ಹೈದರಾಬಾದ್ ನಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ: ಸಿದ್ದರಾಮಯ್ಯ- ಹರಿಪ್ರಸಾದ್ ನಡುವಿನ ಭಿನ್ನಮತ ಶಮನ ಸಾಧ್ಯತೆ!

ಪುನರ್ ರಚನೆಗೊಂಡ ಕಾಂಗ್ರೆಸ್‌ನ ಕಾರ್ಯಕಾರಿ ಸಮಿತಿಯ (ಸಿಡಬ್ಲ್ಯುಸಿ) ಮೊದಲ ಸಭೆ ಇಂದು (ಶನಿವಾರ) ನಡೆಯಲಿದೆ. ಐದು ರಾಜ್ಯಗಳ ಮುಂಬರುವ ವಿಧಾನಸಭೆ ಚುನಾವಣೆ ಹಾಗೂ 2024ರ ಲೋಕಸಭಾ ಚುನಾವಣೆಯ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ.
ಸಿದ್ದರಾಮಯ್ಯ ಮತ್ತು ಬಿ.ಕೆ ಹರಿಪ್ರಸಾದ್
ಸಿದ್ದರಾಮಯ್ಯ ಮತ್ತು ಬಿ.ಕೆ ಹರಿಪ್ರಸಾದ್

ಹೈದರಾಬಾದ್‌: ಪುನರ್ ರಚನೆಗೊಂಡ ಕಾಂಗ್ರೆಸ್‌ನ ಕಾರ್ಯಕಾರಿ ಸಮಿತಿಯ (ಸಿಡಬ್ಲ್ಯುಸಿ) ಮೊದಲ ಸಭೆ ಇಂದು (ಶನಿವಾರ) ನಡೆಯಲಿದೆ. ಐದು ರಾಜ್ಯಗಳ ಮುಂಬರುವ ವಿಧಾನಸಭೆ ಚುನಾವಣೆ ಹಾಗೂ 2024ರ ಲೋಕಸಭಾ ಚುನಾವಣೆಯ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ.

ಹೈದರಾಬಾದ್ ನಲ್ಲಿ ನಡೆಯುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ  ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕದ ಭಿನ್ನಮತ ಬಗೆಹರಿಸುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಹಿನ್ನೆಲೆಯಲ್ಲಿ ಶೋಕಾಸ್ ನೋಟಿಸ್‌ ಪಡೆದಿರುವ  ಕಾಂಗ್ರೆಸ್ ಎಂಎಲ್ ಸಿ ಹರಿಪ್ರಸಾದ್‌ ಕೂಡ ಹೈದರಾಬಾದ್‌ಗೆ ತೆರಳಿದ್ದಾರೆ. ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪ್ರಾಥಮಿಕವಾಗಿ ಮುಂಬರುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಕಾರ್ಯತಂತ್ರಗಳ ಕುರಿತು ಚರ್ಚೆ ನಡೆಯಲಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತಾವು ಮಾಡಿರುವ ಟೀಕೆಗಳ ಕುರಿತು ಉನ್ನತ ನಾಯಕರಿಗೆ ಹರಿಪ್ರಸಾದ್ ಸ್ಪಷ್ಟನೆ ನೀಡಲಿದ್ದಾರೆ ಎಂದು ಮೂಲಗಳು ವಿವರಿಸಿವೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಸಂಸದರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಜಂಟಿಯಾಗಿ ಸಭೆಯ ನೇತೃತ್ವ ವಹಿಸಿದ್ದಾರೆ.

ಕಾಂಗ್ರೆಸ್‌ನ ಕಾರ್ಯಕಾರಿ ಸಮಿತಿಯ ಖಾಯಂ ಸದಸ್ಯರಾದ ಹರಿಪ್ರಸಾದ್‌, ಕೇಂದ್ರದ ಮಾಜಿ ಸಚಿವ ಎಂ.ವೀರಪ್ಪ ಮೊಯ್ಲಿ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ. ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ನಾಲ್ವರು ಮುಖ್ಯಮಂತ್ರಿಗಳಿಗೆ ಪಕ್ಷದ ಹೈಕಮಾಂಡ್ ಆಹ್ವಾನ ನೀಡಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಆಹ್ವಾನ ಬಂದಿದೆ. ಡಿಸಿಎಂ ಹಾಗೂ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗಲೇ ಹೈದರಾಬಾದ್‌ಗೆ ತೆರಳಿದ್ದಾರೆ.

ಸಿದ್ದರಾಮಯ್ಯ ಹಾಗೂ ಹರಿಪ್ರಸಾದ್ ನಡುವಿನ ಮನಸ್ತಾಪಕ್ಕೆ ತೆರೆ ಎಳೆಯಲು ಹೈಕಮಾಂಡ್ ಅವರ ಜತೆ ಚರ್ಚೆ ನಡೆಸಲಿದೆ ಎಂದು ಮೂಲಗಳು ವಿವರಿಸಿವೆ. ಮೂಲಗಳ ಪ್ರಕಾರ ಹರಿಪ್ರಸಾದ್ ಕ್ಯಾಬಿನೆಟ್ ಸಚಿವರಾಗುವ ಮಹತ್ವಾಕಾಂಕ್ಷೆಗೆ ಸಿದ್ದರಾಮಯ್ಯ ಅವಕಾಶ ನೀಡಲಿಲ್ಲ ಎಂದು ಹೇಳಿದ್ದಾರೆ. ಹರಿಪ್ರಸಾದ್, ಅಂದಿನಿಂದ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಸಿದ್ದರಾಮಯ್ಯ ನಾಯಕತ್ವವನ್ನು ಪ್ರಶ್ನಿಸಿ ಹೇಳಿಕೆಗಳನ್ನು ನೀಡುತ್ತಾ ಕಾಂಗ್ರೆಸ್ ಸರ್ಕಾರಕ್ಕೆ ತೀವ್ರ ಮುಖಭಂಗ ಉಂಟುಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com