ಜನತಾ ದಳ ಎಂಬ ಹೆಸರನ್ನು 'ಕಮಲ ದಳ' ಎಂದು ಬದಲಿಸಿ ಎಂದ ಕಾಂಗ್ರೆಸ್; ಜೆಡಿಎಸ್ ತಿರುಗೇಟು, ಎಚ್‌ಡಿ ಕುಮಾರಸ್ವಾಮಿ ಕಿಡಿ

ಮುಂಬರುವ ಲೋಕಸಭಾ ಚುನಾವಣೆಗೆ ಜೆಡಿಎಸ್-ಬಿಜೆಪಿ ಮೈತ್ರಿ ಮಾತುಕತೆ ವಿಚಾರವಾಗಿ ಜೆಡಿಎಸ್ ಮತ್ತು ಆಡಳಿತಾರೂಢ ಕಾಂಗ್ರೆಸ್ ರಾಜಕೀಯ ಜಿದ್ದಾಜಿದ್ದಿಯಲ್ಲಿ ತೊಡಗಿವೆ. 
ಕಾಂಗ್ರೆಸ್-ಜೆಡಿಎಸ್
ಕಾಂಗ್ರೆಸ್-ಜೆಡಿಎಸ್

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಗೆ ಜೆಡಿಎಸ್-ಬಿಜೆಪಿ ಮೈತ್ರಿ ಮಾತುಕತೆ ವಿಚಾರವಾಗಿ ಜೆಡಿಎಸ್ ಮತ್ತು ಆಡಳಿತಾರೂಢ ಕಾಂಗ್ರೆಸ್ ರಾಜಕೀಯ ಜಿದ್ದಾಜಿದ್ದಿಯಲ್ಲಿ ತೊಡಗಿವೆ. 

'ಚುನಾವಣೆಯಲ್ಲಿ ಸೋತರೆ ಪಕ್ಷ ವಿಸರ್ಜಿಸುತ್ತೇನೆ ಎಂದಿದ್ದರು. ಆದರೆ, ಈಗ 'ಜಾತ್ಯಾತೀತತೆ'ಯನ್ನು ವಿಸರ್ಜಿಸಲು ಹೊರಟಿದ್ದಾರೆ. ಜನತಾ ದಳ ಎಂಬ ಹೆಸರನ್ನು 'ಕಮಲ ದಳ' ಎಂದು ಬದಲಿಸಿಕೊಂಡರೆ ಒಳಿತು!' ಎಂದು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿದೆ.

ಬಿಜೆಪಿ ವಿರುದ್ಧವೂ ಕಿಡಿಕಾರಿರುವ ಕಾಂಗ್ರೆಸ್, ಇತ್ತ  ಬಿಜೆಪಿಯು ಜೆಡಿಎಸ್ ಪಕ್ಷವನ್ನು ಫ್ಯಾಮಿಲಿ ಪಾರ್ಟಿ ಎಂದು ಟೀಕಿಸುತ್ತಿತ್ತು. ಈಗ ಅದೇ ಫ್ಯಾಮಿಲಿಗೆ ನಾಲ್ಕು ಸೀಟು ಬಿಟ್ಟು ಕೊಟ್ಟು ಹೊಂದಾಣಿಕೆ ಮಾಡಿಕೊಳ್ಳುತ್ತಿರುವುದು ನಾಚಿಕೆಗೇಡು ಅಲ್ಲವೇ ಎಂದು ಪ್ರಶ್ನಿಸಿದೆ.

'ಜೆಡಿಎಸ್-ಬಿಜೆಪಿ ಮೈತ್ರಿ ಮಾತು ಕೇಳಿ ಮತಿಗೆಟ್ಟು ಕೂತ ಕಾಂಗ್ರೆಸ್, ಲೋಕಸಭೆ ಚುನಾವಣೆಯಲ್ಲಿ ಸಿಂಗಲ್ ಸೀಟಿಗೂ ದಿಕ್ಕಿಲ್ಲದ ಸ್ಥಿತಿ ನೆನೆದು ಕೈ ಕೈ ಪರಚಿಕೊಳ್ಳುತ್ತಿದೆ. ಪಕ್ಷ ವಿಸರ್ಜನೆ ಬಗ್ಗೆ  ಕುಮಾರಸ್ವಾಮಿ ಅವರು ನೀಡಿದ್ದ ಹೇಳಿಕೆಯನ್ನೇ ತಿರುಚುತ್ತಿರುವ ಕೂಗುಮಾರಿ, ಈಗ ಮಾರಿ ಉಳಿಸಿಕೊಳ್ಳಲು ಸತ್ಯ ತಿರುಚುತ್ತಿದೆ' ಎಂದು ಜೆಡಿಎಸ್ ತಿರುಗೇಟು ನೀಡಿದೆ.

ಇದೇ ವೇಳೆ, ಟ್ಯಾಕ್ಸಿ, ಆಟೋರಿಕ್ಷಾ ಚಾಲಕರು ಸೇರಿದಂತೆ ಒಂದು ವರ್ಗದ ಜನರ ಮೇಲೆ ಕಾಂಗ್ರೆಸ್ ಸರ್ಕಾರದ ಖಾತರಿಗಳು ನಕಾರಾತ್ಮಕ ಪರಿಣಾಮ ಬೀರುತ್ತಿವೆ ಎಂದು ಕುಮಾರಸ್ವಾಮಿ ಆರೋಪಿಸಿದರು.

'ರಾಜ್ಯ ಕಾಂಗ್ರೆಸ್ ಸರ್ಕಾರದ ಖಾತರಿಗಳ 'ಅಡ್ಡಪರಿಣಾಮ'ದ ತೀವ್ರತೆಯು ಜನರನ್ನು ಬಾಧಿಸುತ್ತಿದೆ. ಸರ್ಕಾರಿ ಸೌಲಭ್ಯಗಳ ಹಂಚಿಕೆಯಲ್ಲಿ ಅಸಮಾನತೆ ಮತ್ತು ಪಕ್ಷಪಾತವು ಅರಾಜಕತೆಯನ್ನು ಸೃಷ್ಟಿಸಿದೆ. ಅವೈಜ್ಞಾನಿಕ, ಅರೆಬೆಂದ ‘ಶಕ್ತಿ’ ಯೋಜನೆಯ ಫಲವಾಗಿ ಇಂದು ಖಾಸಗಿ ಸಂಚಾರ ವ್ಯವಸ್ಥೆ ನಾಶವಾಗಿದೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಪ್ರತಿಷ್ಠೆಯನ್ನು ಬದಿಗಿಟ್ಟು ಖಾಸಗಿ ಸಾರಿಗೆ ಸಂಸ್ಥೆಗಳ ಬೇಡಿಕೆಗಳನ್ನು ಸರ್ಕಾರ ಮಾನವೀಯತೆಯಿಂದ ಪರಿಗಣಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com