ರಾಮನಗರಕ್ಕೆ ಮಂಜೂರಾಗಿದ್ದ ಮೆಡಿಕಲ್ ಕಾಲೇಜ್ ಹೈಜಾಕ್, ಜಿಲ್ಲೆಯ ಜನತೆಗೆ ಮಾಡಿದ ದ್ರೋಹ: ನಿಖಿಲ್ ಕುಮಾರಸ್ವಾಮಿ

ರಾಮನಗರಕ್ಕೆ ಮಂಜೂರಾಗಿದ್ದ ಮೆಡಿಕಲ್ ಕಾಲೇಜನ್ನು ಕನಕಪುರಕ್ಕೆ ಹೈಜಾಕ್ ಮಾಡುವ ಮೂಲಕ ಜಿಲ್ಲೆಯ ಜನತೆಗೆ ಕಾಂಗ್ರೆಸ್ ಸರ್ಕಾರ ದ್ರೋಹವೆಸಗಿದೆ ಎಂದು ನಿಖಿಲ್ ಕುಮಾರ್ ಸ್ವಾಮಿ ಆರೋಪಿಸಿದ್ದಾರೆ.
ನಿಖಿಲ್ ಕುಮಾರಸ್ವಾಮಿ
ನಿಖಿಲ್ ಕುಮಾರಸ್ವಾಮಿ

ಬೆಂಗಳೂರು: ರಾಮನಗರಕ್ಕೆ ಮಂಜೂರಾಗಿದ್ದ ಮೆಡಿಕಲ್ ಕಾಲೇಜನ್ನು ಕನಕಪುರಕ್ಕೆ ಹೈಜಾಕ್ ಮಾಡುವ ಮೂಲಕ ಜಿಲ್ಲೆಯ ಜನತೆಗೆ ಕಾಂಗ್ರೆಸ್ ಸರ್ಕಾರ ದ್ರೋಹವೆಸಗಿದೆ ಎಂದು ನಿಖಿಲ್ ಕುಮಾರ್ ಆರೋಪಿಸಿದ್ದಾರೆ.

ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಒತ್ತಡದಿಂದಲೇ ಮೆಡಿಕಲ್ ಕಾಲೇಜನ್ನು ಕನಕಪುರಕ್ಕೆ ಸ್ಥಳಾಂತರ ಮಾಡುವುದಾಗಿ ಸ್ವತಃ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಅವರೇ ಹೇಳಿದ್ದರು. ಹಾಗಾದರೆ, ಈ ಸರಕಾರ ಯಾರನ್ನು ಯಾಮಾರಿಸಲು ಹೊರಟಿದೆ. ಡಬಲ್ ಗೇಮ್ ಆಡುತ್ತಿರುವುದು ಯಾವ ಪುರುಷಾರ್ಥಕ್ಕೆ? ಸುಖಾ ಸುಮ್ಮನೆ ಗೊಂದಲ ಯಾಕೆ? ಎಂದು ಪ್ರಶ್ನಿಸಿದ್ದಾರೆ. 

ಈ ಕುರಿತು ಎಕ್ಸ್ ನಲ್ಲಿ ಸರಣಿ ಟ್ವೀಟ್ ಮಾಡಿರುವ ನಿಖಿಲ್ ಕುಮಾರಸ್ವಾಮಿ, ಮೈತ್ರಿ ಸರಕಾರದ ಅವಧಿಯಲ್ಲಿ ಕನಕಪುರಕ್ಕೂ ಪ್ರತ್ಯೇಕ ಮೆಡಿಕಲ್ ಕಾಲೇಜು ಬೇಕು ಎಂದು ಅಂದು ಡಿಕೆ ಶಿವಕುಮಾರ್ ಅವರೇ ಒತ್ತಡ ಹೇರಿದ್ದರು. 13-12-2018ರಲ್ಲಿ ರೂ. 450 ಕೋಟಿ ವೆಚ್ಚದ ಮೆಡಿಕಲ್ ಕಾಲೇಜನ್ನು ಕುಮಾರಣ್ಣ ಅವರು ಕನಕಪುರಕ್ಕೂ ಮಂಜೂರು ಮಾಡಿದ್ದರು. ಬಳಿಕ ಬಿಜೆಪಿ ಸರಕಾರ ರಾಮನಗರ ಮೆಡಿಕಲ್ ಕಾಲೇಜು ಹಾಗೂ ರಾಜೀವ್ ಗಾಂಧಿ ವಿವಿ ಸಮುಚ್ಚಯ ನಿರ್ಮಾಣಕ್ಕೆ ರೂ.610 ಕೋಟಿ ವೆಚ್ಚದಲ್ಲಿ ಗುದ್ದಲಿಪೂಜೆ ನೆರವೇರಿಸಿತ್ತು. ಎರಡು ತಿಂಗಳ ಹಿಂದೆ ಬಂದ ಕಾಂಗ್ರೆಸ್ ಸರ್ಕಾರ ರಾಮನಗರಕ್ಕೆ ಮಂಜೂರಾಗಿದ್ದ ಕಾಲೇಜನ್ನು ಹೈಜಾಕ್ ಮಾಡಿದೆ ಎಂದು ಟೀಕಿಸಿದ್ದಾರೆ. 

ಮೆಡಿಕಲ್ ಕಾಲೇಜು ರಾಮನಗರ ಜಿಲ್ಲೆಯ ಜನತೆಯ ಹಕ್ಕು. ಅದಕ್ಕಾಗಿ ಹೋರಾಟ ಮಾಡುವ ಹಕ್ಕೂ ಅವರಿಗಿದೆ. ಹೀಗಾಗಿ ಪಕ್ಷಾತೀತವಾಗಿ ನಡೆಯುತ್ತಿರುವ ರಾಮನಗರ ಬಂದ್ ಗೆ ನನ್ನ ಸಂಪೂರ್ಣ ಬೆಂಬಲವಿದೆ. ನೇರವಾಗಿ ಭಾಗವಹಿಸಿ ರಾಜಕೀಯ ಬೆರೆಸುವುದು ನನಗೆ ಇಷ್ಟವಿಲ್ಲ. ಮೆಡಿಕಲ್  ಕಾಲೇಜು ಬೇಕೆನ್ನುವ ರಾಮನಗರ ಜನರ ಒತ್ತಾಯಕ್ಕೆ ನನ್ನ ಸಹಮತ ಇದೆ ಎಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com