ಬಿಜೆಪಿ-ಜೆಡಿಎಸ್ ಮೈತ್ರಿ, ಸೀಟು ಹಂಚಿಕೆ ಕುರಿತು ಪ್ರಧಾನಿ ಮೋದಿಯೊಂದಿಗೆ ಮಾತನಾಡಿಲ್ಲ: ಹೆಚ್'ಡಿ.ದೇವೇಗೌಡ

2024ರ ಲೋಕಸಭೆ ಚುನಾವಣೆಗೆ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಹಾಗೂ ಸೀಟು ಹಂಚಿಕೆ ಕುರಿತಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಜೊತೆ ಇನ್ನೂ ಮಾತನಾಡಿಲ್ಲ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡ ಬುಧವಾರ ಸ್ಪಷ್ಟಪಡಿಸಿದ್ದಾರೆ.
ದೇವೇಗೌಡ ಹಾಗೂ ಹೆಚ್'ಡಿ.ಕುಮಾರಸ್ವಾಮಿ.
ದೇವೇಗೌಡ ಹಾಗೂ ಹೆಚ್'ಡಿ.ಕುಮಾರಸ್ವಾಮಿ.

ಬೆಂಗಳೂರು: 2024ರ ಲೋಕಸಭೆ ಚುನಾವಣೆಗೆ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಹಾಗೂ ಸೀಟು ಹಂಚಿಕೆ ಕುರಿತಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಜೊತೆ ಇನ್ನೂ ಮಾತನಾಡಿಲ್ಲ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡ ಬುಧವಾರ ಸ್ಪಷ್ಟಪಡಿಸಿದ್ದಾರೆ.

ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ, ಸೀಟು ಹಂಚಿಕೆ ಕುರಿತು ಪ್ರಧಾನಿ ಅವರೊಂದಿಗಿನ ಇನ್ನೂ ಮಾತುಕತೆ ನಡೆದಿಲ್ಲ. ಆದರೆ ನಾನು ಅಮಿತ್ ಶಾ ಅವರನ್ನು ಭೇಟಿ ಮಾಡಿ, ಕರ್ನಾಟಕದ ಪರಿಸ್ಥಿತಿ ಬಗ್ಗೆ ಮಾತನಾಡಿದ್ದೇನೆ. ಪಕ್ಷದ ಸಭೆಗಳಲ್ಲಿ ಏನಾಯಿತು ಮತ್ತು ಏನಾಗುತ್ತಿದೆ ಎಂಬುದರ ಕುರಿತು ವಿವರಿಸಿದ್ದೇವೆ. ನಮ್ಮ ಪಕ್ಷ ಯಾವುದೇ ಸಮುದಾಯವನ್ನು ನಿರಾಸೆಗೊಳಿಸಿಲ್ಲ ಎಂದು ಹೇಳಿದರು.

ನಾನು ಬಿಜೆಪಿ ಜೊತೆಗಿನ ಮೈತ್ರಿಗೆ ಒಪ್ಪಿ ಅನುಮತಿ ನೀಡಿದ್ದೇನೆ. ನಮ್ಮ ಪಕ್ಷದ ಎಲ್ಲಾ 19 ಶಾಸಕರು ಮತ್ತು ಎಂಟು ಎಂಎಲ್‌ಸಿಗಳ ಒಪ್ಪಿಗೆಯೊಂದಿಗೆ ನಾವು ಈ ನಿರ್ಧಾರಕ್ಕೆ ಬಂದಿದ್ದೇವೆ ಎಂದು ತಿಳಿಸಿದರು.

ಇದೇ ವೇಳೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಪರೋಕ್ಷವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಿಎಂ ಸಿದ್ದರಾಮಯ್ಯ ಅವರೇ ಕಾರಣ ಎಂದೂ ದೂಷಿಸಿದರು.

2019 ರಲ್ಲಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಅವರು ಉರುಳಿಸಿದರು. "17 ಶಾಸಕರನ್ನು ಮುಂಬೈಗೆ ಕಳುಹಿಸಿದ್ದು ಯಾರು?... ಬಿಜೆಪಿ ಜೊತೆಗೆ ಮೈತ್ರಿ ಯಾವ ಕಾರಣಕ್ಕೆ ಮಾಡಿಕೊಂಡೆವು ಎಂದು ಎಲ್ಲರೂ ಪ್ರಶ್ನಿಸುತ್ತಿದ್ದಾರೆ. ರಾಜ್ಯದಲ್ಲಿ ಹಲವಾರೂ ತಪ್ಪು ಸಂದೇಶಗಳನ್ನು ರವಾನಿಸಲಾಗುತ್ತಿದೆ. ಆದರೆ. ನಮ್ಮ ಪಕ್ಷದ ಹಿತದೃಷ್ಟಿಯಿಂದ ಈ ನಿರ್ಧಾರವನ್ನು ಕೈಗೊಂಡಿದ್ದೇವೆ. ಇದು ಅವಕಾಶವಾದಿ ರಾಜಕಾರಣವಲ್ಲ, ಆದರೆ. ನಾವು ಪಕ್ಷವನ್ನು ಉಳಿಸಲು ಹೋರಾಡುತ್ತಿದ್ದೇವೆ ಎಂದು ತಿಳಿಸಿದರು.

ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳದ ಒಂದು ಪಕ್ಷವನ್ನು ನನಗೆ ತೋರಿಸಿ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯನ್ನು ಸೋಲಿಸಲು ಕೆಲವು ಎಡ ಪಕ್ಷದ ನಾಯಕರು ಬಿಜೆಪಿಯೊಂದಿಗೆ ಕೆಲಸ ಮಾಡುತ್ತಿದ್ದಾರೆಂಬುದು ನಮಗೆ ತಿಳಿದಿದೆ. ಕಾಂಗ್ರೆಸ್ ನಾಯಕ ಎಕೆ ಆಂಟನಿ ಅವರ ಮಗ ಬಿಜೆಪಿಗೆ ಸಿದ್ದಾರೆ. ಈ ಮೈತ್ರಿಯು ನಮ್ಮ ಪಕ್ಷದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದಿಲ್ಲ. ಏಕೆಂದರೆ ಯಾವುದೇ ನಾಯಕರೂ ಪಕ್ಷವನ್ನು ತೊರೆಯುವುದಿಲ್ಲ.

ದೇವದುರ್ಗ ಶಾಸಕಿ ಕರೆಮ್ಮ ನಾಯಕ್ ಅವರು ನನಗೆ ಕರೆ ಮಾಡಿದ್ದರು. ಪಕ್ಷದಿಂದ ಯಾರಿಂದಲೂ ನನ್ನನ್ನು ದೂರ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಆದರೂ ಕೆಲವರು ಗೊಂದಲ ಸೃಷ್ಟಿಸಲು ಯತ್ನಿಸುತ್ತಿದ್ದಾರೆಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಹೆಚ್'ಡಿ.ಕುಮಾರಸ್ವಾಮಿಯವರು ಮಾತನಾಡಿ, ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಲಾಗಿತ್ತು. ನಂತರ ಸರ್ಕಾರವನ್ನು ಉರುಳಿಸಲಾಗಿತ್ತು. ಅಂದಿನಿಂದಲೂ ಕಾಂಗ್ರೆಸ್ ನಮ್ಮ ಪಕ್ಷವನ್ನು ಮುಗಿಸಲು ಪ್ರಯತ್ನಿಸುತ್ತಿದೆ. ಹೀಗಾಗಿಯೇ ನಾವು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡೆವು ಎಂದು ಹೇಳಿದರು.

ಸಿದ್ದರಾಮಯ್ಯ ಜೆಡಿಎಸ್ ಅನ್ನು ನಾಶಮಾಡಲು ಬಯಸಿದ್ದರು. ಬಿಜೆಪಿ ಬೆಂಬಲದೊಂದಿಗೆ ಸರ್ಕಾರ ರಚಿಸಲು ಪ್ರಯತ್ನಿಸಿದ್ದರು, ಇದಕ್ಕಾಗಿ ಎಂ.ವೆಂಕಯ್ಯ ನಾಯ್ಡು ಅವರನ್ನೂ ಸಂಪರ್ಕಿಸಿದ್ದರು. ಇದರ ಬಗ್ಗೆ ನನ್ನ ಬಳಿ ಸಾಕ್ಷ್ಯಗಳಿವೆ ಎಂದರು.

2018ರಲ್ಲಿ ಮೈತ್ರಿಗಾಗಿ ಕಾಂಗ್ರೆಸ್ ಜೆಡಿಎಸ್ ಅನ್ನು ಸಂಪರ್ಕಿಸಿದಾಗ ಅದೇ ದಿನ ಅಮಿತ್ ಶಾ ಅವರಿಂದರೂ ನಮಗೆ ಕರೆ ಬಂದಿತ್ತು. ಅಂದು ನಾವು ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿದ್ದರೆ, 5 ವರ್ಷ ಸಿಎಂ ಆಗಿರುತ್ತಿದ್ದೆ. ಆದರೆ, ಗೌಡರ ವರ್ಚಸ್ಸು ಹಾಗೂ ಪಕ್ಷಕ್ಕಾಗಿ ಕಾಂಗ್ರೆಸ್ ಜೊತೆಗೆ ಕೈಜೋಡಿಸಿದ್ದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com