ್ಜತಿ ಎಂದು ಹೇಳುವುದೇ ಹಿಂದೂ ಧರ್ಮ. ಅಂತಹ ಹಿಂದೂ ಧರ್ಮದ ಬಗ್ಗೆ ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ‌ ಮಾತಾನಾಡೋದು ಸರಿಯೇ? ಎಂದು ಪ್ರಶ್ನಿಸಿದರು.

ಪರಮೇಶ್ವರ ಹಿಂದೂ ಧರ್ಮದ ಬಗ್ಗೆ ಮಾತಾಡಿದ್ದು ನನಗೆ ಆಶ್ವರ್ಯ ಮತ್ತು ನೋವಾಗಿದೆ. ನಿಮ್ಮ ಬಗ್ಗೆ ನಮಗೆ ಗೌರವ ಇದೆ, ಇಡೀ ರಾಜ್ಯದಲ್ಲಿ ನಿಮಗೆ ತುಂಬಾನೇ ಗೌರವಿಸುತ್ತಾರೆ. ಹಿಂದೂ ಧರ್ಮದ ಬಗ್ಗೆ ಯಾವಾಗ ಹುಟ್ಟಿತ್ತು ಎಂದು ನೀವು ಕೇಳಬಾರದು. ಹಾಗಾಗಿ ರಾಜ್ಯದ ಜನರ ಕ್ಷಮೆ ಕೇಳಿ ಎಂದು ಆಗ್ರಹಿಸಿದರು.

ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆ (Teachers’ Day) ಕಾರ್ಯಕ್ರಮದಲ್ಲಿ ಮಾತನಾಡಿದ್ದ ಪರಮೇಶ್ವರ್ ಅವರು, ಪ್ರಪಂಚದ ಇತಿಹಾಸದಲ್ಲಿ ಅನೇಕ ಧರ್ಮಗಳು ಹುಟ್ಟಿಕೊಂಡಿವೆ. ಹಿಂದೂ ಧರ್ಮವನ್ನು (Hindu Religion) ಯಾರು ಹುಟ್ಟಿಸಿದರು, ಯಾವಾಗ ಹುಟ್ಟಿತು ಎಂಬುದು ಇನ್ನೂ ಪ್ರಶ್ನಾರ್ಥಕ ಚಿಹ್ನೆಯಾಗಿಯೇ ಇದೆ. ಈ ವಿಚಾರದಲ್ಲಿ ಪ್ರಶ್ನಾರ್ಥಕ ಚಿಹ್ನೆ ತೆಗೆದಿಲ್ಲ. ಬೌದ್ಧ ಧರ್ಮ ಹಾಗೂ ಜೈನ ಧರ್ಮ ನಮ್ಮ ದೇಶದಲ್ಲಿ ಹುಟ್ಟಿತು. ಹೊರಗಡೆಯಿಂದ ಇಸ್ಲಾಂ ಧರ್ಮ ಹಾಗೂ ಕ್ರೈಸ್ತ ಧರ್ಮ ಬಂದಿವೆ. ಮನುಕುಲಕ್ಕೆ ಒಳ್ಳೆಯದಾಗಬೇಕೆಂಬುದೇ ಎಲ್ಲಾ ಧರ್ಮಗಳ ಸಾರಾಂಶ ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com